ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ 110; ಸಮಸ್ಯೆ ಸಾವಿರ: ಅನುದಾನ ಹಂಚಿಕೆಯಲ್ಲಿ ತಾರತಮ್ಯ

ರಾಜಕೀಯ ಮೇಲಾಟ; ನಲುಗಿದ ಜನ
Last Updated 6 ಜುಲೈ 2021, 0:49 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಎಂಬ ‘ಕಾಣದ ಕಡಲಿಗೆ’ ಹಂಬಲಿಸಿ ಸೇರ್ಪಡೆಯಾದ 110 ಹಳ್ಳಿಗಳ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ನರಕದಲ್ಲಿ ಸಿಲುಕಿದಂತೆ ನರಳುತ್ತಿದ್ದಾರೆ. ಇದ್ದ ಡಾಂಬರು ರಸ್ತೆಗಳು ಮಾಯವಾಗಿ ಗುಂಡಿ–ಗೊಟರುಗಳ ತಾಣವಾದವು. ರಾಜಕೀಯ ಮೇಲಾಟ, ಅನುದಾನ ಹಂಚಿಕೆಯಲ್ಲಿ ತಾರತಮ್ಯಗಳಿಂದ ನಿವಾಸಿಗಳು ಅಕ್ಷರಶಃ ನಲುಗಿ ಹೋಗಿದ್ದಾರೆ.

2007ರಲ್ಲಿ 7 ನಗರಸಭೆ, ಒಂದು ಪ‍ಟ್ಟಣ ಪಂಚಾಯಿತಿ ವ್ಯಾಪ್ತಿಯ 110 ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಸೇರಿದವು. ಮಹದೇವಪುರ, ಕೆ.ಆರ್.ಪುರ, ಯಶವಂತಪುರ, ಯಲಹಂಕ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದೊಳಗೆ 110 ಹಳ್ಳಿಗಳು ಹಂಚಿಕೆಯಾದವು. ಆ ಹಳ್ಳಿಗಳಿಗೆ ಒಳಚರಂಡಿ ಮತ್ತು ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನು ಬಿಬಿಎಂಪಿ ಮತ್ತು ಜಲಮಂಡಳಿ ಜತೆಗೂಡಿ ಆರಂಭಿಸಿದವು. ಕಾಮಗಾರಿ ಆರಂಭವಾದ ನಂತರ 110 ಹಳ್ಳಿಗಳಲ್ಲಿ ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ.

ಕುಡಿಯುವ ನೀರಿನ ಸಂಪರ್ಕ ಮತ್ತು ಒಳಚರಂಡಿಗೆ ಸಂಬಂಧಿಸಿದ ಕಾಮಗಾರಿಯನ್ನು ನಿರ್ವಹಿಸುವುದು ಜಲಮಂಡಳಿ ಜವಾಬ್ದಾರಿಯಾದರೆ, ರಸ್ತೆ ಮರು ನಿರ್ಮಾಣ ಮಾಡುವುದು ಬಿಬಿಎಂಪಿ ಹೊಣೆ. ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಬಹುತೇಕ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆ ಮರು ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ.

ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ಸಾಧ್ಯವಾಗದೆ 110 ಹಳ್ಳಿಗಳ ವ್ಯಾಪ್ತಿಯ ಜನರು ಪರದಾಡುತ್ತಿದ್ದಾರೆ. ಗುಂಡಿಗಳಲ್ಲಿ ಬಿದ್ದು ಹಲವರು ಕೈಕಾಲು ಮುರಿದುಕೊಂಡಿದ್ದಾರೆ. ತಾಯಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ರಸ್ತೆ ಗುಂಡಿಯಲ್ಲಿ ಬಿದ್ದು ತೊಂದರೆ ಅನುಭವಿಸಿದ ದಾಸರಹಳ್ಳಿ ಕ್ಷೇತ್ರದ ಅಶ್ವತ್ಥನಾರಾಯಣ ಚೌಧರಿ ಎಂಬುವರು ಹೈಕೋರ್ಟ್‌ ಮೆಟ್ಟಿಲನ್ನೂ ಏರಿದ್ದಾರೆ.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ ಡಾಂಬರು ರಸ್ತೆಗಳಿದ್ದವು. ಈಗ ಜಲ್ಲಿ ರಸ್ತೆಯೂ ಇಲ್ಲದೆ ಕಲ್ಲು–ಗುಂಡಿಗಳ ಹಾದಿಯಾಗಿದೆ. ಬಿಬಿಎಂಪಿಗೆ ಸೇರ್ಪಡೆಯಾದರೆ ಬಡಾವಣೆ ಅಭಿವೃದ್ಧಿ ಆಗಲಿದೆ ಎಂದು ಕನಸು ಕಂಡಿದ್ದೆವು. ವಾಸ್ತವವಾಗಿ ಎಲ್ಲವೂ ತಲೆಕೆಳಗಾಗಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಈ ನಡುವೆ, ರಸ್ತೆಗಳ ಮರು ನಿರ್ಮಾಣ ಕಾಮಗಾರಿ ಆರಂಭಿಸಲು ಸರ್ಕಾರ ಇತ್ತೀಚೆಗೆ ₹1 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಬ್ಯಾಟರಾಯನಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹25 ಕೋಟಿ ಬಿಡುಗಡೆ ಮಾಡಿದರೆ, ಉಳಿದ ಕ್ಷೇತ್ರಗಳಿಗೆ ತಲಾ ₹160 ಕೋಟಿಯಿಂದ ₹210 ಕೋಟಿ ತನಕ ಬಿಡುಗಡೆ ಮಾಡಿದೆ. ಬ್ಯಾಟರಾಯನಪುರ ಕ್ಷೇತ್ರವನ್ನು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ದಾಸರಹಳ್ಳಿಯನ್ನು ಜೆಡಿಎಸ್‌ನ ಆರ್‌.ಮಂಜುನಾಥ್ ಪ್ರತಿನಿಧಿಸುತ್ತಿದ್ದಾರೆ. ಉಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಅವರಲ್ಲಿ ಮೂವರು ಪ್ರಭಾವಿ ಸಚಿವರು ಕೂಡ ಆಗಿದ್ದಾರೆ.

‘ದಾಸರಹಳ್ಳಿ ಕ್ಷೇತ್ರದ ಜನರು ಕೂಡ ನಾಗರಿಕರೇ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ರಾಜಕೀಯ ಮಾಡಬಾರದು. ರಾಜಕೀಯ ಮೇಲಾಟಕ್ಕೆ ನಾವು ನಲುಗಬೇಕಾಗಿದೆ’ ಎಂದು ಸಿಡೇದಹಳ್ಳಿ ನಿವಾಸಿ ಕೃಷ್ಣ ದೂರುತ್ತಾರೆ.

51 ಹಳ್ಳಿಗೆ ಕುಡಿಯುವ ನೀರು
ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಬಹುತೇಕ ಮುಗಿದಿದೆ. 51 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಅಧಿಸೂಚನೆಯನ್ನೂ ಹೊರಡಿಸಲಾಗಿದೆ ಎಂದು ಜಲ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

‘ಒಳಚರಂಡಿ ಸಂಪರ್ಕ ಕಲ್ಪಿಸುವ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಶೌಚ ಸಂಸ್ಕರಣಾ ಘಟಕಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಇದೀಗ ಟೆಂಡರ್ ಕರೆಯಲಾಗಿದೆ. ಕುಡಿಯುವ ನೀರಿನ ಸಂಪರ್ಕ ಮತ್ತು ಒಳಚರಂಡಿ ಕಾಮಗಾರಿ ನಿರ್ವಹಿಸುವುದು ನಮ್ಮ ಜವಾಬ್ದಾರಿ. ರಸ್ತೆ ಮರು ನಿರ್ಮಾಣ ಕಾಮಗಾರಿಯನ್ನು ಬಿಬಿಎಂಪಿ ನಿರ್ವಹಿಸಲಿದೆ. ಪ್ರಮುಖ ರಸ್ತೆಗಳನ್ನು ಅಗೆದಿರುವ ಕಾರಣ ₹89 ಕೋಟಿಯನ್ನು ಬಿಬಿಎಂಪಿಗೆ ನೀಡಲಾಗಿದೆ’ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಬಿಜೆಪಿ ಸರ್ಕಾರದಿಂದ ಮತ್ತೆ ಅನ್ಯಾಯ’
‘ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಹಿಂದಿನ ಸರ್ಕಾರ ಹಂಚಿಕೆ ಮಾಡಿದ್ದ ಅನುದಾನವನ್ನು ಮರು ಹಂಚಿಕೆ ಮಾಡಿತು. ವಿರೋಧ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಶೇ 75ರಷ್ಟು ವಾಪಸ್ ಪಡೆದುಕೊಂಡಿತು. ಈಗ 110 ಹಳ್ಳಿಗಳ ಯೋಜನೆ ಅಡಿಯಲ್ಲೂ ಇದೇ ರೀತಿ ಮಾಡಲಾಗಿದೆ. ಬಿಜೆಪಿ ಸರ್ಕಾರದಿಂದ ಮತ್ತೆ ಮತ್ತೆ ಅನ್ಯಾಯ ನಡೆಯುತ್ತಿದೆ’ ಎಂದು ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಹಿಂದಿನ ಸರ್ಕಾರ ಹಂಚಿಕೆ ಮಾಡಿದ್ದ ಅನುದಾನವನ್ನು ಮರು ಹಂಚಿಕೆ ಮಾಡಿತು. ವಿರೋಧ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಶೇ 75ರಷ್ಟು ವಾಪಸ್ ಪಡೆದುಕೊಂಡಿತು. ಈಗ 110 ಹಳ್ಳಿಗಳ ಯೋಜನೆ ಅಡಿಯಲ್ಲೂ ಇದೇ ರೀತಿ ಮಾಡಲಾಗಿದೆ. ಬಿಜೆಪಿ ಸರ್ಕಾರದಿಂದ ಮತ್ತೆ ಮತ್ತೆ ಅನ್ಯಾಯ ನಡೆಯುತ್ತಿದೆ’ ಎಂದು ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ

ಕ್ಷೇತ್ರ; ಪ್ರತಿನಿಧಿಸುವ ಶಾಸಕ; ಅನುದಾನ(₹ ಕೋಟಿಗಳಲ್ಲಿ)

ಮಹದೇವಪುರ; ಅರವಿಂದ ಲಿಂಬಾವಳಿ; 210

ಯಶವಂತಪುರ; ಎಸ್‌.ಟಿ. ಸೋಮಶೇಖರ್; 200

ಕೆ.ಆರ್‌.ಪುರ; ಬೈರತಿ ಬಸವರಾಜ; 190

ಬೆಂಗಳೂರು ದಕ್ಷಿಣ; ಎಂ. ಕೃಷ್ಣಪ್ಪ; 190

ಯಲಹಂಕ; ಎಸ್.ಆರ್. ವಿಶ್ವನಾಥ್; 160

ಬ್ಯಾಟರಾಯನಪುರ; ಕೃಷ್ಣ ಬೈರೇಗೌಡ; 25

ದಾಸರಹಳ್ಳಿ; ಆರ್.ಮಂಜುನಾಥ್; 25

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT