ಶನಿವಾರ, ಏಪ್ರಿಲ್ 1, 2023
28 °C
ಪುಸ್ತಕಮನೆ ಹರಿಹರಪ್ರಿಯ ನೇತೃತ್ವದಲ್ಲಿ ವಾಜರಹಳ್ಳಿ ವೃತ್ತದಲ್ಲಿ ಸ್ಥಳೀಯರಿಂದ ಪ್ರತಿಭಟನೆ

ಬೆಂಗಳೂರು: ವಾಹನ ನಿಲುಗಡೆ ನಿಷೇಧ, ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೈಸ್‌ ರಸ್ತೆಯಿಂದ ಬನಶಂಕರಿವರೆಗೆ ರಸ್ತೆಯ ಎರಡೂ ಬದಿಯಲ್ಲೂ ವಾಹನ ನಿಲುಗಡೆ ನಿರ್ಬಂಧಿಸಲಾಗಿದ್ದು, ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ. ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ದಿಢೀರ್‌ ಕೈಗೊಂಡಿರುವ ಈ ಕ್ರಮವು ಸರಿಯಲ್ಲ ಎಂದು ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ನೇತೃತ್ವದಲ್ಲಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಾಜರಹಳ್ಳಿ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪ್ರತಿಭಟನೆ ನಡೆಸಿದರು.

‘ಈ ಮಾರ್ಗದಲ್ಲಿ ಬಡವರೇ ವ್ಯಾಪಾರ ನಡೆಸಿಕೊಂಡು ಬದುಕು ನಡೆಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ವಾಹನ ತಂದು ನಿಲ್ಲಿಸಿದರೆ ಕಳೆದ ಎರಡು ದಿನಗಳಿಂದ ₹ 1 ಸಾವಿರ ತನಕ ದಂಡ ಹಾಕಲಾಗುತ್ತಿದೆ. ಇದರಿಂದ ಬಡವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ’ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.

‘ಈ ಮಾರ್ಗವನ್ನು ಇದುವರೆಗೂ ಹೆದ್ದಾರಿಯೆಂದು ಪರಿಗಣಿಸಿರಲಿಲ್ಲ. ಏಕಾಏಕಿ ಹೆದ್ದಾರಿಯಾಗಿ ಪರಿವರ್ತಿಸಿ ಜನರಿಗೆ ತೊಂದರೆ ಕೊಡಲಾಗುತ್ತಿದೆ. ಈ ಸಂಬಂಧ ಸ್ಥಳೀಯರಿಗೆ ಮಾಹಿತಿಯನ್ನೂ ನೀಡಿಲ್ಲ. ಏಕಾಏಕಿ ದಂಡ ಹಾಕಲಾಗುತ್ತಿದೆ. ಈ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಮಾಡಿದ್ದವರಿಂದ ಸೋಮವಾರ ಒಂದೇ ದಿನ ಅಂದಾಜು ₹ 2 ಲಕ್ಷದಷ್ಟು ದಂಡ ವಸೂಲಿ ಮಾಡಲಾಗಿದೆ. ತಲಘಟ್ಟಪುರ, ವಾಜರಹಳ್ಳಿ, ರಘುನಹಳ್ಳಿ, ದೊಡ್ಡಕಲ್ಲಸಂದ್ರದ ಜನರಿಗೆ ತೊಂದರೆಯಾಗಿದೆ’ ಎಂದು ಹೇಳಿದರು.

‘ಈ ಮಾರ್ಗವನ್ನು ಹೆದ್ದಾರಿಯೆಂದು ಪರಿಗಣಿಸಿದ ಮೇಲೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾಹನಗಳ ನಿಲುಗಡೆಗೆ ಪರ್ಯಾಯ ಮಾರ್ಗ ಕಲ್ಪಿಸಬೇಕಿತ್ತು. ಆದರೆ, ಬಿಬಿಎಂಪಿ ಅಧಿಕಾರಿಗಳು ಚುನಾವಣೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅವರ ನಿರ್ಲಕ್ಷ್ಯ ಧೋರಣೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ’ ಎಂದು ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಗಣೇಶ್, ಕಲಾವಿದ ಪುಟ್ಟರಾಜ್‌, ಮೋಹನ್‌ಕುಮಾರ್ ನಾಯಕ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು