ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್ಸ್‌: 10 ಸಾವಿರ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

ಶೇ 85ರಷ್ಟು ಕಾರ್ಮಿಕರಿಂದ ಬಲವಂತದ ರಾಜೀನಾಮೆ ಪಡೆದ ಆಡಳಿತ ಮಂಡಳಿ
Last Updated 21 ಮಾರ್ಚ್ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಕೆಲಸಕ್ಕಿದ್ದ 10 ಸಾವಿರಕ್ಕೂ ಅಧಿಕ ಕಾರ್ಮಿಕರು ಕೋವಿಡ್‌ ಸೋಂಕು ಹರಡುವಿಕೆ ಆರಂಭವಾದ ಬಳಿಕ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಕೆಲವರ ಬಳಿ ಬಲವಂತದಿಂದ ರಾಜೀನಾಮೆ ಪಡೆಯಲಾಗಿದೆ. ಇನ್ನು ಕೆಲವರಿಗೆ ನ್ಯಾಯಯುತ ಪರಿಹಾರಗಳನ್ನು ನೀಡದೆಯೇ ಕೆಲಸದಿಂದ ಕಿತ್ತುಹಾಕಲಾಗಿದೆ.

ಗಾರ್ಮೆಂಟ್ ಆ್ಯಂಡ್‌ ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ ಆ್ಯಂಡ್‌ ಆಲ್ಟರ್ನೇಟಿವ್‌ ಲಾ ಫೋರಮ್‌ ನಡೆಸಿರುವ‘ಬಲವಂತದ ರಾಜೀನಾಮೆಗಳು, ಕಪಟದಿಂದ ಕಾರ್ಖಾನೆ ಮುಚ್ಚುವಿಕೆ’–ಬೆಂಗಳೂರಿನಲ್ಲಿ ಕೋವಿಡ್‌ 19 ಸಂದರ್ಭದಲ್ಲಿ ಗಾರ್ಮೆಂಟ್ಸ್‌ ಕಾರ್ಮಿಕರಿಗಾದ ನಷ್ಟಗಳು– ಒಂದು ಅಧ್ಯಯನ’ ವರದಿ ಈ ಬಗ್ಗೆ ಬೆಳಕು ಚೆಲ್ಲಿದೆ.

ಈ ಅವಧಿಯಲ್ಲಿ ಕೆಲಸ ಕಳೆದುಕೊಂಡ ಶೇ 85ರಷ್ಟು ಕಾರ್ಮಿಕರಿಂದ ಕಾರ್ಖಾನೆಗಳ ಆಡಳಿತ ಮಂಡಳಿಯು ಬಲವಂತದ ರಾಜೀನಾಮೆ ಪಡೆದಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಕೋವಿಡ್‌ನಿಂದ ಎದುರಾದ ಸನ್ನಿವೇಶವನ್ನು ಗಾರ್ಮೆಂಟ್ಸ್‌ ಕಾರ್ಖಾನೆಗಳ ಮಾಲೀಕರು ಕಾರ್ಮಿಕರಿಗೆ ನೀಡಿದ್ದ ಆರ್ಥಿಕ, ಕಾನೂನಾತ್ಮಕ ಹಾಗೂ ಹಣಕಾಸಿಗೆ ಸಂಬಂಧಿಸಿದ ಬದ್ಧತೆಗಳಿಂದ ಹಾಗೂ ಸ್ವಯಂ ಪ್ರಕಟಿಸಿದ್ದ ವಾಗ್ದಾನಗಳಿಂದ ನುಣುಚಿಕೊಳ್ಳಲು ಬಳಸಿಕೊಂಡರು. ಹಣಕಾಸಿನ ಪರಿಹಾರ ನೀಡುವ ಬದ್ಧತೆಯಿಂದ ತಪ್ಪಿಸಿಕೊಳ್ಳಲು ಕಾರ್ಖಾನೆಗಳು ಕಾರ್ಮಿಕರಿಗೆ ಕಿರುಕುಳ ನೀಡುವ ವಿಭಿನ್ನ ತಂತ್ರಗಾರಿಕೆಗಳನ್ನು ಅನುಸರಿಸಿದವು. ಸಂಬಳ ಕಡಿತ, ಸಾರಿಗೆ ಸೌಕರ್ಯ ನಿರಾಕರಣೆ, ಯಾವೆಲ್ಲ ಕಾರ್ಮಿಕರು ಸ್ವಯಂ ರಾಜೀನಾಮೆ ನೀಡುವುದಿಲ್ಲವೋ ಅವರ ಭವಿಷ್ಯನಿಧಿಯ ಹಾಗೂ ಗ್ರಾಚ್ಯುಟಿಯ ಮೊತ್ತವನ್ನು ಕಡಿತ ಮಾಡಲಾಗುತ್ತದೆ ಎಂಬ ಭಯ ಹಬ್ಬಿಸುವಿಕೆ ಮುಂತಾದ ತಂತ್ರಗಳ ಮೂಲಕ ಕಾರ್ಮಿಕರ ಮೇಲೆ ಒತ್ತಡ ಹೇರಲಾಯಿತು ಎಂದೂ ಅಧ್ಯಯನ ಬೆಳಕು ಚೆಲ್ಲಿದೆ.

1947ರ ಕೈಗಾರಿಕಾ ವಿವಾದ (ಪರಿಹಾರ) ಕಾಯ್ದೆಯ ನಿಯಮಗಳ ಪಾಲನೆಯಲ್ಲಿ ಕಾರ್ಖಾನೆಗಳು ಸಂಪೂರ್ಣ ವಿಫಲವಾಗಿವೆ. ಈ ನಿಯಮಗಳ ಪ್ರಕಾರ ಕಾರ್ಮಿಕ ಕಾರ್ಖಾನೆಯಲ್ಲಿ ಕೆಲಸ ಮಾಡಿದಷ್ಟು ವರ್ಷಗಳಿಗೆ ಕನಿಷ್ಠ ತಲಾ 15 ದಿನಗಳ ಸರಾಸರಿ ವೇತನ ನೀಡಬೇಕು. 100ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಯು ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಮುನ್ನ ಕನಿಷ್ಠ ಮೂರು ತಿಂಗಳು ಮುನ್ನ ಲಿಖಿತ ನೋಟಿಸ್‌ ಜಾರಿಗೊಳಿಸಬೇಕು ಅಥವಾ ನೋಟಿಸ್‌ ಅವಧಿಯ ಪೂರ್ಣ ವೇತನ ಪಾವತಿಸಬೇಕು ಎಂದು ಈ ನಿಯಮಗಳು ಹೇಳುತ್ತವೆ.

ಗಾರ್ಮೆಂಟ್ಸ್‌ ಕಾರ್ಮಿಕರನ್ನು ಎರಡು ಸುತ್ತುಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ ಈ ಅಧ್ಯಯನ ನಡೆಸಲಾಗಿದೆ. ಬಹುತೇಕ ತಮ್ಮ ಕುಟುಂಬ ನಿರ್ವಹಣೆಗೆ ಬೇರೆ ಮಾರ್ಗವಿಲ್ಲದೇ ಭವಿಷ್ಯ ನಿಧಿಯ ಹಣವನ್ನು ಹಿಂಪಡೆಯುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ. ಕೋವಿಡ್‌ ಹರಡುತ್ತಿದ್ದ ಅವಧಿಯಲ್ಲಿ ಮನೆ ಬಾಡಿಗೆ ಕಟ್ಟಲು, ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಪಡೆದ ಸಾಲ ತೀರಿಸಲು ಬಹಳ ಸಂಕಷ್ಟ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ತಕ್ಷಣ ಹಣಕಾಸಿನ ಪರಿಹಾರ ಪಡೆಯುವ ಉದ್ದೇಶದಿಂದ ರಾಜೀನಾಮೆ ನೀಡಿದ್ದಾಗಿ ಹೇಳಿಕೊಂಡಿರುವ ಶೇ 35 ರಷ್ಟು ಮಂದಿ, ತಮ್ಮನ್ನು ಕೆಲಸದಿಂದ ತೆಗೆದುಹಾಕಿದಾಗ ಅಥವಾ ಕಂಪನಿ ಮುಚ್ಚಿದಾಗ ನೀಡಬೇಕಾದ ಪರಿಹಾರ ಇನ್ನೂ ಪೂರ್ತಿಯಾಗಿ ಕೈಸೇರಿಲ್ಲ ಎಂದು ತಿಳಿಸಿದ್ದಾರೆ.

ಅಂಕಿಅಂಶ

96% – ಕಾರ್ಮಿಕರು ತಮ್ಮ ಕುಟುಂಬದ ವರಮಾನ ಲಾಕ್‌ಡೌನ್‌ನಿಂದಾಗಿ ಕುಸಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ

47% – ಕಾರ್ಮಿಕರು ತಮ್ಮ ವರಮಾನ ಶೇ 30ರಿಂದ ಶೇ 50ರಷ್ಟು ಕುಸಿತ ಕಂಡಿದೆ ಎಂದು ಹೇಳಿಕೊಂಡಿದ್ದಾರೆ

63% – ಕಾರ್ಮಿಕರು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವಷ್ಟು ವೇತನ ಲಾಕ್‌ಡೌನ್‌ ಅವಧಿಯಲ್ಲಿ ತಮಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT