ಶುಕ್ರವಾರ, ಡಿಸೆಂಬರ್ 3, 2021
23 °C

ಬೆಂಗಳೂರು: ‘ಟೆಸ್ಟ್ ಡ್ರೈವ್’ ನೆಪದಲ್ಲಿ ಕಾರು ಕದ್ದಿದ್ದವ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಖರೀದಿ ನೆಪದಲ್ಲಿ ಸಾರ್ವಜನಿಕರನ್ನು ಪರಿಚಯಿಸಿಕೊಂಡು ‘ಟೆಸ್ಟ್ ಡ್ರೈವ್’ ಮಾಡುವುದಾಗಿ ಹೇಳಿ ಕಾರುಗಳನ್ನು ಕದ್ದೊಯ್ಯುತ್ತಿದ್ದ ಆರೋಪದಡಿ ಶ್ರೀನಿವಾಸ್ ಎಂಬಾತನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

‘ದೊಡ್ಡಬಳ್ಳಾಪುರದ ಶ್ರೀನಿವಾಸ್, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ಆತನಿಂದ ₹ 35 ಲಕ್ಷ ಮೌಲ್ಯದ 7 ಕಾರುಗಳನ್ನು ಜಪ್ತಿ ಮಾಡಲಾಗಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪಶ್ಚಿಮ ಕಾರ್ಡ್‌ ರಸ್ತೆಯ ನಿವಾಸಿಯೊಬ್ಬರು, ತಮ್ಮ ಕಾರು ಮಾರಾಟಕ್ಕಿಟ್ಟಿದ್ದರು. ಪರಿಚಯಸ್ಥರೊಬ್ಬರ ಮೂಲಕ ನಿವಾಸಿಯನ್ನು ಸಂ‍ಪರ್ಕಿಸಿದ್ದ ಆರೋಪಿ ಶ್ರೀನಿವಾಸ್, ಕಾರು ಖರೀದಿಸುವುದಾಗಿ ಹೇಳಿದ್ದರು. ನ. 8ರಂದು ನಿವಾಸಿಯನ್ನು ಭೇಟಿಯಾಗಿದ್ದ ಆರೋಪಿ, ಟೆಸ್ಟ್‌ ಡ್ರೈವ್ ಸೋಗಿನಲ್ಲಿ ಕಾರು ತೆಗೆದುಕೊಂಡು ಹೋಗಿ ವಾಪಸು ಬಂದಿರಲಿಲ್ಲ. ಮೊಬೈಲ್ ಸಹ ಸ್ವಿಚ್ ಆಫ್ ಮಾಡಿದ್ದ. ಕಾರು ಕಳ್ಳತನವಾದ ಬಗ್ಗೆ ನಿವಾಸಿ ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ. ನಗರದ ಹಲವೆಡೆ ಕಾರು ಕದ್ದಿರುವ ಮಾಹಿತಿಯನ್ನೂ ಬಾಯ್ಬಿಟ್ಟ’ ಎಂದೂ ಹೇಳಿವೆ.

‘ಕದ್ದ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಆರೋಪಿ, ಕಡಿಮೆ ಬೆಲೆಗೆ ಮಾರುತ್ತಿದ್ದ. ಇದರಿಂದ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.

ಜೈಲಿಗೆ ಹೋಗಿ ಬಂದಿದ್ದ: ‘ವಂಚನೆ, ಕಳ್ಳತನ ಆರೋಪದಡಿ ಶ್ರೀನಿವಾಸ್ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಆತನನ್ನು ಬಂಧಿಸಿದ್ದ ದೊಡ್ಡಬಳ್ಳಾಪುರ ಪೊಲೀಸರು, ಜೈಲಿಗೆ ಕಳುಹಿಸಿದ್ದರು. ಜಾಮೀನು ಮೇಲೆ ಹೊರಬಂದಿದ್ದ ಆರೋಪಿ, ಟೆಸ್ಟ್ ಡ್ರೈವ್ ಸೋಗಿನಲ್ಲಿ ಕಳ್ಳತನ ಮುಂದುವರಿಸಿದ್ದ’ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು