ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಚಾರದ ಕೊರತೆ; ‘ಬೆಂಗಳೂರು ದರ್ಶಿನಿ’ಗೆ ಸಿಗದ ಸ್ಪಂದನ

Published 5 ಜುಲೈ 2024, 23:17 IST
Last Updated 5 ಜುಲೈ 2024, 23:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬಿಎಂಟಿಸಿಯ ಯೋಜನೆ ‘ಬೆಂಗಳೂರು ದರ್ಶಿನಿ’ಗೆ ಪ್ರವಾಸಿಗರಿಂದ ನೀರಿಕ್ಷಿತ ಸ್ಪಂದನ ದೊರೆತಿಲ್ಲ. ಪ್ರವಾಸಿಗರ ಸಂಖ್ಯೆ ತಿಂಗಳಿಗೆ ಸಾವಿರದ ಗಡಿ ದಾಟುವುದೂ ಅಪರೂಪವಾಗಿದೆ.

ಬೆಂಗಳೂರು ದರ್ಶಿನಿ ಅಥವಾ ‘ಬೆಂಗಳೂರು ರೌಂಡ್ಸ್‌’ ಎಂಬ ಯೋಜನೆಯನ್ನು ಬಿಎಂಟಿಸಿ 2015ರಲ್ಲಿ ಆರಂಭಿಸಿತ್ತು. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಬೆಳಿಗ್ಗೆ ಹೊರಟು ಸಂಜೆ ಮತ್ತೆ ಇಲ್ಲಿಗೇ ವಾಪಸ್‌ ಆಗುವ ಯೋಜನೆ ಇದಾಗಿದ್ದು, ಕೋವಿಡ್‌ ಕಾಲದಲ್ಲಿ ಸ್ಥಗಿತವಾಗಿತ್ತು. 2021ರಲ್ಲಿ ಮತ್ತೆ ಆರಂಭವಾದರೂ ಒಂದು ವರ್ಷದಲ್ಲಿ ಕೇವಲ 685 ಮಂದಿ ಈ ಯೋಜನೆಯ ಪ್ರಯೋಜನ ಪಡೆದಿದ್ದರು.

2022ರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಜುಲೈ ತಿಂಗಳಿನಲ್ಲಷ್ಟೇ (1,056) ಸಾವಿರದ ಗಡಿ ದಾಟಿತ್ತು. 2023ರಲ್ಲಿ ಮೇ ತಿಂಗಳಿನಲ್ಲೊಮ್ಮೆ (1,066) ನಾಲ್ಕು ಅಂಕಿ ತಲುಪಿತ್ತು. ಉಳಿದಂತೆ ಪ್ರತಿ ತಿಂಗಳು ಮೂರಂಕಿಯಲ್ಲಿಯೇ ಪ್ರವಾಸಿಗರ ಪ್ರಮಾಣ ಇದೆ.

‘ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ನಡೆಸುತ್ತಿರುವ ದರ್ಶಿನಿ ಟ್ರಿಪ್‌ಗಳಿಗೆ ಭಾರಿ ಸ್ಪಂದನೆ ಇದೆ. ಅದೇ ಮಟ್ಟದಲ್ಲಿ ಬೆಂಗಳೂರಿನಲ್ಲಿಯೂ ದರ್ಶಿನಿ ಟ್ರಿಪ್‌ ನಡೆಸಲು ಅವಕಾಶವಿದೆ. ಆದರೆ, ಈ ರೀತಿ ಒಂದೇ ದಿನ ನಗರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ಯೋಜನೆ ಇದೆ ಎಂಬುದರ ಬಗ್ಗೆ ಮಾಹಿತಿಯೇ ಜನರಿಗೆ ಇಲ್ಲ’ ಎಂದು ಪ್ರಯಾಣಿಕ ಸೃಜನ್‌ ಪಿ. ಬೇಸರ ವ್ಯಕ್ತಪಡಿಸಿದರು.

‘ಮೈಸೂರು ಐತಿಹಾಸಿಕ ಜಿಲ್ಲೆ. ಬೆಂಗಳೂರು ಪಕ್ಕಾ ವ್ಯಾವಹಾರಿಕ ಕೇಂದ್ರ. ಹಾಗಾಗಿ ಮೈಸೂರಿನಲ್ಲಿ ದರ್ಶಿನಿ ಟ್ರಿಪ್‌ನಲ್ಲಿ ಪ್ರಯಾಣಿಸುವ ಪ್ರವಾಸಿಗರಷ್ಟು ಇಲ್ಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಪ್ರಚಾರದ ಮೂಲಕ ಈಗಿರುವುದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿಸಲು ಸಾಧ್ಯವಿದೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಒಂದು ವಿಶೇಷ ಬಸ್‌ ಬೆಂಗಳೂರು ದರ್ಶಿನಿಗಾಗಿ ಪ್ರತಿದಿನ ಸಿದ್ಧವಾಗಿರುತ್ತದೆ. ಕೆಲವು ವಾರಾಂತ್ಯ ಮತ್ತು ವಿಶೇಷ ದಿನಗಳಲ್ಲಿ ಮಾತ್ರ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಆಗ ಎರಡು–ಮೂರು ಬಸ್‌ಗಳು ‘ದರ್ಶಿನಿ’ ಸಂಚಾರ ನಡೆಸುತ್ತವೆ. ಈಗ ಆಷಾಢ ಬಂದಿರುವುದರಿಂದ ವಾರದ ನಡುವೆ ಪ್ರಯಾಣಿಕರೇ ಇಲ್ಲದಂತೆಯೂ ಆಗುವುದಿದೆ’ ಎಂದು ಮಾಹಿತಿ ನೀಡಿದರು.

‘ಪ್ರಚಾರ ಮಾಡಿ ಜನರನ್ನು ತಲುಪುತ್ತೇವೆ’

‘ಬೆಂಗಳೂರಿನಲ್ಲಿ ಪ್ರವಾಸಿ ತಾಣಗಳ ಕೊರತೆ ಇಲ್ಲ. ಬೆಂಗಳೂರು ದರ್ಶಿನಿಗೆ ಪ್ರಚಾರದ ಕೊರತೆ ಇದೆ. ಜನರಿಗೆ ಹೇಗೆಲ್ಲ ಮಾಹಿತಿ ತಲುಪಿಸಬಹುದು ಎಂದು ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗುತ್ತಿದ್ದೇವೆ. ‘ದರ್ಶಿನಿ’ ಪ್ರವಾಸಿಗರನ್ನು ಹೆಚ್ಚು ಮಾಡುತ್ತೇವೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ವಿಶ್ವಾಸ ವ್ಯಕ್ತಪಡಿಸಿದರು.

‘ರೀಲ್ಸ್‌ ಮಾಡಿ ವಾಟ್ಸ್‌ಆ್ಯಪ್‌ ಫೇಸ್‌ಬುಕ್‌ ಮುಂತಾದ ಜಾಲತಾಣಗಳಲ್ಲಿ ಹಂಚುತ್ತೇವೆ. ಮಾಹಿತಿ ಪತ್ರವನ್ನು (ಬ್ರೋಷರ್‌) ಹಂಚಲು ಕ್ರಮ ವಹಿಸುತ್ತೇವೆ. ಪ್ರಚಾರಕ್ಕೇ ಇನ್ನೇನೆಲ್ಲ ಕ್ರಮ ವಹಿಸಬಹುದು ಎಂದು ಚರ್ಚೆ ನಡೆಸಿ ಮುಂದಡಿ ಇಡುತ್ತೇವೆ’ ಎಂದು ತಿಳಿಸಿದರು.

‘12 ಪ್ರವಾಸಿ ತಾಣಗಳಿಗೆ ‘ಬೆಂಗಳೂರು ದರ್ಶಿನಿ’ ಸಂದರ್ಶಿಸುತ್ತಿದೆ. ಒಮ್ಮೆ ದರ್ಶಿನಿಯಲ್ಲಿ ಬಂದವರು ಮತ್ತೆ ಅದೇ ತಾಣಗಳಿಗೆ ಬರುವುದಿಲ್ಲ. ಇದು ಕೂಡ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಅದಕ್ಕಾಗಿ ಇನ್ನಷ್ಟು ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳಿಗೆ ಹೊಸ ಮಾರ್ಗ ಮಾಡಿ ‘ದರ್ಶಿನಿ’ಗಳ ಸಂಖ್ಯೆ ಹೆಚ್ಚಿಸುವ ಚಿಂತನೆ ಕೂಡ ಇದೆ’ ಎಂದು ಮಾಹಿತಿ ನೀಡಿದರು.

‘ದರ್ಶಿನಿ’ಯ ಪ್ರವಾಸಿ ತಾಣಗಳು
ಇಸ್ಕಾನ್‌ ಟೆಂಪಲ್‌ ವಿಧಾನಸೌಧ ಟಿಪ್ಪು ಪ್ಯಾಲೆಸ್‌ ಗವಿ ಗಂಗಾಧರೇಶ್ವರ ದೇವಸ್ಥಾನ ಬಸವನಗುಡಿ ದೊಡ್ಡ ಬಸವಣ್ಣ ದೇವಸ್ಥಾನ ಲಾಲ್‌ಭಾಗ್‌ ಕರ್ನಾಟಕ ಸಿಲ್ಕ್‌ ಎಂಪೋರಿಯಂ ಕರ್ನಾಟಕ ಚಿತ್ರಕಲಾ ಪರಿಷತ್ತು ವಸ್ತು ಸಂಗ್ರಹಾಲಯ ಸರ್‌.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ವೆಂಕಟಪ್ಪ ಆರ್ಟ್‌ ಗ್ಯಾಲರಿ ಕಬ್ಬನ್‌ಪಾರ್ಕ್‌. ಬುಕ್ಕಿಂಗ್‌: ಕೆಎಸ್‌ಆರ್‌ಟಿಸಿ ಆನ್‌ಲೈನ್‌ ಬುಕ್ಕಿಂಗ್‌ ಬೆಂಗಳೂರು ಒನ್‌ ಸೆಂಟರ್‌ಗಳಲ್ಲಿಯೂ ಬುಕ್ಕಿಂಗ್‌ ಮಾಡಬಹುದು. ಬಸ್‌ನಿಲ್ದಾಣದಲ್ಲಿಯೇ ನೇರವಾಗಿ ಟಿಕೆಟ್‌ ಪಡೆಯಲೂ ಅವಕಾಶವಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT