ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಚುನಾಯಿತ ಕೌನ್ಸಿಲ್‌ ಇಲ್ಲದೇ ಕಳೆಯಿತು ವರ್ಷ

ಬಿಬಿಎಂಪಿ ಚುನಾವಣೆ ನಡೆಸಲು ಮೀನಮೇಷ l ಮಡುಗಟ್ಟಿದೆ ಆಕ್ರೋಶ
Last Updated 9 ಸೆಪ್ಟೆಂಬರ್ 2021, 22:36 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ ಚುನಾಯಿತ ಕೌನ್ಸಿಲ್‌ನ ಆಡಳಿತ ಇಲ್ಲದೇ ಶುಕ್ರವಾರಕ್ಕೆ (ಸೆ.10) ಒಂದು ವರ್ಷ ತುಂಬಿದೆ. ಬಿಬಿಎಂಪಿಗೆ ಹೊಸ ವಾರ್ಡ್‌ ಸೇರ್ಪಡೆಗೊಳಿಸಿ ಮರುವಿಂಗಡಣೆ ಪ್ರಕ್ರಿಯೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ಶೀಘ್ರವೇ ಚುನಾವಣೆ ನಡೆಸಲಾಗುತ್ತದೆ ಎಂಬ ಸರ್ಕಾರದ ಭರವಸೆ ಹುಸಿಯಾಗಿದೆ.

ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಕೋವಿಡ್‌ ನಡುವೆಯೂ ಇತ್ತೀಚೆಗೆ ಚುನಾವಣೆಯನ್ನು ನಡೆಸಲಾಗಿದೆ. ಇದರ ಬೆನ್ನಲ್ಲೇ ಬಿಬಿಎಂಪಿಗೂ ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

2015ರಲ್ಲಿ ಆಯ್ಕೆಯಾಗಿದ್ದ ಬಿಬಿಎಂಪಿ ಚುನಾಯಿತ ಕೌನ್ಸಿಲ್‌ ಅವಧಿ 2020ರ ಸೆ.10ಕ್ಕೆ ಕೊನೆಗೊಂಡಿತ್ತು. ಸೆ. 11ರಂದು ಗೌರವ್‌ ಗುಪ್ತ ಪಾಲಿಕೆಯ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಈಗ ಪಾಲಿಕೆಯ ಮುಖ್ಯ ಆಯುಕ್ತರಾಗಿದ್ದು, ಸರ್ಕಾರ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರನ್ನು ಪಾಲಿಕೆಯ ಆಡಳಿತಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ. ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಹುದ್ದೆಯೂ ಅವರ ಹೆಗಲೇರಿದೆ. ಆಡಳಿತಾಧಿಕಾರಿಯವರು ಬಿಬಿಎಂಪಿ ಕಚೇರಿಗೆ ಬರುವುದೇ ಅಪರೂಪ ಎಂಬ ದೂರುಗಳಿವೆ.

‘ಆಡಳಿತಾಧಿಕಾರಿ ಇದ್ದರೂ ಪ್ರಮುಖ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಅವರು ಸರ್ಕಾರದತ್ತ ಮುಖ ಮಾಡಬೇಕಾದ ಸ್ಥಿತಿ ಇದೆ. ರಸ್ತೆ ಗುಂಡಿಯಿಂದ ಹಿಡಿದು, ಆಸ್ತಿ ತೆರಿಗೆ ಪಾವತಿವರೆಗೆವಾರ್ಡ್‌ ಮಟ್ಟದಲ್ಲಿ ಹತ್ತು–ಹಲವು ಸಮಸ್ಯೆಗಳಿದ್ದರೂ ಸ್ಪಂದನೆ ಸಿಗದೇ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಸಂವಿಧಾನದ ಆಶಯದಂತೆ ಸ್ಥಳೀಯ ಸರ್ಕಾರ ರಚನೆಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರು ಒತ್ತಾಯಿಸಿದ್ದಾರೆ.

‘ಸಂವಿಧಾನದ ಕಲಂ 243 ಯು‘ ಪ್ರಕಾರ ಬಿಬಿಎಂಪಿಯ ಚುನಾಯಿತ ಕೌನ್ಸಿಲ್‌ ಅನ್ನು ಸರ್ಕಾರವು ವಿಸರ್ಜಿಸಿದರೂ ಆರು ತಿಂಗಳೊಳಗೆ ಚುನಾಯಿತ ಕೌನ್ಸಿಲ್‌ ರಚನೆಯಾಗುವಂತೆ ನೋಡಿಕೊಳ್ಳ
ಬೇಕು. 1976ರ ಕರ್ನಾಟಕ ಪೌರ ನಿಗಮಗಳ (ಕೆಎಂಸಿ) ಕಾಯ್ದೆಯಲ್ಲೂ ಈ ಅಂಶವನ್ನು ಅಳವಡಿಸಿಕೊಳ್ಳಲಾಗಿದೆ. ಚುನಾವಣೆಯನ್ನು ಮುಂದೂಡಿದರೂ ಗರಿಷ್ಠ ಆರು ತಿಂಗಳಿಗೆ ಮಾತ್ರ ಆಡಳಿತಾಧಿಕಾರಿಯನ್ನು ನೇಮಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಬಿಬಿಎಂಪಿ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವು
ದರೊಳಗೆ ಚುನಾವಣೆ
ಪ್ರಕ್ರಿಯೆ ಪೂರ್ಣಗೊಂಡಿರಬೇಕಿತ್ತು. ಚುನಾವಣೆ ನಡೆಸದಿರುವುದಕ್ಕೆ ರಾಜ್ಯ ಚುನಾವಣಾ ಆಯೋಗವಾಗಲೀ, ಸರ್ಕಾರವಾಗಲೀ ಸ್ಪಷ್ಟ ಕಾರಣವನ್ನೂ ನೀಡಿರಲಿಲ್ಲ.

ಚುನಾಯಿತ ಕೌನ್ಸಿಲ್‌ ಅವಧಿ ಮುಗಿದಾಗ ಬಿಬಿಎಂಪಿಯ ಆಡಳಿತವು ಕೆಎಂಸಿ ಕಾಯ್ದೆಯನ್ವಯವೇ ನಡೆಯುತ್ತಿತ್ತು. ಈಗ 2020ರ ಬಿಬಿಎಂಪಿ ಕಾಯ್ದೆಯನ್ವಯ ಪಾಲಿಕೆಯ ಆಡಳಿತವನ್ನು ನಿರ್ವಹಿಸಲಾಗುತ್ತಿದೆ. ಸರ್ಕಾರವು ಚುನಾಯಿತ ಕೌನ್ಸಿಲನ್ನು ವಿಸರ್ಜಿಸಲು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 126 ಅವಕಾಶ ಕಲ್ಪಿಸುತ್ತದೆ. ಪಾಲಿಕೆಯನ್ನು ವಿಸರ್ಜಿಸಿದರೆ, ಆ ದಿನದಿಂದ ಆರು ತಿಂಗಳ ಒಳಗೆ
ಕೌನ್ಸಿಲ್‌ ಪುನರ‍್ರಚಿಸಬೇಕು ಎಂದು ಸೆಕ್ಷನ್‌ 126 (7) ಹೇಳುತ್ತದೆ. ವಿಸರ್ಜನೆಯ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಿಸಲು, ಅಗತ್ಯ ಬಿದ್ದರೆ ಆಡಳಿತಾಧಿಕಾರಿಯ ಅವಧಿಯನ್ನು ಮೊಟಕುಗೊಳಿಸಲು ಅಥವಾ ವಿಸ್ತರಿಸಲು ಸೆಕ್ಷನ್‌ 127 ಅವಕಾಶ ಕಲ್ಪಿಸುತ್ತದೆ.

‘ನಗರದ ಸರ್ವತೋಮುಖ ಅಭಿವೃದ್ಧಿಗೆ ಸ್ಥಳೀಯ ಸರ್ಕಾರದ ಪಾತ್ರವೂ ಮಹತ್ವವಾದುದು. ಆಡಳಿತಕ್ಕೆ ಸಂಬಂಧಿಸಿದ ಸ್ಥಳೀಯ ವಿಚಾರಗಳ ಕುರಿತು ಬಿಬಿಎಂಪಿ ಚುನಾಯಿತ ಕೌನ್ಸಿಲ್‌ನಲ್ಲೇ ಚರ್ಚಿಸಿ ನಿರ್ಧರಿಸಬೇಕೇ ಹೊರತು ಸರ್ಕಾರ ಹಾಗೂ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಜನರ ಮೇಲೆ ಹೇರುವುದು ಸರಿಯಲ್ಲ’ ಎನ್ನುತ್ತಾರೆ ನಗರಾಡಳಿತ ತಜ್ಞರು.

‘ಉತ್ತರದಾಯಿತ್ವ ಇಲ್ಲದಂತಾಗಿದೆ’

ಚುನಾಯಿತ ಕೌನ್ಸಿಲ್‌ ಇಲ್ಲದೇ ಆಡಳಿತ ವ್ಯವಸ್ಥೆಯಲ್ಲಿ
ಉತ್ತರದಾಯಿತ್ವ ಇಲ್ಲದಂತಾಗಿದೆ. ವಾರ್ಡ್‌ ಸಮಿತಿ ಸಭೆಗಳೂ ಕಾಟಾಚಾರಕ್ಕೆ ನಡೆಯುತ್ತಿವೆ. ಸರ್ಕಾರ ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಬೇಕು

– ಶ್ರೀಕಾಂತ್‌ ನರಸಿಂಹನ್‌,ಬೆಂಗಳೂರು ನವನಿರ್ಮಾಣ ಪಕ್ಷದ ಪ್ರಧಾನ ಕಾರ್ಯದರ್ಶಿ

ಬಿಬಿಎಂಪಿಯಲ್ಲಿ ಅಧಿಕಾರಿಗಳದೇ ದರ್ಬಾರ್‌. ಜನರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲ. ಕುಂಟುನೆಪ ಹೇಳಿ ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ಮತ್ತಷ್ಟು ಮುಂದೂಡಬಾರದು. ಸೋಲು–ಗೆಲುವು ಬೇರೆ
ವಿಚಾರ. ಆದರೆ, ಜನರು ಬಯಸುವ ಆಡಳಿತ ಬಿಬಿಎಂಪಿಯಲ್ಲಿರಬೇಕು

– ಆರ್‌.ಪ್ರಕಾಶ್‌,ಜೆಡಿಎಸ್‌,ನಗರ ಜಿಲ್ಲಾ ಘಟಕದ ಅಧ್ಯಕ್ಷ

ಈಗಿನ ಸರ್ಕಾರದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆಯೇ ಇಲ್ಲ. ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸುತ್ತದೆ ಎಂಬ ನಂಬಿಕೆ ಇಲ್ಲ. ಆದರೆ, ಸುಪ್ರೀಂ ಕೋರ್ಟ್‌ ನಮ್ಮ ನೆರವಿಗೆ ಬರುತ್ತದೆ ಎಂಬ ನಂಬಿಕೆ ಇದೆ. ಚುನಾಯಿತ ಕೌನ್ಸಿಲ್‌ ಅಸ್ತಿತ್ವದಲ್ಲಿರುತ್ತಿದ್ದರೆ ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಅಷ್ಟೊಂದು ಪ್ರಮಾಣದ ಸಾವು–ನೋವು ಸಂಭವಿಸುತ್ತಿರಲಿಲ್ಲ

– ಅಬ್ದುಲ್‌ ವಾಜಿದ್‌,ಕಾಂಗ್ರೆಸ್‌ ಮುಖಂಡ

ಚುನಾವಣೆ ಮುಂದೂಡಲು ಈಗಿನ ಸರ್ಕಾರ ಬಿಬಿಎಂಪಿ ಕಾಯ್ದೆ ಜಾರಿಗೆ ತಂದಿತು. ಈಗ ಅದರ ಪ್ರಕಾರವೂ ನಡೆದುಕೊಳ್ಳುತ್ತಿಲ್ಲ. ಆಡಳಿತವಂತೂ ಅಧ್ವಾನವಾಗಿಬಿಟ್ಟಿದೆ. ಕೊವಿಡ್‌ ಸಂದರ್ಭದಲ್ಲಿ ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗುವುದಾದರೆ, ಬಿಬಿಎಂಪಿಗೆ ಚುನಾವಣೆ ನಡೆಸಲು ಏನು ಅಡ್ಡಿ?

– ಎಂ.ಶಿವರಾಜು,ಕಾಂಗ್ರೆಸ್‌ ಮುಖಂಡ

‘ಜನರ ಸಮಸ್ಯೆ ಆಲಿಸಲು ಬಿಬಿಎಂಪಿಯೇ ರೂಪಿಸಿದ
‘ನಮ್ಮ ಬೆಂಗಳೂರು ಆ್ಯಪ್‌ 2.0’ ಮೂಲಕ ದೂರು ನೀಡಿದರೂ ಕೇಳುವವರೇ ಇಲ್ಲ. ಚುನಾಯಿತ ಕೌನ್ಸಿಲ್‌ ಇದ್ದಾಗ ಜನರ ದೂರು ದುಮ್ಮಾನಗಳಿಗೆ ಅಧಿಕಾರಿಗಳು ಸ್ವಲ್ಪಮಟ್ಟಿಗಾದರೂ ಸ್ಪಂದಿಸುತ್ತಿದ್ದರು. ಜನರ ಪ್ರತಿನಿಧಿಗಳಿಲ್ಲದ ಆಡಳಿತ ಸಾಕು. ಆದಷ್ಟು ಬೇಗ ಬಿಬಿಎಂಪಿಗೆ ಚುನಾವಣೆ ನಡೆಸಬೇಕು

– ಉಮೇಶ್‌ ಬಾಬು ಪಿಳ್ಳೆಗೌಡ,ಸಿಟಿಜನ್ಸ್‌ ಫಾರ್‌ ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT