ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಟೆಂಡರ್ ಶ್ಯೂರ್ ಕಾಮಗಾರಿ, ವಾಹನ ಸವಾರರ ಪರದಾಟ

ಗಾಂಧಿನಗರ: ಸಂಚಾರ ಕಿರಿಕಿರಿ ಮುಕ್ತಿಗೆ ಕಾಯಬೇಕು ಇನ್ನೆರಡು ತಿಂಗಳು
Last Updated 11 ಅಕ್ಟೋಬರ್ 2020, 20:53 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಗಾಂಧಿನಗರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆ ಅಭಿವೃದ್ಧಿಪಡಿಸಲು ನಡೆಯುತ್ತಿರುವ ಎರಡನೇ ಹಂತದ ಟೆಂಡರ್ ಶ್ಯೂರ್ ಕಾಮಗಾರಿಗೆ ಎರಡು ವರ್ಷಗಳಿಂದ ಮುಕ್ತಿ ದೊರಕಿಲ್ಲ. ಕುಂಟುತ್ತಾ ಸಾಗಿರುವ ಕಾಮಗಾರಿಯಿಂದ ಇಡೀ ಗಾಂಧಿನಗರದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮೆಜೆಸ್ಟಿಕ್,‌ ಗಾಂಧಿನಗರ ಎಂದರೆ ಮೊದಲೇ ಕಿಷ್ಕಿಂಧೆಯಂತಹ ಪ್ರದೇಶ. ಕಿರಿದಾದ ರಸ್ತೆಗಳು, ಗಲ್ಲಿಗಳೇ ಹೆಚ್ಚು. ನಗರದ ಜನನಿಬಿಡ ಪ್ರದೇಶಗಳಲ್ಲಿ ಇದು ಮೊದಲನೇ ಸ್ಥಾನದಲ್ಲಿದೆ. ಹೈಟೆಕ್ ಪಾದಚಾರಿ ಮಾರ್ಗ, ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಬಿಬಿಎಂಪಿ ಟೆಂಡರ್ ಶ್ಯೂರ್ ಯೋಜನೆಯಡಿ ಕೈಗೆತ್ತಿಕೊಂಡಿದೆ.

5 ಮುಖ್ಯ ರಸ್ತೆಗಳು, 18 ಕ್ರಾಸ್ ರಸ್ತೆಗಳನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ಕೈಗೊಂಡ ಯೋಜನೆ ಇದು. ವಿದ್ಯುತ್ ಸಂಪರ್ಕ ಮಾರ್ಗ, ಒಳಚರಂಡಿ, ನೀರಿನ ಪೈಪ್‌ಗಳನ್ನು ನೆಲದಲ್ಲಿ ಹೊಸದಾಗಿ ಅಳವಡಿಸುವುದು, ವಿಶಾಲವಾದ ಪಾದಚಾರಿ ಮಾರ್ಗ, ವೈಟ್‌ಟಾಪಿಂಗ್ ರಸ್ತೆ, ಎಲ್‌ಇಡಿ ಲೈಟ್‌, ಅಲ್ಲಲ್ಲಿ ಬೊಲೆವಾರ್ಡ್‌ಗಳನ್ನು ಅಳವಡಿಸುವುದು ಯೋಜನೆಯ ಉದ್ದೇಶ.

ಕಾಮಗಾರಿ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಅಲ್ಲಲ್ಲಿ ರಸ್ತೆಗಳನ್ನು ಅಗೆದು ಬಿಡಲಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಮೋತಿಮಹಲ್ ಹೋಟೆಲ್‌ ಎದುರಿನ ಡಬ್ಲ್ಯು.ಎಚ್. ಹನುಮಂತಪ್ಪ ರಸ್ತೆ, ಗುಬ್ಬಿ ತೋಟದಪ್ಪ ಸೇರಿ ಹಲವು ಕ್ರಾಸ್‌ ರಸ್ತೆಗಳಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಂಚಾರ ಬಂದ್ ಮಾಡಿ ಎಂಟು ತಿಂಗಳು ಕಳೆದಿವೆ.

ಈ ಬಗ್ಗೆ ಅರಿವಿಲ್ಲದವರು ಗಾಂಧಿನಗರದ ಮಾರ್ಗದಲ್ಲಿ ಹೋಗಲು ವಾಹನದಲ್ಲಿ ಬಂದರೆ ಸಿಲುಕಿ
ಕೊಳ್ಳುವುದು ಗ್ಯಾರಂಟಿ. ಹಲವು ರಸ್ತೆಗಳಲ್ಲಿ ಏಕಮುಖ ಸಂಚಾರವಿದ್ದು, ವಾಪಸ್ ಹೋಗಲೂ ಸಾಧ್ಯವಾಗದೆ ಪರದಾಡಬೇಕಾದ ಸ್ಥಿತಿ ಎದುರಾಗುತ್ತದೆ. ಪಾದಚಾರಿಗಳೂ ತಡಕಾಡಿಕೊಂಡೇ ತಿರುಗಾಡುತ್ತಿದ್ದಾರೆ. ಇನ್ನೂ ಎಷ್ಟು ದಿನ ಈ ಪಡಿಪಾಟಲು ಗೊತ್ತಿಲ್ಲ ಎಂದು ಇಲ್ಲಿನ ವ್ಯಾಪಾರಿಗಳು ಹೇಳುತ್ತಾರೆ.

ಪೈಪ್‌ಲೈನ್ ಕಾಮಗಾರಿಯನ್ನು ಜಲಮಂಡಳಿ ಕೈಗೊಂಡಿರುವುದು–ಪ್ರಜಾವಾಣಿ ಚಿತ್ರಗಳು/ಎಂ.ಎಸ್.ಮಂಜುನಾಥ್

‘ಹೋಟೆಲ್‌ಗಳು, ವಸತಿಗೃಹಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಕೊರೊನಾ ಕಾರಣಕ್ಕೆ ಮೊದಲೇ ವಹಿವಾಟು ಇಲ್ಲವಾಗಿದೆ. ಈ ನಡುವೆ ಸುಗಮ ಸಂಚಾರ ಇಲ್ಲದ ಕಾರಣ ಜನರೇ ಬರುತ್ತಿಲ್ಲ. ಗಾಂಧಿನಗರದ ಗತವೈಭವ ಮರುಕಳಿಸುವುದು ಯಾವಾಗ ಎಂಬ ಚಿಂತೆ ಕಾಡುತ್ತಿದೆ’ ಎಂದು ಅವರು ಹೇಳುತ್ತಾರೆ.

ಲಾಕ್‌ಡೌನ್ ಆದ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿ ಈಗ ಪುನರಾರಂಭಗೊಂಡಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಪಾದಚಾರಿ ಮಾರ್ಗ ನಿರ್ಮಾಣವಾಗುವುದೇನೋ ಸರಿ. ಆದರೆ, ವಿಳಂಬ ಮಾಡದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ನವೆಂಬರ್‌ ವೇಳೆಗೆ ಪರಿಪೂರ್ಣ:‘ಶೇ 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಕಾಮಗಾರಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ’ ಎಂದು ಬಿಬಿಎಂಪಿ ಯೋಜನೆಗಳ ವಿಭಾಗದ ಅಧಿಕಾರಿಗಳು ತಿಳಿಸಿದರು.

‘18 ಅಡ್ಡರಸ್ತೆಗಳಲ್ಲಿ ಕಾಮಗಾರಿ ಮುಗಿದಿದೆ. 5 ಮುಖ್ಯ ರಸ್ತೆಗಳ ಪೈಕಿ ಗುಬ್ಬಿತೋಟದಪ್ಪ ಮತ್ತು ಡಬ್ಲ್ಯು.ಎಚ್‌.ಹನುಮಂತಪ್ಪ ರಸ್ತೆ ಕಾಮಗಾರಿ ಮಾತ್ರ ಬಾಕಿ ಇದೆ. ಲಾಕ್‌ಡೌನ್ ಇಲ್ಲದಿದ್ದರೆ ಮಾರ್ಚ್‌ ಅಥವಾಏಪ್ರಿಲ್‌ನಲ್ಲೇ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು’ ಎಂದು ಹೇಳಿದರು.

ಕಾಟನ್‌ಪೇಟೆ ಮುಖ್ಯ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೂ, ಸಣ್ಣಪುಟ್ಟ ಕೆಲಸ ಮಾತ್ರ ಬಾಕಿ ಇದ್ದು,
ಒಂದು ವಾರದಲ್ಲಿ ಅದು ಕೂಡ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT