ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯದಷ್ಟು ಕೋವಿಡ್‌ ಲಸಿಕೆ: ಕೇಂದ್ರ ಸರ್ಕಾರದ ಭರವಸೆ

Last Updated 13 ಮೇ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಡೋಸ್ ಲಸಿಕೆ ನೀಡಲು ಇರುವ ಕೊರತೆ ನಿವಾರಿಸಲಾಗುವುದು ಎಂದು ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಭರವಸೆ ನೀಡಿದೆ.

ರಾಜ್ಯದ ಪಾಲಿನ ಲಸಿಕೆ ಹಂಚಿಕೆಗೆ ತೆಗೆದುಕೊಂಡ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರ್ದೇಶನ ನೀಡಿತು.

ಎರಡನೇ ಡೋಸ್ ಪಡೆಯಲು ಅವಧಿ ಮೀರುತ್ತಿರುವ ಜನರ ಸಂಖ್ಯೆಗೂ ದಾಸ್ತಾನಿರುವ ಲಸಿಕೆಯ ಪ್ರಮಾಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಈ ಅಂತರವನ್ನು ಹೇಗೆ ನಿವಾರಿಸಲಾಗುತ್ತದೆ ಎಂದು ವಿಚಾರಣೆ ವೇಳೆ ಪೀಠ ಪ್ರಶ್ನಿಸಿತು. ಎರಡನೇ ಡೋಸ್ ಬಾಕಿ ಇರುವವರಿಗೆ ಮೊದಲ ಆದ್ಯತೆ ನೀಡಬೇಕು. ಅವರಿಗೆ ಶೇ 70ರಷ್ಟು ಮತ್ತು ಮೊದಲ ಡೋಸ್‌ ಪಡೆಯುವವರಿಗೆ ಶೇ 30ರಷ್ಟು ಆದ್ಯತ ನೀಡುವಂತೆ ಪೀಠ ತಿಳಿಸಿತು.

ಎರಡನೇ ಡೋಸ್‌ಗೆ ಕಾದಿರುವವರನ್ನು ಬಿಟ್ಟು ಮೊದಲನೇ ಡೋಸ್‌ಗೆ ನೊಂದಾಯಿಸಿಕೊಂಡವರಿಗೆ ಲಸಿಕೆ ನೀಡಿದರೆ ಈಗಾಗಲೇ ಮೊದಲ ಡೋಸ್ ಪಡೆದವರಿಗೆ ಅವಧಿ ಮೀರುತ್ತದೆ. ಆಗ ಅವರ ಮೊದಲ ಡೋಸ್ ನಿಷ್ಪ್ರಯೋಜಕವಾಗುತ್ತದೆ. ರಾಷ್ಟ್ರಕ್ಕೂ ಇದರಿಂದ ನಷ್ಟವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಟಿ ಅವರು, ಲಸಿಕೆ ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಜತೆ ನಡೆಸಿರುವ ಮೂರು ಸಮಾಲೋಚನೆಗಳ ವಿವರ ಸಲ್ಲಿಸಿದರು. ‘ಮೇ ತಿಂಗಳ ಕೊನೆಯ ಎರಡು ವಾರದಲ್ಲಿ ಲಸಿಕೆ ಹಂಚಲು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ವಿವರಿಸಿದರು.

‘ಕೇಂದ್ರ ಸರ್ಕಾರ ನೀಡಿದ ಭರವಸೆ ಮೇರೆಗೆ ರಾಜ್ಯಕ್ಕೆ ಲಸಿಕೆ ಬಿಡುಗಡೆ ಮಾಡಲು ಕಡ್ಡಾಯ ನಿರ್ದೇಶನ ನೀಡುವುದನ್ನು ಸದ್ಯಕ್ಕೆ ತಡೆಯಲಾಗುತ್ತಿದೆ. ಎರಡನೇ ಡೋಸ್‌ ಪಡೆಯಲು ಅವಧಿ ಮೀರುತ್ತಿರುವ ಜನರ ಕುರಿತ ಜಿಲ್ಲಾವಾರು ಅಂಕಿ–ಅಂಶವನ್ನು ತಕ್ಷಣವೇ ಒದಗಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT