ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ: ಪ್ರಾಣಿ -ಪಕ್ಷಿಗಳ ದಾಹ ತಣಿಸಲು ಕೆರೆ ತುಂಬಿಸಿದ ಟ್ರಸ್ಟ್

Published 12 ಸೆಪ್ಟೆಂಬರ್ 2023, 23:31 IST
Last Updated 12 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ಬೈಲಮೂರ್ತಿ ಜಿ.

***

ಹೆಸರಘಟ್ಟ: ಈ ಬಾರಿಯ ಮುಂಗಾರು ವಿಫಲವಾಗಿ ಮಳೆ ಇಲ್ಲದೇ ಕೆರೆ-ಕಟ್ಟೆಗಳು ಒಣಗುತ್ತಿದ್ದರೂ, ಹೋಬಳಿಯ ಬೊಮ್ಮಶೆಟ್ಟಿಹಳ್ಳಿ ಕೆರೆ ಮಾತ್ರ ತುಂಬಿ ತುಳುಕುತ್ತಿದೆ. ಇದರಿಂದ ಪ್ರಾಣಿ ಪಕ್ಷಿಗಳು, ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳು ದಾಹ ನೀಗಿಸಿಕೊಳ್ಳುತ್ತಿವೆ. ಅಂತರ್ಜಲ ವೃದ್ಧಿಗೂ ನೆರವಾಗಿದೆ.

ಮುಂಗಾರು ಮಳೆ ತಡವಾಗಿತ್ತು. ಜುಲೈಯಲ್ಲಿ ಮಳೆ ಬಂತಾದರೂ ಆಗಸ್ಟ್‌ನಲ್ಲಿ ಕಣ್ಮರೆಯಾಗಿತ್ತು. ಇದರಿಂದ ಸಮೃದ್ಧವಾಗಿರಬೇಕಿದ್ದ ಕೆರೆಗಳು ಒಣಗಿದ್ದವು. ಮಳೆಯನ್ನೇ ಆಶ್ರಯಿಸಿರುವ ರೈತರ ಬೆಳೆಗಳು ಒಣಗಿವೆ. ಜಾನುವಾರುಗಳು, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಂತಾಗಿತ್ತು.

ಇದನ್ನು ಗಮನಿಸಿದ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಉದ್ಯಮಿ ವಿ. ರಾಮಸ್ವಾಮಿ ತಮ್ಮ ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ನೆರವಿನಿಂದ ₹ 2.50 ಲಕ್ಷ ಖರ್ಚಿನಲ್ಲಿ‌ ಕೆರೆ ಪಕ್ಕದಲ್ಲೇ ಕೊಳವೆಬಾವಿ ಕೊರೆಸಿ, ಮೋಟಾರು ಅಳವಡಿಸಿ ಕೆರೆಗೆ ನೀರು ಹರಿಸಿದ್ದಾರೆ.

ಈಗ ನೂರಾರು ದನ-ಕರುಗಳು, ಪ್ರಾಣಿ-ಪಕ್ಷಿಗಳು ದಾಹ ನೀಗಿಸಿಕೊಳ್ಳುತ್ತಿವೆ. ಅಂತರ್ಜಲ ಮಟ್ಟ ಉತ್ತಮವಾಗಿದ್ದು ಸುತ್ತ ಮುತ್ತಲಿನ ರೈತರ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಸುಸ್ಥಿತಿಯಲ್ಲಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಯಾವ ಕೆರೆಯಲ್ಲೂ ನೀರಿಲ್ಲ: ಕಳೆದ ಬಾರಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದರಿಂದ ಹೆಸರಘಟ್ಟ ಕೆರೆ ತುಂಬುವ ಹಂತ ತಲುಪಿತ್ತು. ಹಿಂದಿನ ಬಾರಿಯ ಸಂಗ್ರಹ ಹೊರತುಪಡಿಸಿ ಹೊಸದಾಗಿ ಹೆಚ್ಚು ನೀರು ಬಂದಿಲ್ಲ. ಅಲ್ಲದೇ ಹೆಸರಘಟ್ಟ ಹೋಬಳಿಯ ಹಲವು ಕೆರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿದ್ದು ಈ ವರ್ಷ ತುಂಬುವ ಲಕ್ಷಣಗಳಿಲ್ಲ. ಈ ಮಧ್ಯೆ ಹೆಸರಘಟ್ಟ ಕೆರೆಗೆ ತಮ್ಮ ಸ್ವಂತ ದುಡ್ಡಿಂದ ನೀರು ತುಂಬಿಸಿರುವ ಹಿತಚಿಂತನಾ ಚಾರಿಟಬಲ್ ಟ್ರಸ್ಟ್‌ನ ವಿ. ರಾಮಸ್ವಾಮಿ ಅವರ ಕಾರ್ಯ ಜನ ಮನ್ನಣೆಗೆ ಪಾತ್ರವಾಗಿದೆ.-

ಕೆರೆಗೆ ನೀರು ತುಂಬಿಸಿರುವ ಚಿತ್ರ
ಕೆರೆಗೆ ನೀರು ತುಂಬಿಸಿರುವ ಚಿತ್ರ
ಟ್ರಸ್ಟ್ ಮೂಲಕ ರಾಮಸ್ವಾಮಿಯವರು ಮೂಕ ಪ್ರಾಣಿಗಳ ದಾಹವನ್ನು ನೀಗಿಸುತ್ತಿರುವ ಕಾರ್ಯ ಎಲ್ಲರಿಗೂ ಮಾದರಿ.
-ರಾಮಾಂಜನೇಯ, ಸ್ಥಳೀಯ ರೈತ
ಮಳೆಯ ಕೊರತೆಯಿಂದ ಪ್ರಾಣಿ ಪಕ್ಷಿಗಳಿಗೆ ಉಂಟಾಗಿದ್ದ ನೀರಿನ ಅಭಾವವನ್ನು ಹಿತಚಿಂತನಾ ಚಾರಿಟಬಲ್ ಟ್ರಸ್ಟ್‌ ನೀಗಿಸಿದೆ
-ಭಾಗ್ಯಮ್ಮ ಗೋಪಾಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ
ಜಾನುವಾರುಗಳು ಪ್ರಾಣಿ ಪಕ್ಷಿಗಳು ಬೇಸಿಗೆಯಲ್ಲಿ ನೀರಿಗಾಗಿ ಪರಿತಪಿಸುತ್ತಿದ್ದನ್ನು ಕಂಡು ಶಾಶ್ವತ ಪರಿಹಾರಕ್ಕಾಗಿ ಕೊಳವೆಬಾವಿ ಕೊರೆಸಿದೆ.
-ವಿ.ರಾಮಸ್ವಾಮಿ ಮ್ಯಾನೇಜಿಂಗ್ ಟ್ರಸ್ಟಿ ಹಿತಚಿಂತನಾ ಚಾರಿಟಬಲ್ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT