ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇವ್‌ ಪಾರ್ಟಿ: ಸಿಸಿಬಿ ಹೆಗಲಿಗೆ ತನಿಖೆ

ಪಾರ್ಟಿಯಲ್ಲಿ ಮತ್ತೊಬ್ಬ ತೆಲುಗು ನಟಿ ಭಾಗಿ: ತನಿಖೆ ಚುರುಕು
Published 23 ಮೇ 2024, 4:40 IST
Last Updated 23 ಮೇ 2024, 4:40 IST
ಅಕ್ಷರ ಗಾತ್ರ

ಬೆಂಗಳೂರು: ಆನೇಕಲ್ ತಾಲ್ಲೂಕಿನ ಹುಸ್ಕೂರ್‌ ಬಳಿಯ ಜೆ.ಆರ್‌.ಫಾರ್ಮ್‌ ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಈ ಮೊದಲು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೆಬ್ಬಗೋಡಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ರೇವ್‌ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ನಟಿಯರು ಸೇರಿ ಹಲವರು ಭಾಗಿಯಾಗಿರುವ ಅನುಮಾನ ಹಾಗೂ ಜನ್ಮದಿನಾಚರಣೆ ಹೆಸರಿನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಸಿದ್ದಕ್ಕೆ ಸಾಕ್ಷ್ಯಾಧಾರಗಳು ಲಭಿಸಿದ್ದು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಪಾರ್ಟಿಯಲ್ಲಿ ಮತ್ತೊಬ್ಬ ನಟಿ: ರೇವ್‌ ಪಾರ್ಟಿಯಲ್ಲಿ ಮತ್ತೊಬ್ಬ ತೆಲುಗು ನಟಿ ಆಶಿರಾಯ್‌ ಅವರು ಭಾಗಿ ಆಗಿದ್ದರು. ದಾಳಿ ನಡೆಸುತ್ತಿದ್ದಂತೆಯೇ ಅವರು ಪರಾರಿ ಆಗಿದ್ದರು ಎಂದು ಮೂಲಗಳು ಹೇಳಿವೆ.

‘ಬರ್ತ್‌ ಡೇ ಪಾರ್ಟಿಗೆಂದು ನನ್ನನ್ನು ಕರೆಯಲಾಗಿತ್ತು. ಆಹ್ವಾನಿಸಿದವರನ್ನು ನಾನು ಅಣ್ಣ ಎಂದು ಕರೆಯುತ್ತಿದ್ದೆ. ಪಾರ್ಟಿಯಲ್ಲಿ ಏನಿತ್ತು ನನಗೆ ತಿಳಿದಿಲ್ಲ. ಡ್ರಗ್ಸ್‌ ಪೂರೈಕೆ ಆಗಿರುವ ಮಾಹಿತಿ ಇಲ್ಲ’ ಎಂದು ಆಶಿರಾಯ್‌ ಅವರು ವಿಡಿಯೊದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತೆಲುಗು ನಟಿ ಹೇಮಾ ಅವರೂ ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು ಎಂದು ತನಿಖೆಯಿಂದ ಗೊತ್ತಾಗಿತ್ತು.

ಆಂಧ್ರದಿಂದ ಬಂದವರೇ ಹೆಚ್ಚು: ಮೇ 19ರಂದು ಸಂಜೆ 5 ಗಂಟೆ ಸುಮಾರಿಗೆ ಪಾರ್ಟಿ ಆರಂಭವಾಗಿತ್ತು. ‘ಸನ್‌ಸೆಟ್‌ ಟು ಸನ್‌ರೈಸ್ ಪಾರ್ಟಿ’ ಹೆಸರಿನಲ್ಲಿ ನಡೆದಿದ್ದ ಪಾರ್ಟಿಯಲ್ಲಿ 250ಕ್ಕೂ ಹೆಚ್ಚು ಮಂದಿ ಇದ್ದರು. ಆ ಪೈಕಿ 101 ಮಂದಿಯ ಮಾಹಿತಿ ಸಿಕ್ಕಿದೆ. ಪರಾರಿಯಾದವರನ್ನು ವಿಚಾರಣೆಗೆ ಕರೆಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಪ್ರತಿಯೊಬ್ಬ ಗ್ರಾಹಕನಿಂದ ದೊಡ್ಡ ಮೊತ್ತದ ಹಣ ಪಡೆಯಲಾಗಿದೆ. ಹೊರಗಿನವರು ಯಾರೇ ಪ್ರಶ್ನಿಸಿದರೂ ಬರ್ತಡೇ ಪಾರ್ಟಿಗೆ ಬಂದಿರುವುದಾಗಿ ಹೇಳುವಂತೆ ಪೆಡ್ಲರ್‌ಗಳು ಸೂಚಿಸಿದ್ದರು. ಪೊಲೀಸ್‌ ದಾಳಿ ವೇಳೆ ಅಲ್ಲಿದ್ದವರು ವಾಸು ಎಂಬುವರ ಬರ್ತ್‌ ಡೇ ಗೆ ಬಂದಿರುವುದಾಗಿ ಹೇಳುತ್ತಿದ್ದರು. ಫಾರ್ಮ್‌ ಹೌಸ್‌ನಲ್ಲಿದ್ದ ಅಲಂಕಾರಿಕ ಗಿಡಗಳ ಬುಡದಲ್ಲಿ ಡ್ರಗ್ಸ್ ಬಚ್ಚಿಡಲಾಗಿತ್ತು. ಅದನ್ನು ಶ್ವಾನದಳ ಪತ್ತೆ ಹಚ್ಚಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT