ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಬೋಗಿ ಈಗ ರೆಸ್ಟೋರೆಂಟ್‌

ಕೆಎಸ್‌ಆರ್‌, ಎಸ್‌ಎಂವಿಟಿ ರೈಲು ನಿಲ್ದಾಣಗಳಲ್ಲಿ ಆರಂಭ
Published 26 ಏಪ್ರಿಲ್ 2024, 0:06 IST
Last Updated 26 ಏಪ್ರಿಲ್ 2024, 0:06 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ಮತ್ತು ಬೈಯಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌ಎಂವಿಟಿ) ರೈಲು ನಿಲ್ದಾಣಗಳಲ್ಲಿ ವಿಶಿಷ್ಟವಾದ ‘ರೈಲು ಕೋಚ್‌ ರೆಸ್ಟೋರೆಂಟ್‌‌’ ಆರಂಭಗೊಂಡಿದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ಕೆಎಸ್‌ಆರ್‌ ರೈಲು ನಿಲ್ದಾಣದ ರೆಸ್ಟೋರೆಂಟ್‌‌ ಗುತ್ತಿಗೆಯನ್ನು ಓಂ ಇಂಡಸ್ಟ್ರೀಸ್‌ (ಹಲ್ದಿರಾಮ್‌) ಹಾಗೂ ಎಸ್‌ಎಂವಿಟಿಯ ರೈಲು ನಿಲ್ದಾಣದ ರೆಸ್ಟೋರೆಂಟ್‌ ಅನ್ನು ಗೌರವ್‌ ಎಂಟರ್‌ಪ್ರೈಸಸ್‌ ಪಡೆದುಕೊಂಡಿವೆ. ಹವಾನಿಯಂತ್ರಿತ ಬೋಗಿಯೊಳಗೆ ಆರಾಮದಾಯಕ 40 ಆಸನಗಳಿವೆ. ಅಲ್ಲದೇ ಬೋಗಿಯ ಹೊರಗೆ 30 ಆಸನಗಳನ್ನು ಅಳವಡಿಸಲಾಗುತ್ತದೆ. ಸಸ್ಯಾಹಾರ ಮತ್ತು ಮಾಂಸಾಹಾರ ಎರಡಕ್ಕೂ ಅವಕಾಶ ನೀಡಲಾಗಿದೆ. ಆರಂಭದಲ್ಲಿ ಸಸ್ಯಾಹಾರ ಮಾತ್ರ ಇರಲಿದೆ.

ದಕ್ಷಿಣ ಭಾರತ, ಉತ್ತರ ಭಾರತೀಯ ಶೈಲಿಯ ಖಾದ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳ ತಿನಿಸುಗಳು ಇಲ್ಲಿ ಸಿಗಲಿವೆ. ದಿನದ 24 ಗಂಟೆಯೂ ರೆಸ್ಟೋರೆಂಟ್‌ ಕಾರ್ಯನಿರ್ವಹಿಸಲಿದೆ. ಬೋಗಿಯ ಗೋಡೆಯ ಮೇಲೆ ರಾಜ್ಯದ ಕಲಾಕುಸರಿಗಳು, ರೈಲ್ವೆಯ ಇತಿಹಾಸ ವಿವರಿಸುವ ಚಿತ್ರಗಳನ್ನು ಜೋಡಿಸಲಾಗಿದೆ. 

ರೈಲ್ವೆಯಲ್ಲಿ 15 ವರ್ಷ ಬಳಸಿದ ಬೋಗಿಗಳನ್ನು ಗುಜರಿಗೆ ಹಾಕುವ ಬದಲು ರೆಸ್ಟೋರೆಂಟ್‌ಗಳನ್ನಾಗಿ ಮಾಡಲು ನೈರುತ್ಯ ರೈಲ್ವೆ ನಿರ್ಧರಿಸಿತ್ತು. ಅದರ ಮೊದಲ ಪ್ರಯತ್ನವಾಗಿ ಹುಬ್ಬಳ್ಳಿಯಲ್ಲಿ ‘ಬೋಗಿ ಬೋಗಿ ರೆಸ್ಟೋರೆಂಟ್’ ಆರಂಭಿಸಿತ್ತು. ಈ ಪಟ್ಟಿಗೆ ಮತ್ತೆರಡು ಕೋಚ್‌ ರೆಸ್ಟೋರೆಂಟ್‌ಗಳು ಸೇರ್ಪಡೆಯಾಗಿವೆ. ಇವೆರಡರ ಗುತ್ತಿಗೆ ಅವಧಿ ಐದು ವರ್ಷಗಳಾಗಿದ್ದು, ರೈಲ್ವೆಗೆ ₹ 7.54 ಕೋಟಿ ಆದಾಯ ಬರಲಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಆರ್‌. ತ್ರಿನೇತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಎಸ್‌ಆರ್‌ ರೈಲು ನಿಲ್ದಾಣದ ಮುಖ್ಯಪ್ರವೇಶ ದ್ವಾರದ ಮುಂಭಾಗದಲ್ಲಿ ಕೋಚ್‌ ರೆಸ್ಟೋರೆಂಟ್‌ ಆರಂಭವಾಗಿದೆ. ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಈ ಸ್ಪಂದನೆ ಮುಂದುವರಿಯುವ ವಿಶ್ವಾಸವಿದೆ. ಕೆಎಸ್‌ಆರ್‌ ನಿಲ್ದಾಣಕ್ಕೆ ಪ್ರತಿ ದಿನ 2 ಲಕ್ಷ ಪ್ರಯಾಣಿಕರು ಬಂದು ಹೋಗುತ್ತಾರೆ. ಎಸ್‌ಎಂವಿಟಿ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ 60 ಸಾವಿರವಿದೆ. ಹಾಗಾಗಿ ಗ್ರಾಹಕರ ಕೊರತೆಯಾಗದು‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನಷ್ಟು ಜಾಗ ಬೇಕು: ‘ಕೋಚ್‌ ರೆಸ್ಟೋರೆಂಟ್‌ ಅನ್ನು ಚುನಾವಣೆಯ ಸಂದರ್ಭದಲ್ಲಿ ಆರಂಭಿಸಿರುವುದರಿಂದ ಪ್ರಚಾರ ಸಿಕ್ಕಿಲ್ಲ. ಪ್ರಚಾರ ದೊರೆತು ಗ್ರಾಹಕರ ಸಂಖ್ಯೆ ಹೆಚ್ಚಿದರೆ ಈಗಿರುವ ಜಾಗ ಸಾಕಾಗುವುದಿಲ್ಲ ಅಂತ ಎನ್ನಿಸುತ್ತಿದೆ’ ಎಂದು ಗ್ರಾಹಕ ಕೆ.ಎನ್. ಕೃಷ್ಣಪ್ರಸಾದ್‌ ಅವರು ತಿಳಿಸಿದರು.

‘ಚೆನ್ನೈನಲ್ಲಿ ಕೋಚ್‌ ರೆಸ್ಟೋರೆಂಟ್‌ ಚೆನ್ನಾಗಿ ಮಾಡಿದ್ದಾರೆ. ಎಸ್‌ಎಂವಿಟಿಯಲ್ಲಿಯೂ ಬೇಕಾದಷ್ಟು ಜಾಗವಿದೆ. ಕೆಎಸ್‌ಆರ್‌ ನಿಲ್ದಾಣದಲ್ಲಿಯೇ ಜಾಗದ ಸಮಸ್ಯೆ ಇದೆ. ಎರಡನೇ ದ್ವಾರದ ಬಳಿ ಮಾಡಿದರೆ ಸಾಕಷ್ಟು ಜಾಗ ಸಿಗಬಹುದು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೇಡಿಕೆ ಇರುವ ಕಡೆ ರೆಸ್ಟೋರೆಂಟ್‌

ಬೆಂಗಳೂರಿನಲ್ಲಿ ಸದ್ಯ ಎರಡು ಕೋಚ್‌ ರೆಸ್ಟೋರೆಂಟ್‌ ಆರಂಭಿಸಲಾಗಿದೆ. ಇ– ಟೆಂಡರ್‌ನಲ್ಲಿ ಗುತ್ತಿಗೆ ಪಡೆದವರಿಗೆ ಕೋಚ್‌ಗಳನ್ನು ಉಚಿತವಾಗಿ ನೀಡಿದ್ದೇವೆ. ಗುತ್ತಿಗೆ ಪಡೆದವರು ಅವರಿಗೆ ಬೇಕಾದಂತೆ ವಿನ್ಯಾಸ ಮಾಡಿಕೊಂಡಿದ್ದಾರೆ. ಕೋಚ್‌ ಒಳಗೆ ಮಾತ್ರವಲ್ಲ, ಹೊರಗೂ ಟೇಬಲ್‌ ಜೋಡಿಸಿಕೊಂಡು ಗ್ರಾಹಕರಿಗೆ ಸೇವೆ ನೀಡಬಹುದು ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಆರ್‌. ತ್ರಿನೇತ್ರ ತಿಳಿಸಿದರು.

ಈ ರೆಸ್ಟೋರೆಂಟ್‌ಗಳು ಯಶಸ್ವಿಯಾದರೆ ಕೆಎಸ್‌ಆರ್‌ ರೈಲು ನಿಲ್ದಾಣದ ಎರಡನೇ ದ್ವಾರದ ಬಳಿಯೂ ಆರಂಭಿಸಲಾಗುವುದು. ಅಲ್ಲದೇ ಯಶವಂತಪುರ, ಕಂಟೋನ್ಮೆಂಟ್‌ ನಿಲ್ದಾಣಗಳು ಸೇರಿದಂತೆ ಬೇಡಿಕೆಗೆ ಅನುಗುಣವಾಗಿ ಕೋಚ್‌ ರೆಸ್ಟೊರೆಂಟ್‌ ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT