ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುಭಾಷೆಯಲ್ಲೇ ಗ್ರಾಹಕ ಸೇವೆ ನೀಡಿ

‘ಸರ್ವ್‌ಇನ್‌ಮೈಲ್ಯಾಂಗ್ವೇಜ್‌’ ಹ್ಯಾಷ್‌ ಟ್ಯಾಗ್‌ ಬಳಸಿ ಅಭಿಯಾನ
Last Updated 25 ಡಿಸೆಂಬರ್ 2019, 2:56 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ‘ಕನ್ನಡ ಗ್ರಾಹಕರ ಕೂಟ’ ಮಂಗಳವಾರ ಈ ಕುರಿತು ಏರ್ಪಡಿಸಿದ್ದ ‘ನನ್ನ ಭಾಷೆಯಲ್ಲೇ ಸೇವೆ ಕೊಡಿ’ ಟ್ವೀಟಥಾನ್‌ಗೆ ಭಾರಿ ಬೆಂಬಲ ವ್ಯಕ್ತವಾಯಿತು. ರಾಜ್ಯದಲ್ಲಿ ಎಲ್ಲ ಗ್ರಾಹಕ ಸೇವೆಗಳು ಆಡುಭಾಷೆ ಕನ್ನಡದಲ್ಲೇ ಸಿಗಬೇಕು ಎಂದು ಟ್ವಿಟರ್‌ನಲ್ಲಿ ಒತ್ತಾಯಿಸಿದರು.

ಗ್ರಾಹಕ ಸೇವೆಗಳನ್ನು ತಾಯಿ ನುಡಿಯಲ್ಲೇ ಏಕೆ ನೀಡಬೇಕು, ಸೇವೆ ಕುರಿತ ಮಾಹಿತಿ ಇಂಗ್ಲಿಷ್‌ ಅಥವಾ ಹಿಂದಿಗೆ ಸೀಮಿತವಾದರೆ ಏನೆಲ್ಲ ಅನಾನುಕೂಲಗಳಾಗುತ್ತವೆ, ಆಡುನುಡಿಯಲ್ಲೇ ಮಾಹಿತಿ ನೀಡಿದರೆ ಸೇವಾ ಕಂಪನಿಗಳಿಗೆ ಅಥವಾ ಸರ್ಕಾರಗಳಿಗೆ ಪ್ರಯೋಜನಗಳೇನು, ಅರ್ಥವಾಗದ ಭಾಷೆಗಳಲ್ಲಿ ಸೇವೆ ಸಿಗದಿದ್ದರೆ ಜನ ಅನುಭವಿಸುವ ಬವಣೆಗಳೇನು ಎಂಬುದನ್ನು ಟ್ವಿಟಿಗರು ತಮ್ಮ ಟ್ವೀಟ್‌ಗಳ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟರು.

‘ಸರ್ವ್‌ಇನ್‌ಮೈಲ್ಯಾಂಗ್ವೇಜ್‌’ (servInMyLanguage) ಹ್ಯಾಷ್‌ ಟ್ಯಾಗ್‌ ಬಳಸಿ ನಡೆಸಲಾದ ಈ ಟ್ವೀಟ್ ಅಭಿಯಾನವು ಬೆಂಗಳೂರು ನಗರದ ಮಟ್ಟಿಗೆ ಕೆಲಹೊತ್ತು ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ತಮಿಳು, ತೆಲುಗು, ಮರಾಠಿ ಭಾಷಿಗರೂ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

‘ಒಸಿಆರ್‌ ತಂತ್ರಜ್ಞಾನಗಳನ್ನು ಕನ್ನಡದಲ್ಲಿ ಹೊಂದಿದ್ದೇವೆ. ಆದರೂ, ಕೇಂದ್ರ ಸರ್ಕಾರದ 150ಕ್ಕೂ ಅಧಿಕ ವೆಬ್‌ಸೈಟ್‌ಗಳಲ್ಲಿ ಮೂರಕ್ಕಿಂತಲೂ ಕಡಿಮೆ ವೆಬ್‌ಸೈಟ್‌ಗಳಲ್ಲಿ ಮಾತ್ರ ಕನ್ನಡವನ್ನು ಕಾಣಬಹುದಾಗಿದೆ’ ಎಂದು ಕನ್ನಡ ಗ್ರಾಹಕರ ಕೂಟದ ಅರುಣ್‌ ಜಾವಗಲ್‌ ನೋವು ತೋಡಿಕೊಂಡರು.

‘ನಾವು ಪ್ರತಿವರ್ಷ ರಾಷ್ಟ್ರಿಯ ಗ್ರಾಹಕರ ದಿನಾಚರಣೆಯಂದು ಹಾಗೂ ಜಾಗತಿಕ ಗ್ರಾಹಕರ ದಿನದಂದು (ಮಾ. 15) ಗ್ರಾಹಕ ಭಾಷೆಯಲ್ಲೇ ಸೇವೆ ಸಿಗಬೇಕೆಂದು ಒತ್ತಾಯಿಸಿ ಟ್ವೀಟಥಾನ್‌ ನಡೆಸುತ್ತೇವೆ. ಸುಮಾರು ಐದು ವರ್ಷಗಳಿಂದ ಇದನ್ನು ಚಾಚೂತಪ್ಪದೇ ಈ ಅಭಿಯಾನ ನಡೆಸುತ್ತಿದ್ದೇವೆ. ಈ ಬಾರಿಈ ಕುರಿತು 5ಸಾವಿರಕ್ಕೂ ಅಧಿಕ ಮಂದಿ ಟ್ವೀಟ್‌ ಮಾಡಿದ್ದಾರೆ. 214 ಟ್ವಿಟಿಗರು ಸಕ್ರಿಯವಾಗಿ ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. 15 ಲಕ್ಷ ಮಂದಿಯನ್ನೂ ಈ ಅಭಿಯಾನದ ಮೂಲಕ ತಲುಪಿದ್ದೇವೆ’ ಎಂದು ಕನ್ನಡ ಗ್ರಾಹಕರ ಕೂಟದ ಬಾಬು ಅಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆಯ್ದ ಕೆಲವು ಟ್ವೀಟ್‌ಗಳು

ಎಲ್ಲ ಸೇವೆಗಳನ್ನು ತನಗೆ ಬೇಕಾದ ಭಾಷೆಯಲ್ಲಿ ಪಡೆಯುವುದು ಗ್ರಾಹಕನ ಹಕ್ಕು. ವಿಮಾನಯಾನ, ರೈಲ್ವೆ ಸಂಚಾರ, ಬ್ಯಾಂಕಿಂಗ್‌ ಸೇವೆ, ಮನರಂಜನೆ ಸೇರಿದಂತೆ ಎಲ್ಲ ಸೇವೆಗಳನ್ನು ಗ್ರಾಹಕನಿಗೆ ಆತನ ಭಾಷೆಯಲ್ಲೇ ಒದಗಿಸುವುದು ಸಂಸ್ಥೆಗಳ, ಸರ್ಕಾರಗಳ ಕರ್ತವ್ಯ.
–ಪ್ರಜ್ವಲ್‌ ರೇವಣ್ಣ,ಸಂಸದ, ಹಾಸನ

ಡ್ರಗ್ಸ್‌ ಮತ್ತು ಕಾಸ್ಮೆಟಿಕ್ಸ್‌ ಕಾಯ್ದೆ ಪ್ರಕಾರ ಔಷಧದ ಮಾಹಿತಿಯನ್ನು ಇಂಗ್ಲಿಷ್‌, ಹಿಂದಿಯಲ್ಲಿ ನೀಡಿದರೆ ಸಾಕು. ಹಾಗಾದರೆ ಈ ಭಾಷೆ ಬಾರದ ಗ್ರಾಹಕರ ಪಾಡೇನು?
–ಅರುಣ್ ಜಾವಗಲ್‌

ಕರ್ನಾಟಕದಲ್ಲಿರುವ ಬಹುತೇಕ ಬ್ಯಾಂಕ್‌ಗಳು ಗ್ರಾಹಕರ ಭಾಷೆಯನ್ನು ಕಡೆಗಣಿಸಿವೆ. ಬ್ಯಾಂಕಿನ ಅಧಿಕಾರಿಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಗ್ರಾಹಕರನ್ನು ಒತ್ತಾಯಿಸುತ್ತಾರೆ. ಇದು ಗ್ರಾಹಕರ ಹಕ್ಕುಗಳಿಗೆ ತದ್ವಿರುದ್ಧ
–ಸಂಜಯ್‌ ಜಿ.ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT