ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ಕಾವೇರಿ ಪರಿಶೀಲನೆಗೆ ತಂಡ: ಮುಖ್ಯಮಂತ್ರಿಗೆ ದಿನೇಶ್‌ ಗೂಳಿಗೌಡ ಪತ್ರ

Published 28 ಮೇ 2024, 17:38 IST
Last Updated 28 ಮೇ 2024, 17:38 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿಗೆ ಕಲ್ಮಶ ನೀರು ಮಿಶ್ರಣವಾಗುತ್ತಿದ್ದು, ಅದೇ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ ಎನ್ನಲಾಗಿದ್ದು, ಪರಿಶೀಲನೆಗೆ ತಾಂತ್ರಿಕ ಪರಿಣಿತರ ತನಿಖಾ ತಂಡ ರಚನೆ ಮಾಡಬೇಕು. ತಂಡದ ವರದಿ ಆಧಾರದಲ್ಲಿ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಈ ಕುರಿತು ಗಮನಹರಿಸಬೇಕು. ಪರಿಸರ, ಕೈಗಾರಿಕೆ, ನೀರಾವರಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ತಜ್ಞರ  ಸಮಿತಿಯನ್ನು ರಚಿಸಬೇಕು ಎಂದು ಕೋರಿದ್ದಾರೆ. 

ಬೆಂಗಳೂರು ನಗರಕ್ಕೆ ಕಾವೇರಿ ನದಿಯಿಂದಲೇ ಹೆಚ್ಚಿನ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರು ಪೂರೈಕೆಗಾಗಿ 19 ಟಿಎಂಸಿ ಅಡಿ ನೀರು ಬಳಸಲು ಸುಪ್ರೀಂಕೋರ್ಟ್‌ ಸಹ ಅನುಮತಿ ನೀಡಿದೆ. ಪ್ರಸ್ತುತ ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ ಮೂಲಕ ನಿತ್ಯ 144 ಕೋಟಿ ಲೀಟರ್ ನೀರು ಪೂರೈಸುತ್ತಿದೆ. ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಯ ಜನರಿಗೂ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ.

ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ,‌ ನಂಜನಗೂಡು, ಟಿ.ನರಸೀಪುರ, ಕೊಳ್ಳೇಗಾಲ ಮುಂತಾದ ಪ್ರಮುಖ ನಗರ-ಪಟ್ಟಣಗಳ ಭಾಗದಲ್ಲಿ ಹಲವು ಕಾರ್ಖಾನೆಗಳ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ‌ ನೇರವಾಗಿ ನದಿಗೆ ಹರಿಯ ಬೀಡಲಾಗುತ್ತಿದೆ. ಒಳಚರಂಡಿ ನೀರಿನಿಂದಲೂ ಕಲುಷಿತಗೊಂಡು ಮಲಿನಗೊಳ್ಳುತ್ತಿದೆ. ಇದು ಜಲಚರಗಳ ಸಾವಿಗೂ ಕಾರಣವಾಗಿದೆ. ಹಲವು ಕೈಗಾರಿಕೆಗಳ ತ್ಯಾಜ್ಯದಿಂದ ನದಿಯು ನೈಸರ್ಗಿಕ ಗುಣ ಕಳೆದುಕೊಳ್ಳುತ್ತಿದ್ದು, ಅಪಾಯಕಾರಿಯಾಗುತ್ತಿದೆ ಎಂದಿದ್ದಾರೆ.  

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2023ರಲ್ಲಿ ನದಿಗಳ ಮಾಲಿನ್ಯದ ಬಗ್ಗೆ ಬಿಡುಗಡೆ ಮಾಡಿದ ವರದಿಯಲ್ಲಿ ಕಾವೇರಿ ಕೂಡ ಸೇರಿದೆ. ಸರ್ಕಾರ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಆರೋಗ್ಯವನ್ನು ಕಾಪಾಡಬೇಕು. ನದಿ ನೀರು ಸ್ವಚ್ಛವಾಗಿ ಜಲಚರಗಳು, ನದಿ ನೀರು ಅವಲಂಬಿತ ಪ್ರದೇಶಗಳ ಜನರ ಆರೋಗ್ಯ ಕೂಡ ಸುಧಾರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT