ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ತಿಂಗಳಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲು: ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌

Published 9 ಮಾರ್ಚ್ 2024, 16:23 IST
Last Updated 9 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ‘ಸದ್ಯ ಸುಖಾಸೀನ ಹೊಂದಿರುವ ವಂದೇ ಭಾರತ್‌ ಮಾತ್ರ ಕಾರ್ಯಾಚರಣೆಯಲ್ಲಿವೆ. ಇನ್ನು ಆರು ತಿಂಗಳಲ್ಲಿ ಸ್ಲೀಪರ್‌ ಸೌಲಭ್ಯವಿರುವ ರೈಲುಗಳು ಸಿದ್ಧಗೊಳ್ಳಲಿವೆ’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌ ತಿಳಿಸಿದರು.

ನಗರದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ಗೆ (ಬೆಮೆಲ್‌) ಅವರು ಶನಿವಾರ ಭೇಟಿ ನೀಡಿ ನಿರ್ಮಾಣವಾಗುತ್ತಿರುವ ವಂದೇ ಭಾರತ್‌ ಸ್ಲೀಪರ್‌ ರೈಲಿನ ಬೋಗಿಯನ್ನು ವೀಕ್ಷಿಸಿ ಮಾತನಾಡಿದರು.

ವಂದೇ ಭಾರತ್‌ (ಚೇರ್‌ಕಾರ್), ನಮೋ ಭಾರತ್‌ (ರ‍್ಯಾಪಿಡ್‌ ರೈಲ್‌ ಟ್ರಾನ್ಸಿಟ್‌ ಸಿಸ್ಟಂ) ಹಾಗೂ ಅಮೃತ್‌ ಭಾರತ್‌ (ಪುಶ್‌ಪುಲ್‌ ಟೆಕ್ನಾಲಜಿ) ರೈಲುಗಳ ಯಶಸ್ಸಿನ ಬಳಿಕ ವಂದೇ ಭಾರತ್‌ ಸ್ಲೀಪರ್‌ ರೈಲು ಸಿದ್ಧಗೊಳ್ಳುತ್ತಿದೆ. ಸಂಪೂರ್ಣ ಹೊಸ ವಿನ್ಯಾಸದಲ್ಲಿ ನಿರ್ಮಾಣಗೊಳ್ಳುತ್ತಿದೆ. ನಿರ್ಮಾಣ ಪೂರ್ಣಗೊಂಡ ಬಳಿಕ ನಾಲ್ಕರಿಂದ ಆರು ತಿಂಗಳ ಕಾಲ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಲಾಗುವುದು. ಅಗತ್ಯ ಇರುವಲ್ಲಿ ವಿನ್ಯಾಸ ಬದಲಾವಣೆ ಮಾಡಲಾಗುವುದು ಎಂದು ವಿವರಿಸಿದರು.

ಬೆಮೆಲ್‌ 10 ರೈಲುಗಳನ್ನು (160 ಬೋಗಿ) ನಿರ್ಮಿಸಲಿದೆ. ಈಗಿನ ವಂದೇ ಭಾರತ್‌ಗಿಂತಲೂ ವಿಶೇಷ ಸೌಲಭ್ಯಗಳನ್ನು ಸ್ಲೀಪರ್‌ ರೈಲು ಹೊಂದಿರಲಿದೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಸನಗಳ ಎತ್ತರ ವಿನ್ಯಾಸ ಮಾಡಲಾಗಿದೆ. ಹವಾನಿಯಂತ್ರಣ ವ್ಯವಸ್ಥೆ, ವೈರಸ್‌ ನಿಯಂತ್ರಣ ತಂತ್ರಜ್ಞಾನ ಇರಲಿದೆ. ತೀರಾ ಕಡಿಮೆ ಅಲುಗಾಟ ಹಾಗೂ ಕಂಪನ ವ್ಯವಸ್ಥೆ ಇರುವುದರಿಂದ ಜನ ಆರಾಮವಾಗಿ ನಿದ್ರಿಸಿ ಪ್ರಯಾಣಿಸಬಹುದು ಎಂದು ಮಾಹಿತಿ ನೀಡಿದರು.

ಅಗ್ನಿ ಅವಘಡ ನಿಯಂತ್ರಣ ಸೇರಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಳಬಾಗಿಲುಗಳಿಗೆ ಸೆನ್ಸಾರ್‌ ಅಳವಡಿಕೆ, ವಾಸನೆ ಮುಕ್ತ ಶೌಚಾಲಯ, ಚಾಲನಾ ವಿಭಾಗದಲ್ಲಿ ಶೌಚಾಲಯ ಇರಲಿದೆ. ಮೊದಲ ದರ್ಜೆ ಎಸಿ ಕಾರ್‌ನಲ್ಲಿ ಬಿಸಿನೀರಿನ ಶವರ್‌, ಯುಎಸ್‌ಬಿ ಚಾರ್ಜಿಂಗ್‌, ದೃಶ್ಯ ಮಾಹಿತಿ ಸೌಲಭ್ಯ ಇರಲಿದೆ ಎಂದು ವಿವರಿಸಿದರು.

ಕೆಲ ಬದಲಾವಣೆ ಜೊತೆಗೆ ಇನ್ನೂ 100 ಅಮೃತ್‌ ಭಾರತ್‌ ರೈಲು ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ಅಶ್ವಿನಿ ವೈಷ್ಣವ್‌ ತಿಳಿಸಿದರು.

ಬೆಂಗಳೂರಿನ ಬೆಮೆಲ್‌ ಫ್ಯಾಕ್ಟರಿಯಲ್ಲಿ ಸಿದ್ಧಗೊಳ್ಳುತ್ತಿರುವ ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲಿನ ಬೋಗಿಯ ಒಳಭಾಗದ ದೃಶ್ಯ –ಪ್ರಜಾವಾಣಿ ಚಿತ್ರ-
ಬೆಂಗಳೂರಿನ ಬೆಮೆಲ್‌ ಫ್ಯಾಕ್ಟರಿಯಲ್ಲಿ ಸಿದ್ಧಗೊಳ್ಳುತ್ತಿರುವ ದೇಶದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲಿನ ಬೋಗಿಯ ಒಳಭಾಗದ ದೃಶ್ಯ –ಪ್ರಜಾವಾಣಿ ಚಿತ್ರ-

ಕಡಿಮೆ ವೆಚ್ಚದಲ್ಲಿ ನಿರ್ಮಾಣ

‘ಜಗತ್ತಿನಲ್ಲಿಯೇ ಅತಿ ಕಡಿಮೆ ವೆಚ್ಚದಲ್ಲಿ ಈ ರೈಲು ನಿರ್ಮಾಣಗೊಳ್ಳುತ್ತಿದೆ. ನಮ್ಮದೇ ಮೆಟ್ರೊ ರೈಲಿನ ಒಂದು ಬೋಗಿಯ ವೆಚ್ಚ ₹ 9 ಕೋಟಿಯಿಂದ ₹ 10 ಕೋಟಿ ಇದ್ದರೆ ವಂದೇ ಭಾರತ್‌ ಸ್ಲೀಪರ್‌ ಬೋಗಿ ₹ 8 ಕೋಟಿಯಿಂದ ₹ 9 ಕೋಟಿಯೊಳಗೆ ನಿರ್ಮಾಣಗೊಳ್ಳುತ್ತಿದೆ. ಹೊರದೇಶಗಳ ಬದಲು ನಮ್ಮಲ್ಲೇ ನಿರ್ಮಾಣಗೊಳ್ಳುತ್ತಿರುವುದರಿಂದ ವೆಚ್ಚ ಕಡಿಮೆಯಾಗಿದೆ’ ಎಂದು ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್‌ ಮಾಹಿತಿ ನೀಡಿದರು.

ವಂದೇಭಾರತ್‌ ಸ್ಲೀಪರ್‌

16: ಬೋಗಿ ಹೊಂದಿರುವ ರೈಲು

67: ಒಂದು ಬೋಗಿಯಲ್ಲಿ ಪ್ರಯಾಣಿಸುವವರ ಸಂಖ್ಯೆ

823: ಒಂದು ರೈಲಿನಲ್ಲಿ ಪ್ರಯಾಣಿಸಬಹುದಾದ ಒಟ್ಟು ಪ್ರಯಾಣಿಕರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT