ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್ ತುಳಿಯುವಿಕೆ ರಾಷ್ಟ್ರೀಯತೆ ತುಳಿದಂತೆ: ಎಸ್.ಎಲ್. ಭೈರಪ್ಪ

‘ಸಾವರ್ಕರ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಭೈರಪ್ಪ ಅಭಿಮತ
Published 19 ಫೆಬ್ರುವರಿ 2024, 0:30 IST
Last Updated 19 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾವರ್ಕರ್ ಅವರ ಹೆಸರಿಗೆ ಏನಾದರೂ ಮಾಡಿ ಮಸಿ ಬಳಿಯಬೇಕೆಂದು ಕಾಂಗ್ರೆಸಿಗರು ನಿರಂತರ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಾವರ್ಕರ್ ಅವರನ್ನು ತುಳಿಯುವುದು ಹಾಗೂ ರಾಷ್ಟ್ರೀಯತೆ ತುಳಿಯುವುದು ಎರಡೂ ಒಂದೇ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ತಿಳಿಸಿದರು.

ಸಾಹಿತ್ಯ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರೇಂದ್ರಕುಮಾರ್ ಎಸ್‌.ಎಸ್‌. ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ (ಮೂಲ ಲೇಖಕ ವಿಕ್ರಮ್ ಸಂಪತ್) ‘ಸಾವರ್ಕರ್–ವಿಸ್ಮೃತಿಗೆ ಸರಿದ ಗತಕಾಲದ ಮಾರ್ದನಿಗಳು ಕ್ರಾಂತಿಸೂರ್ಯನ ಮೇಲೆ ಕ್ಷ–ಕಿರಣ’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.

‘ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅಗ್ರ ಸ್ಥಾನ ಪಡೆಯುತ್ತಾರೆ. ಅವರಿಗೆ ‘ಭಾರತ ರತ್ನ’ ಏಕೆ ಕೊಟ್ಟಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ‘ಭಾರತ ರತ್ನ’ ವಿಷಯದಲ್ಲಿ ಸರಿಯಾಗಿ ವಿಶ್ಲೇಷಿಸಿದರೆ ಅರ್ಹತೆ ಇದ್ದವರ ಜತೆಗೆ ಅರ್ಹತೆ ಇಲ್ಲದವರಿಗೂ ನೀಡಲಾಗಿದೆ. ನೂತನ ಸಂಸತ್ ಭವನದಲ್ಲಿ ಸಾವರ್ಕರ್ ಅವರ ಫೋಟೊ ಹಾಕಲಾಗಿದೆ. ನನ್ನ ವಿಶ್ಲೇಷಣೆ ಪ್ರಕಾರ ‘ಭಾರತ ರತ್ನ’ ಪ್ರಶಸ್ತಿ ಸಾವರ್ಕರ್ ಅವರಿಗೆ ದೊಡ್ಡದಲ್ಲ. ‘ಭಾರತ ರತ್ನ’ವನ್ನೂ ಅವರು ಮೀರಿದವರಾಗಿದ್ದಾರೆ ಎಂಬ ಕಾರಣಕ್ಕೇ ಪ್ರಧಾನಿ ನರೇಂದ್ರ ಮೋದಿ ಅವರು ಸಾವರ್ಕರ್ ಅವರಿಗೆ ಮರಣೋತ್ತರ ಈ ಪ್ರಶಸ್ತಿ ನೀಡಿರಲಿಕ್ಕಿಲ್ಲ’ ಎಂದು ಹೇಳಿದರು.

‘ಸಾವರ್ಕರ್ ಅವರನ್ನು ಯಾವ ರೀತಿ ತುಳಿಯಲಾಗಿದೆ? ಹೇಗೆಲ್ಲ ತುಳಿಯಲಾಗಿದೆ? ಇದರ ಹಿಂದಿನ ಉದ್ದೇಶ ಏನಾಗಿತ್ತು ಎನ್ನುವುದನ್ನು ಎಲ್ಲರಿಗೂ ತಿಳಿಸಬೇಕಾಗಿದೆ. ಸಾವರ್ಕರ್ ಅವರ ಬಗ್ಗೆ ಯಾವುದೋ ಒಂದು ಅಂಶವನ್ನು ಇಟ್ಟುಕೊಂಡು ಇಲ್ಲಸಲ್ಲದ ಆರೋಪ ಹೊರಿಸಲಾಗಿದೆ. ಈ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಜವಾಹರಲಾಲ್ ನೆಹರೂ ಆದಿಯಾಗಿ ಕಾಂಗ್ರೆಸ್‌ನವರು ಮಾಡಿಕೊಂಡು ಬಂದಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೆಹರೂ ಅವರಿಗೆ ಗಾಂಧೀಜಿ ಮೊದಲಾದವರ ಅತಿಯಾದ ಬೆಂಬಲವಿತ್ತು. ಜೈಲಿನಲ್ಲಿ ವಿವಿಧ ಸೌಲಭ್ಯಗಳನ್ನು ಪಡೆದ ನೆಹರೂ, ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕವನ್ನು ಮಗಳಿಗಾಗಿ ಬರೆದಿದ್ದಾರೆ. ಬ್ರಿಟಿಷರು ಬರೆದ ‘ಹಿಸ್ಟರಿ ಆಫ್ ಇಂಡಿಯಾ’ ಕೃತಿಯನ್ನೇ ಇದು ಹೋಲಲಿದೆ’ ಎಂದು ವ್ಯಂಗ್ಯವಾಡಿದರು.

ಏಟು ತಿನ್ನದೆ ಹೋರಾಟ: ‘ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಅವರು ಅಹಿಂಸೆಯಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ, ಕ್ರಾಂತಿ ಅಗತ್ಯ ಎಂದು ಹೇಳಿದ್ದರು. ಆ ವೇಳೆಗೆ ಬಂದ ಗಾಂಧೀಜಿ, ಕ್ರಾಂತಿಯ ಬದಲು ಅಹಿಂಸೆ ಹೋರಾಟ ಅಗತ್ಯ ಅಂದಾಗ ಉಳಿದವರು ಸಮ್ಮತಿ ಸೂಚಿಸಿದರು. ಆ ವೇಳೆಗೆ ಕೆಲ ಕ್ರಾಂತಿಕಾರರು ಹೋರಾಡಿ ಸುಸ್ತಾಗಿದ್ದರು. ಏಟು ತಿನ್ನದೆ ಹೋರಾಟ ಮಾಡುವ ಈ ವಿಧಾನದಿಂದ ಗಾಂಧಿ ತುಂಬಾ ಜನಪ್ರಿಯ ಆದರು. ಹಿಂದೂಗಳು ಹೋರಾಟದ ಮನೋಭಾವ ಕಳೆದುಕೊಳ್ಳಲು ಮೂಲ ಕಾರಣ ಗಾಂಧೀಜಿಯ ಅಹಿಂಸಾ ಪರಿಕಲ್ಪನೆ’ ಎಂದು ಭೈರಪ್ಪ ಹೇಳಿದರು.

‘ಸ್ವಾತಂತ್ರ್ಯ ಬಳಿಕವೂ ಸಾವರ್ಕರ್ ಅವರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯಿತು. ಗಾಂಧೀಜಿಯನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ ಬಳಿಕ ತನಿಖಾ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿ ಮೂಲಕ ಸಾವರ್ಕರ್ ಅವರನ್ನು ಸಿಕ್ಕಿಹಾಕಿಸುವ ಪ್ರಯತ್ನವನ್ನೂ ನೆಹರೂ ಮಾಡಿದರು. ಆಗ ಕಾನೂನು ಸಚಿವರಾಗಿದ್ದ ಅಂಬೇಡ್ಕರ್, ಈ ಬಗ್ಗೆ ಸಂದೇಶವನ್ನು ಸಾವರ್ಕರ್ ಅವರಿಗೆ ಗೌಪ್ಯವಾಗಿ ರವಾನಿಸಿದ್ದರು. ಅಂಬೇಡ್ಕರ್ ಅವರನ್ನು ಕೂಡ ನೆಹರೂ ಬಿಟ್ಟಿರಲಿಲ್ಲ’ ಎಂದು ತಿಳಿಸಿದರು.

‘ದೇಶ ಒಡೆಯುವ ಶಕ್ತಿಯೂ ಕ್ರಿಯಾಶೀಲ’

‘ನಮ್ಮಲ್ಲಿ ರಾಷ್ಟ್ರೀಯತೆ ಭಾವನೆ ಪರಂಪರೆ ಸಂಸ್ಕೃತಿ ಇತಿಹಾಸದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮೂಡಲು ಸಾವರ್ಕರ್ ಸಾಹಿತ್ಯ ಕಾರಣ. ಭಾರತವನ್ನು ಕಟ್ಟುವ ಶಕ್ತಿಯ ಜತೆಗೆ ಒಡೆಯುವ ಶಕ್ತಿಯೂ ಕ್ರಿಯಾಶೀಲವಾಗಿದೆ. ನಾವು ಈಗ ಸಂಕ್ರಮಣ ಕಾಲಘಟ್ಟದಲ್ಲಿದ್ದೇವೆ. ಪ್ರಪಂಚಕ್ಕೆ ಜ್ಞಾನದ ಬೆಳಕನ್ನು ನೀಡಿದ ದೇಶ ನಮ್ಮದು. ಆ ಜ್ಞಾನದ ಆಧಾರದಲ್ಲಿ ಜೀವನ ರೂಪಿಸಿಕೊಳ್ಳಬೇಕು. ಸಾವರ್ಕರ್ ಅವರ ಬಗ್ಗೆ ಕೆಲ ಪೂರ್ವಗ್ರಹ ಪೀಡಿತ ವಿಚಾರಗಳ ಆಧಾರದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸಾವರ್ಕರ್ ಅವರು ಮಾಡಿರುವ ಮಹಾನ್ ಕೆಲಸ ಸಾಹಸಗಳ ನಡುವೆ ಆ ವಿಚಾರಗಳು ನಗಣ್ಯ’ ಎಂದು ಇತಿಹಾಸಕಾರ ಬಾಬು ಕೃಷ್ಣಮೂರ್ತಿ ಹೇಳಿದರು.  

ದೇಶದ ನಿಜವಾದ ಇತಿಹಾಸ ಜನರಿಗೆ ತಿಳಿಯಬೇಕು ಎಂಬ ಕಾರಣಕ್ಕೆ ಈ ಕೃತಿ ರಚಿಸಿದ್ದೇನೆ. ಸಾವರ್ಕರ್ ಯಾವ ಪಕ್ಷಕ್ಕೂ ಸೇರಿದವರಲ್ಲ. ಅವರು ರಾಜಕೀಯ ವ್ಯಕ್ತಿಯೂ ಅಲ್ಲ.
-ವಿಕ್ರಮ್ ಸಂಪತ್, ಲೇಖಕ

ಪುಸ್ತಕ ಪರಿಚಯ 

ಪುಸ್ತಕ: ‘ಸಾವರ್ಕರ್–ವಿಸ್ಮೃತಿಗೆ ಸರಿದ ಗತಕಾಲದ ಮಾರ್ದನಿಗಳು ಕ್ರಾಂತಿಸೂರ್ಯನ ಮೇಲೆ ಕ್ಷ–ಕಿರಣ’  ಲೇಖಕ: ವಿಕ್ರಮ್ ಸಂಪತ್

ಅನುವಾದಕ: ನರೇಂದ್ರಕುಮಾರ್ ಎಸ್‌.ಎಸ್‌.

ಪುಟಗಳು: 568 ಬೆಲೆ: ₹ 855 ಪ್ರಕಾಶನ: ಸಾಹಿತ್ಯ ಪ್ರಕಾಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT