ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್‌ ಚುನಾವಣೆಯಲ್ಲಿ ತಿಗಳರಿಗೆ ಅವಕಾಶ ನೀಡಲು ಆಗ್ರಹ

Published 24 ಮೇ 2024, 15:24 IST
Last Updated 24 ಮೇ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ವಿಧಾನ ಪರಿಷತ್‌ ಚುನಾವಣೆಯಲ್ಲಿ ತಿಗಳ ಸಮಾಜಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಅವಕಾಶ ನೀಡಬೇಕು ಎಂದು ರಾಜ್ಯ ತಿಗಳ ಕ್ಷತ್ರಿಯ ಮಹಾಸಭಾ ಉಪಾಧ್ಯಕ್ಷ ಎ.ಎಚ್‌. ಬಸವರಾಜು ಆಗ್ರಹಿಸಿದರು.

‘ಕೋಲಾರ, ತುಮಕೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜ ನಮ್ಮದು. ರಾಜಕೀಯ ಪ್ರಾತಿನಿಧ್ಯವೇ ಇಲ್ಲದಿದ್ದ ಈ ಸಮಾಜವನ್ನು ಮೊದಲು ಕಾಂಗ್ರೆಸ್‌ ಗುರುತಿಸಿತ್ತು. ಪಿ.ಆರ್‌. ರಮೇಶ್‌ ಅವರು ಮೂರು ಬಾರಿ ಬಿಬಿಎಂಪಿ ಸದಸ್ಯರಾಗಲು ಅವಕಾಶ ಕಲ್ಪಿಸಿತ್ತು. ಒಂದು ಬಾರಿ ಮೇಯರ್‌ ಆಗಿದ್ದರು. ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. 2017ರಲ್ಲಿ ಅವರನ್ನು ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ ನಾಮನಿರ್ದೇಶನ ಮಾಡಿತ್ತು. ಅದರ ಅವಧಿ ಮುಗಿದು 1 ವರ್ಷ ಕಳೆದಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷ ವಿಧಾನಸಭಾ ಚುನಾವಣೆಗಿಂತ ಮೊದಲು ಪಿ.ಆರ್‌. ರಮೇಶ್‌ ಅಧ್ಯಕ್ಷತೆಯಲ್ಲಿ ‘ತಿಗಳ ಕ್ಷತ್ರಿಯರ ನಡಿಗೆ ಕಾಂಗ್ರೆಸ್‌ ಕಡೆಗೆ’ ಸಮಾವೇಶ ಮಾಡಲಾಗಿತ್ತು. ತಿಗಳರ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 100 ಕೋಟಿ ನೀಡಲಾಗುವುದು, ಸಮಾಜಕ್ಕೆ ಒಂದು ವಿಧಾನ ಪರಿಷತ್‌ ಸ್ಥಾನ ಕಲ್ಪಿಸಲಾಗುವುದು ಎಂದು ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಡಿ.ಕೆ. ಶಿವಕುಮಾರ್‌ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರು ನೀಡಿರುವ ಭರವಸೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ತಿಗಳ ಸಮಾಜದ ಮುಖಂಡ ಎಲ್‌.ಎನ್‌. ಮಂಜುನಾಥ ಮಾತನಾಡಿ, ‘ತಿಗಳ ಸಮಾಜವು ಕಾಂಗ್ರೆಸ್‌ಗಷ್ಟೇ ಅಲ್ಲ, ಬಿಜೆಪಿಯನ್ನು ಕೂಡ ಬೆಂಬಲಿಸಿಕೊಂಡು ಬಂದಿದೆ. ಬಿಜೆಪಿ ಮುಖಂಡರಾದ ಎ.ಎಚ್‌. ಬಸವರಾಜು ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT