ಸೋಮವಾರ, ಆಗಸ್ಟ್ 15, 2022
20 °C

ದೇವಸ್ಥಾನ ಹುಂಡಿ ಹಣ ಕದ್ದಿದ್ದವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿರುವ ದೇವಸ್ಥಾನವೊಂದರ ಹುಂಡಿಯಲ್ಲಿದ್ದ ಹಣ ಕದ್ದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಕರಿಹೋಬನಹಳ್ಳಿಯ ಪ್ರವೀಣ್‌ಕುಮಾರ್ ಅಲಿಯಾಸ್ ವಿಷ್ಣು (20) ಹಾಗೂ ಲಗ್ಗೆರೆ ರಾಜೇಶ್ವರಿನಗರದ ಎಂ.ಸಿ. ಸಂದೀಪ್ (20) ಬಂಧಿತರು. ಅವರಿಂದ ₹ 3.50 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, 1 ಆಟೊ ಹಾಗೂ ₹ 1,425 ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಂಜೀವಿನಿ ನಗರದ ಹೆಗ್ಗನಹಳ್ಳಿ ಬಳಿ ಇರುವ ಸಿದ್ಧಿ ವಿನಾಯಕ ದೇವಸ್ಥಾನದ ಬೀಗ ಮುರಿದು ನ .24ರಂದು ರಾತ್ರಿ ಒಳಗೆ ನುಗ್ಗಿದ್ದ ಆರೋಪಿಗಳು, ಹುಂಡಿ ಬೀಗ ಒಡೆದು ಅದರಲ್ಲಿದ್ದ ಹಣ ಕದ್ದಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು’ ಎಂದರು.

‘ದ್ವಿಚಕ್ರ ವಾಹನ ಸೇರಿದಂತೆ ಹಲವು ಬಗೆಯ ವಾಹನಗಳನ್ನು ಆರೋಪಿಗಳು ಕಳವು ಮಾಡುತ್ತಿದ್ದರು. ಇದೇ 2ರಂದು ಎನ್‌ಟಿಟಿಎಫ್ ವೃತ್ತದ ಬಳಿ ಕದ್ದು ಆಟೊದಲ್ಲಿ ಆರೋಪಿಗಳು ಹೊರಟಿದ್ದರು. ಅವರ ಬಗ್ಗೆ ಅನುಮಾನಗೊಂಡ ಗಸ್ತಿನಲ್ಲಿದ್ದ ಸಿಬ್ಬಂದಿ, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ’ ಎಂದೂ ಹೇಳಿದರು.

‘ವೃತ್ತಿಯಲ್ಲಿ ಆಟೊ ಚಾಲಕರಾಗಿದ್ದ ಆರೋಪಿಗಳು, ದುಶ್ಚಟಗಳಿಗೆ ಹಣ ಹೊಂದಿಸಲು ಕಳ್ಳತನ ಮಾಡಲಾರಂಭಿಸಿದ್ದರು. ಸೋಲದೇವನಹಳ್ಳಿ, ಚಂದ್ರಾ ಲೇಔಟ್ ಹಾಗೂ ಹಾಸನ ಜಿಲ್ಲೆಯಲ್ಲೂ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.