ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಯಿಂಗ್ ಸಿಬ್ಬಂದಿ ನಿರ್ಲಕ್ಷ್ಯ: ‘ಕಿಯಾ’ ಕಾರು ಜಖಂ

ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ, ಕಾರಿನ ಮಾಲೀಕ–ಏಜೆನ್ಸಿ ಪ್ರತಿನಿಧಿ ನಡುವೆ ಸಂಧಾನ?
Last Updated 4 ಸೆಪ್ಟೆಂಬರ್ 2021, 21:34 IST
ಅಕ್ಷರ ಗಾತ್ರ

ಬೆಂಗಳೂರು: ‘ನೋ ಪಾರ್ಕಿಂಗ್’ ಸ್ಥಳದಲ್ಲಿ ನಿಲ್ಲಿಸಿದ್ದ ‘ಕಿಯಾ’ ಕಾರು ಟೋಯಿಂಗ್ ಮಾಡುವ ವೇಳೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವ ಆರೋಪ ವ್ಯಕ್ತವಾಗಿದ್ದು, ಕಾರಿನ ಮುಂಭಾಗ ಜಖಂ ಗೊಂಡಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಟೋಯಿಂಗ್ ಸಿಬ್ಬಂದಿ ನಿರ್ಲಕ್ಷ್ಯದ ವಿಡಿಯೊವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

‘ದುಬಾರಿ ಬೆಲೆಯ ಕಾರನ್ನು ಬೇಕಾಬಿಟ್ಟಿ ಎಳೆದಾಡಿ ಮುಂಭಾಗ ಜಖಂ ಮಾಡಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಆಗಿದ್ದೇನು?: ಉತ್ತರ ಭಾರತದ ವ್ಯಕ್ತಿಯೊಬ್ಬರು ತಮ್ಮ ‘ಕಿಯಾ’ ಕಾರನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಸ್ಥಳಕ್ಕೆ ಬಂದಿದ್ದ ‘ಟೈಗರ್’ ವಾಹನ (ಕೆಎ 51 ಎಇ 8775) ಸಿಬ್ಬಂದಿ, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ (ಎಎಸ್‌ಐ) ಸಮ್ಮುಖದಲ್ಲಿ ಕಾರು ಟೋಯಿಂಗ್ ಮಾಡಲು ಮುಂದಾಗಿದ್ದರು.

ಕಾರಿನ ಮುಂಭಾಗದ ಎರಡು ಚಕ್ರಗಳಿಗೆ ಕ್ರೇನ್‌ನ ಕಬ್ಬಿಣದ ರಾಡ್‌ ಗಳನ್ನು ಹಾಕಿದ್ದ ಸಿಬ್ಬಂದಿ, ಕಾರು ಮೇಲೆತ್ತಲು ಮುಂದಾಗಿದ್ದರು. ಆದರೆ, ಟೋಯಿಂಗ್ ಸಾಧ್ಯವಾಗಿರಲಿಲ್ಲ. ಇದೇ ರೀತಿ ನಾಲ್ಕೈದು ಬಾರಿ ಯತ್ನಿಸಿದಾಗ ಕಾರಿನ ಬಂಪರ್ ಮುರಿಯಿತು. ಅಷ್ಟಕ್ಕೆ ಬಿಡದ ಸಿಬ್ಬಂದಿ, ಪದೇ ಪದೇ ಕಾರು ಮೇಲೆತ್ತಲು ಯತ್ನಿಸಿದ್ದರು. ಇದರಿಂದ ಕಾರಿನ ಹೆಡ್‌ಲೈಟ್‌ಗಳು ಒಡೆದವು. ಮುಂಭಾಗ ಸಂಪೂರ್ಣ ಜಖಂಗೊಂಡು, ಎಂಜಿನ್‌ ಭಾಗಗಳು ಹೊರಗೆ ಬಿದ್ದಿದ್ದವು. ಈ ಸ್ಥಿತಿಯಲ್ಲೂ ಸಿಬ್ಬಂದಿ, ಟೋಯಿಂಗ್ ಮುಂದುವರಿಸಿದ್ದರು.

ಟೋಯಿಂಗ್ ಸಿಬ್ಬಂದಿ ಕೆಲಸ ನೋಡಿದ್ದ ಸ್ಥಳೀಯರು, ‘ಒಳ್ಳೆಯ ಕೆಲಸ ಮಾಡುತ್ತಿದ್ದೀರಾ. ಕಾರು ಸಂಪೂರ್ಣ ಗುಜರಿ ಸೇರುವವರೆಗೂ ಬಿಡಬೇಡಿ’ ಎಂದು ಕೂಗಿ ಹೇಳಿ ಚಪ್ಪಾಳೆ ತಟ್ಟಿ ವ್ಯಂಗ್ಯವಾಡಿದರು. ಸಿಬ್ಬಂದಿ ಕೆಲಸಕ್ಕೆ ಆಕ್ರೋಶ ಸಹ ವ್ಯಕ್ತಪಡಿಸಿದರು.

ಸಂಧಾನ: ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದಂತೆ ಟೋಯಿಂಗ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ‘ಕಿಯಾ’ ಕಾರಿನ ಮಾಲೀಕ ಯಾವುದೇ ದೂರು ನೀಡಲಿಲ್ಲ. ಟೋಯಿಂಗ್ ಏಜೆನ್ಸಿ ಪ್ರತಿನಿಧಿಯೇ ಕಾರಿನ ಮಾಲೀಕನ್ನು ಸಂಪರ್ಕಿಸಿ ಸಂಧಾನ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ನಿಯಮ‌ ಪಾಲನೆಗೆ ಪೊಲೀಸರಿಗೆ ಗೃಹಸಚಿವ ತಾಕೀತು
'ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡುವ ಸಂದರ್ಭದಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಪೊಲೀಸರು ಕಡ್ಡಾಯವಾಗಿ ಪಾಲಿಸಬೇಕು‘ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ರವಿಕಾಂತೇಗೌಡ ಅವರೊಂದಿಗೆ ಶುಕ್ರವಾರ ಸಭೆ ನಡೆಸಿದ ಸಚಿವ, ವಾಹನಗಳ ಟೋಯಿಂಗ್ ವೇಳೆ ನಿಯಮ ಉಲ್ಲಂಘನೆ ಆಗದಂತೆ ತಡೆಯಬೇಕೆಂದು ಸೂಚಿಸಿದ್ದಾರೆ.

'ಟೋಯಿಂಗ್ ಮೊದಲು ಸೈರನ್ ಮೊಳಗಿಸಬೇಕು ಮತ್ತು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಬೇಕು. ಸ್ಥಳದಲ್ಲೇ ವಾಹನ ಮಾಲೀಕರು ಇದ್ದರೆ, ಟೋಯಿಂಗ್ ಮಾಡಬಾರದು. ನೋ ಪಾರ್ಕಿಂಗ್ ಉಲ್ಲಂಘನೆಗೆ ಸ್ಥಳದಲ್ಲೇ ಮಾಲೀಕರಿಗೆ ದಂಡ ಮಾತ್ರ ವಿಧಿಸಬೇಕು’ ಎಂದೂ ನಿರ್ದೇಶನ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT