ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ನಿಗಮ ಹಗರಣ: ‘ಪ್ರಭಾವಿ’ ಮಾತು ಕೇಳಿ ಹಣ ವರ್ಗಾವಣೆ

* ₹94.73 ಕೋಟಿ ವಹಿವಾಟಿನ ದಾಖಲೆ ಸಂಗ್ರಹಿಸಿದ ಎಸ್‌ಐಟಿ * ಹಲವರಿಗೆ ನೋಟಿಸ್‌?
Published 4 ಜೂನ್ 2024, 0:00 IST
Last Updated 4 ಜೂನ್ 2024, 0:00 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ’ ಎನ್ನಲಾದ ಹಗರಣದಲ್ಲಿ ‘ಪ್ರಭಾವಿ’ಯೊಬ್ಬರು ಭಾಗಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ), ಪ್ರಭಾವಿಯ ಆಪ್ತ ಸೇರಿ ಹಲವರಿಗೆ ನೋಟಿಸ್‌ ನೀಡಲು ತಯಾರಿ ನಡೆಸಿದೆ.

ನಿಗಮದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್ ಅವರು ನೀಡಿದ್ದ ದೂರಿನಡಿ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ, ಕೃತ್ಯದಲ್ಲಿ ಭಾಗಿಯಾದವರ ಪಟ್ಟಿ ಸಿದ್ಧಪಡಿಸುತ್ತಿದೆ.

‘ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಇಒ ಮಣಿಮೇಖಲೈ, ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್‌ ರುದ್ರ, ಪಂಕಜ್ ದ್ವಿವೇದಿ ಹಾಗೂ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಸುಚಿಸ್ಮಿತಾ ರಾವಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಕೈಗೊಂಡಾಗ, ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ (55) ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ (40) ಅವರ ಸಹಿ ಇರುವ ಚೆಕ್‌ಗಳು ಪತ್ತೆಯಾಗಿದ್ದವು. ಇವುಗಳನ್ನೇ ಆಧಾರವಾಗಿಟ್ಟುಕೊಂಡು ಪದ್ಮನಾಭ ಹಾಗೂ ಪರುಶುರಾಮ್‌ ಅವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ಬಂಧಿತ ಆರೋಪಿಗಳು, ಸರ್ಕಾರಿ ನೌಕರರು, ಬ್ಯಾಂಕ್ ಅಧಿಕಾರಿಗಳು ಹಾಗೂ ಇತರರ ಜೊತೆ ಸೇರಿಕೊಂಡು ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ತಿಳಿಸಿವೆ.

‘ಇಬ್ಬರೂ ಆರೋಪಿಗಳು, ಪ್ರಭಾವಿ ವ್ಯಕ್ತಿಯೊಬ್ಬರ ಹೆಸರು ಬಾಯ್ಬಿಟ್ಟಿದ್ದಾರೆ. ಆದರೆ, ಅವರ ಹೇಳಿಕೆಯನ್ನು ಏಕಾಏಕಿ ಪರಿಗಣಿಸಲಾಗದು. ಕೃತ್ಯದಲ್ಲಿ ಭಾಗಿಯಾಗಿರುವ ಹಿನ್ನೆಲೆ ಏನು? ಹಣ ವರ್ಗಾವಣೆಯಾದ ಖಾತೆಗಳ ಖಾತೆದಾರರಿಗೂ ಹಾಗೂ ಪ್ರಭಾವಿ ವ್ಯಕ್ತಿಗೂ ಇರುವ ಸಂಬಂಧವೇನು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಹೇಳಿವೆ.

ಮೌಖಿಕ ಸೂಚನೆ: ‘ನಿಗಮದ ಹೆಸರಿನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಸಂತನಗರದ ಶಾಖೆಯಲ್ಲಿ ಎರಡು ಪ್ರತ್ಯೇಕ ಖಾತೆಗಳಿವೆ. ಈ ಪೈಕಿ ಒಂದು ಖಾತೆಯಿಂದ ₹94.73 ಹಣವನ್ನು ಅಕ್ರಮವಾಗಿ ಬೇರೆ ಖಾತೆಗಳಿಗೆ  ಕೋಟಿ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಈ ವರ್ಗಾವಣೆಗೆ, ಪ್ರಭಾವಿಯೊಬ್ಬರು ಮೌಖಿಕ ಸೂಚನೆ ನೀಡಿದ್ದರೆಂದು ಬಂಧಿತ ಆರೋಪಿಗಳು ಹೇಳುತ್ತಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಕೃತ್ಯದಲ್ಲಿ ಪ್ರಭಾವಿ ಭಾಗಿಯಾಗಿರುವ ಬಗ್ಗೆ ನ್ಯಾಯಾಲಯಕ್ಕೂ ಮಾಹಿತಿ ನೀಡಲಾಗಿದೆ. ಬಂಧಿತ ಆರೋಪಿಗಳು, ಪ್ರಭಾವಿ ಹಾಗೂ ಇತರರು ಸೇರಿಕೊಂಡು ಸಂಘಟಿತರಾಗಿ ನಿಗಮಕ್ಕೆ ನಷ್ಟವನ್ನುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಹೇಳಿವೆ.

ಏಜೆಂಟರು ಶಾಮೀಲು: ‘ನಿಗಮದ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿರುವ ಕೃತ್ಯದಲ್ಲಿ ಕೆಲ ಏಜೆಂಟರು ಶಾಮೀಲಾಗಿರುವ ಮಾಹಿತಿ ಇದೆ. ಸರ್ಕಾರದ ಹಣವನ್ನು ವ್ಯವಸ್ಥಿತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ, ಬಡ್ಡಿ ಹಾಗೂ ಇತರೆ ರೂಪದಲ್ಲಿ ಲಾಭ ಪಡೆಯುವ ಜಾಲ ಸಕ್ರಿಯವಾಗಿರುವ ಅನುಮಾನವಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ನಿಗಮದ ಹಣ ವರ್ಗಾವಣೆ ಸಂದರ್ಭದಲ್ಲಿ ಕಾನೂನು ಪಾಲನೆಯಾಗಿಲ್ಲ. ಜೊತೆಗೆ, ನಿಗಮದಲ್ಲಿರುವವರು ಹಾಗೂ ಹೊರಗಿನ ಕೆಲವರು ಅಕ್ರಮ ಹಣ ವರ್ಗಾವಣೆಗೆ ಕುಮ್ಮಕ್ಕು ನೀಡಿರುವ ಮಾಹಿತಿಯೂ ಇದೆ’ ಎಂದು ಹೇಳಿವೆ.

ಬ್ಯಾಂಕ್ ಅಧಿಕಾರಿಗಳ ವಿಚಾರಣೆ: ‘ಅಕ್ರಮ ವರ್ಗಾವಣೆಗೆ ಸಂಬಂಧಪಟ್ಟಂತೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ. ಕೆಲ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮಣಿಮೇಖಲೈ, ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್‌ ರುದ್ರ, ಪಂಕಜ್ ದ್ವಿವೇದಿ ಹಾಗೂ ಸುಚಿಸ್ಮಿತಾ ರಾವಲ್ ಅವರನ್ನು ವಿಚಾರಣೆ ನಡೆಸಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT