ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ಅಭಿವೃದ್ಧಿ: ದೇಶಕ್ಕೆ ಕರ್ನಾಟಕ ಮಾದರಿ: ಮಹೇಂದ್ರನಾಥ್ ಪಾಂಡೆ

Last Updated 8 ಮಾರ್ಚ್ 2020, 21:50 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ವೇಗವಾಗಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಕೌಶಲ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿರುವ ಕರ್ನಾಟಕವು ದೇಶಕ್ಕೆ ಮಾದರಿ ಎಂದು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲ ಸಚಿವ ಮಹೇಂದ್ರನಾಥ್ ಪಾಂಡೆ ಹೇಳಿದರು.

ಐಐಎಂಬಿಯಲ್ಲಿ ಭಾನುವಾರ ನಡೆದ ‘ಮಹಾತ್ಮಗಾಂಧಿ ರಾಷ್ಟ್ರೀಯ ಫೆಲೋಷಿಪ್ – ರಾಷ್ಟ್ರೀಯ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.

‘ಪ್ರಧಾನಿ ಮೋದಿಯವರ ದೂರದೃಷ್ಟಿಯ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಹಲವು ವರ್ಷಗಳ ಪ್ರಯತ್ನದ ಫಲವಾಗಿ ದೇಶ ಇಂದು ವಿಶ್ವದ ಕೌಶಲ ಅಭಿವೃದ್ಧಿ ರಾಜಧಾನಿಯಾಗಿ ಹೊರಹೊಮ್ಮಿದೆ. ಈ ದಿಸೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದರು. ಈ ದಶಕ ಕೌಶಲ ದಶಕವಾಗಿ ಇತಿಹಾಸದಲ್ಲಿ ದಾಖಲಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಕೌಶಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಪ್ರವೀಣ್ ಕುಮಾರ್, ‘ಪೈಪೋಟಿಯ ಯುಗದಲ್ಲಿ ಯುವ ಸಂಪನ್ಮೂಲ ಕೌಶಲಪೂರ್ಣವಾಗಿದ್ದಲ್ಲಿ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಕೌಶಲ ಅಭಿವೃದ್ಧಿ ಯೋಜನೆಯನ್ನು ತಳಮಟ್ಟಕ್ಕೆ ಕೊಂಡೊಯ್ಯಲು ಮಹಾತ್ಮಗಾಂಧಿ ರಾಷ್ಟ್ರೀಯ ಫೆಲೋಷಿಪ್ ನೀಡುವ ಮೂಲಕ ಜಿಲ್ಲಾ ಕೌಶಲ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ’ ಎಂದರು. ಕೇಂದ್ರ ಕೌಶಲ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜ್ಯೋತಿಕಾ ಪಟಾಣ್ಕರ್, ‘ಕರ್ನಾಟಕದ 16 ಜಿಲ್ಲೆಗಳು ಸೇರಿದಂತೆ ದೇಶದ 6 ರಾಜ್ಯಗಳ 75 ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಆರಂಭವಾಗಲಿದ್ದು, ಮುಂದೆ ದೇಶದಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪದವಿಯಲ್ಲಿ ಶೇ 50ರಷ್ಟು ಅಂಕ ಗಳಿಸಿದವರು ಫೆಲೋಷಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಜಿಲ್ಲೆಗೆ ಒಬ್ಬರಂತೆ ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದರು. ರಾಜ್ಯ ಕೌಶಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್, ಐಐಎಂಬಿ ಡೀನ್ ಪ್ರೊ.ಗೋಪಾಲ್ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT