ಬುಧವಾರ, ಮಾರ್ಚ್ 29, 2023
29 °C

ಕಾವ್ಯಕ್ಕೆ ಹೊಸ ಸತ್ವ ನೀಡಿದ ಗೋಕಾಕ್: ಲೇಖಕಿ ಕಮಲಾ ಹಂಪನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕನ್ನಡ ಭಾಷೆಯಲ್ಲಿ ಪ್ರಭುತ್ವ ಹೊಂದಿದ್ದ ವಿ.ಕೃ. ಗೋಕಾಕ್ ಅವರು, ಕಾವ್ಯಕ್ಕೆ ಹೊಸ ಸತ್ವ ನೀಡಿದರು’ ಎಂದು ಲೇಖಕಿ ಕಮಲಾ ಹಂಪನಾ ಅಭಿಮತ ವ್ಯಕ್ತಪಡಿಸಿದರು.

ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಸಾಹಿತಿ ಎಸ್.ಜಿ. ಜೈನಾಪೂರ ಮತ್ತು ರಾಜ್ಯಶಾಸ್ತ್ರಜ್ಞೆ ಮೀನಾ ದೇಶಪಾಂಡೆ ಅವರಿಗೆ ‘ವಿ.ಕೃ. ಗೋಕಾಕ್ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.

‘ವಿ.ಕೃ. ಗೋಕಾಕ್ ಅವರು ಪರೋಕ್ಷವಾಗಿ ಗುರುವಾಗಿದ್ದರು. ಅವರಿಂದ ಅನೇಕ ಸಂಗತಿಗಳನ್ನು ನಮ್ಮ ಜ್ಞಾನಕೋಶಕ್ಕೆ ತುಂಬಿಕೊಂಡಿದ್ದೇವೆ. ವಿದ್ಯಾರ್ಥಿಯಾಗಿದ್ದಾಗ ಗೋಕಾಕ್‌ ಅವರ ಭಾವಗೀತೆಗಳನ್ನು ಹಾಡುತ್ತಿದ್ದೆ. 1965ರಲ್ಲಿ ‘ಸುಕುಮಾರ ಚರಿತೆ’ ಎಂಬ ಚಂಪೂ ಕಾವ್ಯವನ್ನು ಸಂಪಾದಿಸಿ, ಅವರಿಗೆ ಕಳುಹಿಸಿಕೊಟ್ಟಿದ್ದೆ. ಅವರಿಂದ ಸಿಕ್ಕ ಪ್ರತಿಕ್ರಿಯೆಯು ಬರವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡಿತ್ತು. ಇತ್ತೀಚಿನ ದಿನಗಳಲ್ಲಿ ಯಾರಿಗಾದರೂ ಪುಸ್ತಕವನ್ನು ಕಳುಹಿಸಿದರೆ, ಅದು ತಲುಪಿದೆ ಎಂದು ತಿಳಿಸುವ ಸೌಜನ್ಯವೂ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿ.ಕೃ. ಗೋಕಾಕ್ ಪ್ರಶಸ್ತಿಯನ್ನು ಪ್ರತಿವರ್ಷ ಒಬ್ಬ ಮಹಿಳೆಗೆ ನೀಡಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

ಸಾಹಿತಿ ಹಂ.ಪ. ನಾಗರಾಜಯ್ಯ, ‘ಗೋಕಾಕ್‌ ಅವರು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ನನ್ನೊಂದಿಗಿದ್ದು ಆಶೀರ್ವಾದ ಮಾಡಿದ್ದರು. ಪರಿಷತ್ತಿನ ಅಧ್ಯಕ್ಷನಾದ ಬಳಿಕ ರಚಿಸಿದ ಗ್ರಂಥ ಪ್ರಕಟಣೆ ಸಮಿತಿಯಲ್ಲಿಯೂ ಅವರು ಇದ್ದರು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಪ್ರಶಸ್ತಿ ಪುರಸ್ಕೃತ ಎಸ್.ಜಿ. ಜೈನಾಪೂರ, ‘ಯಾವುದೇ ಪ್ರಶಸ್ತಿಯನ್ನು ಬಯಸಿ ನಾನು ಕೆಲಸ ಮಾಡುತ್ತಿಲ್ಲ. ಸ್ವ ಸಂತೋಷಕ್ಕಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದೇನೆ. ಗೋಕಾಕ್‌ ಅವರು ಇಂಗ್ಲಿಷ್‌ನಲ್ಲಿ ಅದ್ವಿತೀಯ ವಿದ್ವತ್ತು ಹೊಂದಿದ್ದರು. ಆದರೆ, ಅವರ ಹೃದಯದಲ್ಲಿರುವ ಕನ್ನಡ ತಾಯಿ ಎಲ್ಲಿಯೂ ಹೋಗಲಿಲ್ಲ. ಅವರಿಗೆ ಕನ್ನಡ ಭಾಷೆಯ ಮೇಲೆ ವಿಶೇಷ ಅಭಿಮಾನವಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಮೀನಾ ದೇಶಪಾಂಡೆ, ‘ರಾಜ್ಯಶಾಸ್ತ್ರ, ಅರ್ಥಶಾಸ್ತ್ರದಂತಹ ಪಠ್ಯ ವಿಷಯಗಳಲ್ಲಿ ಕನ್ನಡದ ಪುಸ್ತಕಗಳು ವಿರಳ. ಹಾಗಾಗಿ, ಕನ್ನಡ ಭಾಷೆಗೆ ಸಾಧ್ಯವಾದಷ್ಟು ಸೇವೆ ಮಾಡಬೇಕೆಂದು ಅನುವಾದಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಗಾಂಧಿ ಸಾಹಿತ್ಯದ ಎಲ್ಲ ಸಂಪುಟಗಳನ್ನು ಕನ್ನಡಕ್ಕೆ ಅನುವಾದ ಮಾಡುವ ವಿಶ್ವಾಸವಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.