ಸೋಮವಾರ, ಜುಲೈ 4, 2022
22 °C

ತಂತ್ರಜ್ಞಾನ: ಯುವಕರ ಆರೋಗ್ಯದಲ್ಲಿ ಪರಿಣಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ತಂತ್ರಜ್ಞಾನ ಒತ್ತಡಗಳು ಇಂದಿನ ದಿನಗಳಲ್ಲಿ ಜನರಲ್ಲಿ ವಿಶೇಷವಾಗಿ, ಯುವಕರ ಆರೋಗ್ಯದಲ್ಲಿ ನಿಷೇಧಾತ್ಮಕ ಬದಲಾವಣೆಗೆ ಕಾರಣವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿರುವ ಐದು ದಿನಗಳ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕಾರ್ಯಾಗಾರದ ನಾಲ್ಕನೇ ದಿನ ‘ಡಿಜಿಟಲ್ ಶಿಕ್ಷಣ ಹಾಗೂ ತಂತ್ರಜ್ಞಾನದ ಏಕೀಕರಣ’ ವಿಷಯದ ಕುರಿತು ಅವರು ಮಾತನಾಡಿದರು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ ಮಾತನಾಡಿ, ‘ಹೊಸ ನೀತಿಯಲ್ಲಿ ಡಿಜಿಟಲ್ ಶಿಕ್ಷಣ ಹಾಗೂ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಗಮನವಹಿಸಿರುವುದು ನಿಜಕ್ಕೂ ಉತ್ತಮ ವಿಚಾರ. ಡಿಜಿಟಲ್ ಶಿಕ್ಷಣ ಹಾಗೂ ತಂತ್ರಜ್ಞಾನದ ಕೌಶಲದ ಶಿಕ್ಷಣ ಇಂದಿನ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ’ ಎಂದರು.

ಕರ್ನಾಟಕ ಆವಿಷ್ಕಾರ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಚ್.ಪಿ. ಖಿಂಚಾ, ‘ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸಲು ವಿವಿಧ ಬಗೆಯ ಡಿಜಿಟಲ್ ಕೌಶಲಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಇ- ಕಲಿಕೆಯ ಮಾಡ್ಯೂಲ್‌ಗಳನ್ನು ಸಿದ್ಧಪಡಿಸಿ ದೇಶದ ಎಲ್ಲ ವಿದ್ಯಾರ್ಥಿಗಳಿಗೂ ನೀಡುವುದರಿಂದ ಹೊಸ ಶಿಕ್ಷಣ ನೀತಿಗೆ ಅರ್ಥಪೂರ್ಣತೆ ಕಂಡುಕೊಳ್ಳಬಹುದು’ ಎಂದರು.

ಬೆಂಗಳೂರು ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಚ್.ಎ. ರಂಗನಾಥ್, ‘ಹೊಸ ನೀತಿಯಲ್ಲಿ ಅಡಕವಾಗಿರುವ ಬದಲಾವಣೆಗಳು ಕ್ರಮಬದ್ಧವಾಗಿ ಅನುಷ್ಠಾನವಾದರೆ ಮಾತ್ರ ಶಿಕ್ಷಣದಲ್ಲಿ ಯಶಸ್ಸು ಕಾಣಬಹುದು‘ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಪ್ರೊ. ಕೆ.ಆರ್‌. ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು