ಶುಕ್ರವಾರ, ಜುಲೈ 1, 2022
26 °C

ಗಾಳಿಯ ಗುಣಮಟ್ಟ: ಉತ್ತಮದಿಂದ ‘ಸಮಾಧಾನಕರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಅವಧಿಯಲ್ಲಿ ಇಳಿಕೆ ಕಂಡಿದ್ದ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ), ಕಳೆದೊಂದು ತಿಂಗಳಿನಿಂದ ಏರುಗತಿ ಪಡೆದಿದೆ. ಇದರಿಂದಾಗಿ ಎಕ್ಯುಐ ‘ಉತ್ತಮ’ ಹಂತದಿಂದ ‘ಸಮಾಧಾನಕರ’ ಹಂತಕ್ಕೆ ತಲುಪಿದೆ. 

ಲಾಕ್‌ಡೌನ್ ಹಾಗೂ ಕೋವಿಡ್ ಪ್ರಕರಣಗಳ ಏರಿಕೆಯಿಂದ ನಗರದಲ್ಲಿ ವಾಹನ ಸಂಚಾರ ವಿರಳವಾಗಿ, ಏಪ್ರಿಲ್‌ನಿಂದ ಜುಲೈವರೆಗೆ ಎಕ್ಯುಐ ಇಳಿಕೆ ಕಂಡಿತ್ತು. ನಗರದಲ್ಲಿನ ಚಟುವಟಿಕೆಗಳು ಕೂಡ ಸಂಪೂರ್ಣ ಸ್ಥಗಿತವಾಗಿದ್ದರಿಂದ ಹೆಬ್ಬಾಳ, ಪೀಣ್ಯ, ಜಯನಗರ ಸೇರಿದಂತೆ ಬಹುತೇಕ ಕಡೆ ಉತ್ತಮ ಹಂತದಲ್ಲಿತ್ತು.

ಲಾಕ್‌ಡೌನ್ ಸಡಿಲಿಕೆ, ಶಾಲಾ–ಕಾಲೇಜುಗಳು ಪ್ರಾರಂಭ ಹಾಗೂ ಕಂಪನಿಗಳು ಬಾಗಿಲು ತೆರೆಯುತ್ತಿರುವುದರಿಂದ ವಾಹನಗಳ ಸಂಚಾರ ಒಮ್ಮೆಲೇ ಹೆಚ್ಚಳವಾಗಿದೆ. ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ಕೆಲವೆಡೆ ಬೆಳಿಗ್ಗೆ ಮತ್ತು ಸಂಜೆಯ ಅವಧಿ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರಿಂದಾಗಿ ಉತ್ತಮ ಹಂತಕ್ಕೆ ಇಳಿಕೆಯಾಗಿದ್ದ ಗಾಳಿಯ ಗುಣಮಟ್ಟ ಸೂಚ್ಯಂಕವು ಸಮಾಧಾನಕರ ಮತ್ತು ಮಧ್ಯಮ ಹಂತಕ್ಕೆ ತಲುಪಿದೆ. ಗಾಳಿಯಲ್ಲಿನ ಮಲಿನಕಾರಕ ಕಣಗಳು ಹೆಚ್ಚಳವಾಗಿವೆ.

ಮುಂದಿನ ದಿನಗಳಲ್ಲಿ ಎಕ್ಯುಐ ಇನ್ನಷ್ಟು ವ್ಯತ್ಯಯವಾಗುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಕಳವಳ ವ್ಯಕ್ತಪಡಿಸಿದೆ. 

‌‘ಗಾಳಿಯ ಗುಣಮಟ್ಟದ ಸೂಚ್ಯಂಕವು 50ರ ಒಳಗಡೆಯಿದ್ದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ. ಎಕ್ಯುಐ 51ರಿಂದ 100ರ ಒಳಗಡೆ ಇದ್ದಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. 101ರಿಂದ 200ರ ಗಡಿಯ ನಡುವೆ ಇದ್ದಲ್ಲಿ ಶ್ವಾಸಕೋಶ, ಹೃದಯ ಕಾಯಿಲೆಗಳು ಕೂಡ ಬರಬಹುದು. ಲಾಕ್‌ಡೌನ್ ಸಡಿಲಿಕೆಯಾಗುತ್ತಿದಂತೆ ಜನರ ಓಡಾಟ ಹೆಚ್ಚಳವಾಗಿದೆ. ವಿವಿಧ ಕಾಮಗಾರಿಗಳಿಗೆ ಈಗ ವೇಗ ನೀಡಲಾಗುತ್ತಿದೆ. ಇದರಿಂದಾಗಿ ಎಕ್ಯುಐ ಹೆಚ್ಚಳವಾಗಿದೆ’ ಎಂದು ಮಂಡಳಿಯ ಹಿರಿಯ ಪರಿಸರ ಅಧಿಕಾರಿಯೊಬ್ಬರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು