ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿ ಸಂಸ್ಕರಿತ ನೀರು: 6 ಎಂಎಲ್‌ಡಿಗೆ ಬೇಡಿಕೆ

ಸ್ನೇಹ ರಮೇಶ್
Published 19 ಏಪ್ರಿಲ್ 2024, 18:21 IST
Last Updated 19 ಏಪ್ರಿಲ್ 2024, 18:21 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ಹಾಗೂ ಕೊಳವೆಬಾವಿ ನೀರನ್ನು ಕಟ್ಟಡ ನಿರ್ಮಾಣ ಹಾಗೂ ಇತರೆ ಚಟುವಟಿಕೆಗಳಿಗೆ ಬಳಸದಂತೆ ಜಲಮಂಡಳಿ ನಿರ್ಬಂಧಿಸಿ 45 ದಿನಗಳು ಕಳೆದಿದ್ದು, ಸಂಸ್ಕರಿತ ನೀರಿನ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ.

ಜಲಮಂಡಳಿ ಈ ಮೊದಲು ಪ್ರತಿನಿತ್ಯ 60 ಸಾವಿರ ಲೀಟರ್‌ ಸಂಸ್ಕರಿತ ನೀರನ್ನು ಮಾರಾಟ ಮಾಡುತ್ತಿತ್ತು. ಇದೀಗ ಈ ಪ್ರಮಾಣ 60 ಲಕ್ಷ ಲೀಟರ್‌ಗೆ (6 ಎಂಎಲ್‌ಡಿ) ತಲುಪಿದೆ.

ಸಂಸ್ಕರಿತ ನೀರಿನ ಬಳಕೆಗೆ ಸೂಚನೆ ನೀಡಿದ್ದರಿಂದ, ಅದರಿಂದ ಉಳಿದ ನೀರನ್ನು ಕೊರತೆ ಇರುವ ಪ್ರದೇಶಗಳಿಗೆ ಸರಬರಾಜು ಮಾಡಲು ಸಾಧ್ಯವಾಯಿತು ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

‘ಸಂಸ್ಕರಿತ ನೀರನ್ನು ಕುಡಿಯುವುದಕ್ಕೆ ಹೊರತಾಗಿ ಬಳಸುವುದೇ ಮುಂದಿನ ಯೋಜನೆ. ಈ ಹಿಂದೆ ಇದರ ಬಗ್ಗೆ ಅರಿವು ಇರಲಿಲ್ಲ. ಇದೀಗ, ಎಲ್ಲೆಡೆ ಜಾಗೃತಿ ಮೂಡಿಸಿರುವುದರಿಂದ ಸಂಸ್ಥೆಗಳಿಂದಲೂ ಬೇಡಿಕೆ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕಾವೇರಿ ಹಾಗೂ ಕೊಳವೆಬಾವಿ ನೀರಿನ ಮೇಲಿನ ಅವಲಂಬನೆ ಕಡಿಮೆಯಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

‘ಪ್ರಸ್ತುತ ಕಟ್ಟಡ ನಿರ್ಮಾಣ ಕ್ಷೇತ್ರದಿಂದ ಸಂಸ್ಕರಿತ ನೀರಿಗೆ ಬೇಡಿಕೆ ಇದೆ. ಐಟಿ ಕಂಪನಿಗಳು ಹಾಗೂ ವಾಣಿಜ್ಯ ಸಂಸ್ಥೆಗಳೂ ಸಂಸ್ಕರಿತ ನೀರು ಬಳಸುವಂತೆ ಜಲಮಂಡಳಿ ಸೂಚಿಸುತ್ತಿದೆ. ಜಲಮಂಡಳಿ ಇದೀಗ 1,200 ಎಂಎಲ್‌ಡಿ ಸಂಸ್ಕರಿತ ನೀರನ್ನು ಉತ್ಪಾದಿಸುತ್ತಿದೆ. ಅಧಿಕ ನೀರು ಬಳಸುವ ಗ್ರಾಹಕರೂ ತಮ್ಮಲ್ಲೇ ಸಂಸ್ಕರಿಸುತ್ತಿರುವ ನೀರನ್ನು ಇದೀಗ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಂತಹ ಗ್ರಾಹಕರಿಗೆ ನಾವು ಪೂರೈಸುತ್ತಿರುವ ನೀರಿನಲ್ಲಿ ಶೇ 20ರಷ್ಟು ಕಡಿತಗೊಳಿಸಿದ್ದೇವೆ. ಹೀಗಾಗಿ ಅವರಿಗೆ ಸಂಸ್ಕರಿಸಿದ ನೀರಿನ ಮೌಲ್ಯದ ಅರಿವಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಜಲಮಂಡಳಿ ಈವರೆಗೂ ಸಂಸ್ಕರಿಸಿದ ನೀರನ್ನು ಟ್ಯಾಂಕರ್‌ ಮೂಲಕ ಪೂರೈಸುತ್ತಿದೆ. ಮುಂದಿನ ದಿನಗಳಲ್ಲಿ, ಕೈಗಾರಿಕೆಗಳು ಹಾಗೂ ಎಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಬೇಡಿಕೆ ಇದೆಯೋ ಆ ಪ್ರದೇಶಗಳಿಗೆ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರನ್ನು ಪೂರೈಸಲು ಯೋಜಿಸಲಾಗಿದೆ. ಅಧಿಕ ಪ್ರಮಾಣದಲ್ಲಿ ನೀರು ಬಳಸುವವರೂ ಪೈಪ್‌ಲೈನ್‌ ಮೂಲಕ ಸಂಸ್ಕರಿಸಿದ ನೀರು ಪೂರೈಸಬೇಕೆಂದು ಬೇಡಿಕೆ ಇರಿಸಿದ್ದು, ಇದು ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ಜಲಮಂಡಳಿ ತನ್ನ ಎಸ್‌ಟಿಪಿಗಳಿಂದ ಸಂಸ್ಕರಿಸಿದ ನೀರನ್ನು ಪೂರೈಸುವ ಜೊತೆಗೆ, ಅಪಾರ್ಟ್‌ಮೆಂಟ್‌ಗಳಲ್ಲಿರುವ ಸಂಸ್ಕರಿಸಿದ ನೀರನ್ನು ಮಾರಾಟ ಮಾಡುವ ಸೌಲಭ್ಯವನ್ನೂ ಕಲ್ಪಿಸಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ರಾಜ್ಯ ಸರ್ಕಾರದ ಇತ್ತೀಚೆಗೆ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT