ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ರಾಜಕಾಲುವೆ ತಡೆಗೋಡೆ ಕುಸಿತ: ಲೋಪ ಪತ್ತೆಹಚ್ಚಲು ವಿಚಾರಣೆ ನಡೆಸಿ

ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆ ತರಾಟೆ
Last Updated 30 ಜೂನ್ 2020, 7:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಉಂಟಾದ ಪ್ರವಾಹದಿಂದ ಕೆಂಗೇರಿ ಬಳಿ ವೃಷಭಾವತಿ ರಾಜಕಾಲುವೆಯ ತಡೆಗೋಡೆ ಕುಸಿದ ಘಟನೆ ಬಗ್ಗೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ಅನಾಹುತಕ್ಕೆ ಕಾರಣ ಯಾರು ಎಂಬುದನ್ನು ಪತ್ತೆಹಚ್ಚಲು ವಿಚಾರಣೆ ನಡೆಸುವಂತೆಯೂ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದೆ.

ಈ ಕುರಿತು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್ ಅವರಿಗೆ ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ‘ಮಳೆಗಾಲದಲ್ಲಿ ಅನಾಹುತಗಳು ಸಂಭವಿಸದಂತೆ ತಡೆಯಲು ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮೇ 27ರಂದೇ ಪತ್ರ ಬರೆದಿದ್ದೆವು. ಸರ್ಕಾರದ ಮುಖ್ಯ ಕಾರ್ಯದರ್ಶಿ ಮಟ್ಟದ ಸಭೆಯಲ್ಲಿ ಈ ವಿಚಾರದ ಬಗ್ಗೆ ಸಾಕಷ್ಟು ಬಾರಿ ಚರ್ಚೆಗಳು ನಡೆದಿದ್ದು, ಬಿಬಿಎಂಪಿಗೆ ಅನೇಕ ಸೂಚನೆಗಳನ್ನೂ ನೀಡಲಾಗಿತ್ತು. ಇಷ್ಟೆಲ್ಲಾ ಆದ ಬಳಿಕವೂ ಮಳೆಗೆ ಕೆಂಗೇರಿ ಬಳಿ ರಾಜಕಾಲುವೆಯ ತಡೆಗೋಡೆ ಕುಸಿದು, ಅಲ್ಲಿನ ರಸ್ತೆಯೂ ಭಾಗಶಃ ಕೊಚ್ಚಿ ಹೋಗಿದೆ. ಮೈಸೂರು ರಸ್ತೆಯಲ್ಲಿ ವಾಹನ ಸಂಚಾರದ ಮೇಲೂ ದುಷ್ಪರಿಣಾಮ ಉಂಟಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಳೆನೀರನ್ನು ಸುರಕ್ಷಿತವಾಗಿ ಸಾಗಿಸಲು ಇರುವ ಏಕೈಕ ನಾಲಾ ವ್ಯವಸ್ಥೆ ಎಂದರೆ ರಾಜಕಾಲುವೆ. ಅದರ ತಡೆಗೋಡೆಯಂತಹ ಕಾಂಕ್ರೀಟ್‌ ರಚನೆಗಳು ಪ್ರವಾಹವನ್ನು ತಾಳಿಕೊಳ್ಳುವಷ್ಟು ಗಟ್ಟಿಮುಟ್ಟಾಗಿರಬೇಕು.ಈ ಕಾಮಗಾರಿಯ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಈ ವಿಚಾರದಲ್ಲಿ ಎಲ್ಲಿ ಲೋಪವಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ನಡೆಸಬೇಕು. ತಡೆಗೋಡೆಯನ್ನು ಯಾವಾಗ ನಿರ್ಮಿಸಲಾಗಿದೆ, ಎಷ್ಟು ವೆಚ್ಚವಾಗಿದೆ ಎಂಬ ಮಾಹಿತಿಯನ್ನೂ ಒದಗಿಸಬೇಕು’ ಎಂದು ಅವರು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT