ಮಂಗಳವಾರ, ಸೆಪ್ಟೆಂಬರ್ 29, 2020
21 °C
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ

ಪೈಗಂಬರ್ ಬಗ್ಗೆ ಅವಹೇಳನ | ಕೆ.ಜಿ.ಹಳ್ಳಿ ಉದ್ವಿಗ್ನ; ಗುಂಡೇಟಿಗೆ ಇಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗಿದೆ’ ಎಂದು ಆರೋಪಿಸಿದ 500ಕ್ಕೂ ಹೆಚ್ಚು ಜನರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್‌ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪೊಲೀಸರ ಗುಂಡೇಟಿಗೆ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಆರೋಪಿ ನವೀನ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಗೊತ್ತಾಗಿದೆ.

ರಸ್ತೆಯಲ್ಲಿ ಹಾಗೂ ಠಾಣೆ ಎದುರೇ ವಾಹನಗಳು ಹೊತ್ತಿ ಉರಿದವು. ಕೈಯಲ್ಲಿ ಕಟ್ಟಿಗೆ ಹಾಗೂ ಕಲ್ಲು ಹಿಡಿದಿದ್ದ ಕೆಲವರು, ಪೊಲೀಸ್ ಹಾಗೂ ಸಾರ್ವಜನಿಕರ ವಾಹನಗಳ ಕಿಟಕಿ ಗಾಜುಗಳನ್ನು ಒಡೆದರು. ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೂ ದಾಳಿ ಮಾಡಿದ್ದ ಕೆಲವರು, ವಿದ್ಯುತ್ ದೀಪ ಹಾಗೂ ಗಾಜುಗಳನ್ನು ಒಡೆದು ಹಾಕಿದರು.

ಉದ್ವಿಗ್ನಗೊಂಡಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಆಗಿದ್ದೇನು: ‘ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ಎನ್ನಲಾದ ನವೀನ್ ಎಂಬಾತ, ತನ್ನ ಫೇಸ್‌ಬುಕ್ ಖಾತೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ. ಅದನ್ನು ನೋಡಿದ್ದ ಮುಸ್ಲಿಂ ಸಮುದಾಯದ 500ಕ್ಕೂ ಹೆಚ್ಚು ಜನ, ಯುವಕನನ್ನು ಪ್ರಶ್ನಿಸಲು ಶ್ರೀನಿವಾಸಮೂರ್ತಿ ಅವರ ಕಾವಲ್‌ ಭೈರಸಂದ್ರದಲ್ಲಿರುವ ಮನೆ ಬಳಿ ತೆರಳಿದ್ದರು. ಅದೇ ವೇಳೆಯೇ ಕೆಲವರು, ಶಾಸಕರ ಮನೆ ಮೇಲೆ ದಾಳಿ ಮಾಡಿದರು. ಮನೆ ಎದುರೇ ಮೂರ್ನಾಲ್ಕು ಬೈಕ್, ಕಾರಿಗೆ ಬೆಂಕಿ ಹಚ್ಚಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆ ಎದುರು ಜಮಾಯಿಸಿದ್ದ ಜನ, ‘ಅವಹೇಳನಕಾರಿ ಪೋಸ್ಟ್ ಹಾಕಿರುವ ನವೀನ್‌ನನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು. ಠಾಣೆಯಲ್ಲಿದ್ದ ಪೊಲೀಸರು, ‘ಕೂಡಲೇ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದರು. ಹಾಗಿದ್ದರೂ ಕೆಲವರು, ಠಾಣೆ ಎದುರು ನಿಂತಿದ್ದ ಪೊಲೀಸ್‌ ವಾಹನದ ಗಾಜು ಒಡೆದರು. ಬೈಕ್‌ಗಳನ್ನೂ ಸುಟ್ಟು ಹಾಕಿದರು’ ಎಂದೂ ವಿವರಿಸಿದರು.

‘ಪ್ರಶ್ನಿಸಲು ಬಂದ ಪೊಲೀಸರ ಮೇಲೂ ಕೆಲವರು ಹಲ್ಲೆ ನಡೆಸಲು ಯತ್ನಿಸಿದರು. ಇದರಿಂದಾಗಿ ಕೆಲ ಪೊಲೀಸರು ಸ್ಥಳದಿಂದ ಸುರಕ್ಷಿತ ಸ್ಥಳಗಳಿಗೆ ತೆರಳಿದರು. ನಂತರವೂ ಕೆಲವರು, ಕಲ್ಲು ತೂರಾಟ ಮಾಡುತ್ತಲೇ ಇದ್ದರು’ ಎಂದು ಹೇಳಿದರು.

ಕಮಿಷನರ್ ಭೇಟಿ: ಗಲಾಟೆ ನಡೆದ ಕೆಲ ನಿಮಿಷಗಳ ನಂತರ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ನಗರದ ಎಲ್ಲ ವಲಯಗಳ ಡಿಸಿಪಿ ಹಾಗೂ ಎಸಿಪಿಗಳನ್ನು ಕೆ.ಜಿ.ಹಳ್ಳಿ–ಡಿ.ಜೆ.ಹಳ್ಳಿಗೆ ಠಾಣೆಗೆ ಕರೆಸಿಕೊಂಡು ತುರ್ತು ಸಭೆ ನಡೆಸಿದರು. ಎರಡೂ ಠಾಣೆ ವ್ಯಾಪ್ತಿಯಲ್ಲೂ ಪುಂಡಾಟಿಕೆ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವರದಿಗಾರನ ಮೇಲೆ ಹಲ್ಲೆ: ಗಲಾಟೆ ವರದಿ ಮಾಡಲು ಹೋಗಿದ್ದ ಸುದ್ದಿ ವಾಹಿನಿಯೊಂದರ ವರದಿಗಾರನ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ಇದರಿಂದ ವರದಿಗಾರನ ತಲೆಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಕಿಡಿಗೇಡಿಗಳು ಮಾಡಿರುವ ತಪ್ಪು’
‘ಎರಡೂ ಧರ್ಮದವರು ಅಣ್ಣ–ತಮ್ಮಂದಿರಂತೆ. ಯಾರೋ ‌ಕಿಡಿಗೇಡಿಗಳು ಮಾಡಿರುವ ತಪ್ಪು ಇದು. ನಾವು ಜಗಳ ಮಾಡಿಕೊಳ್ಳುವುದು ಬೇಡ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲಿ. ನಾವೆಲ್ಲರೂ ಶಾಂತಿ ಕಾಪಾಡೋಣ’ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ಉದ್ರಿಕ್ತರ ನಿಯಂತ್ರಣಕ್ಕೆ ಗಾಳಿಯಲ್ಲಿ ಗುಂಡು
ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಉದ್ರಿಕ್ತ ಜನ, ಠಾಣೆ ಹಾಗೂ ಸಾರ್ವಜನಿಕರ ಮನೆಗಳ ಮೇಲೆಯೇ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಪೊಲೀಸ್‌ ಜೀಪು, ಕೆಎಸ್‌ಆರ್‌ಪಿ ವಾಹನ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಿಗೆ ಉದ್ರಿಕ್ತರು ಬೆಂಕಿ ಹಚ್ಚುತ್ತಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ರಾತ್ರಿ 12ರ ಸುಮಾರಿಗೆ ಪೊಲೀಸರು, ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೆ, ಪರಿಸ್ಥಿತಿ ನಿಯಂತ್ರಣಗೆ ಬಂದಿಲ್ಲ. ಪೊಲೀಸರ ಮೇಲೂ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರು.

ಪೊಲೀಸರಿಗೆ ಗಾಯ: ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

‘ಶಾಂತಿ–ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಮುಕ್ತ ಅಧಿಕಾರ’
‘ಯಾವುದೇ ವಿಚಾರವಿದ್ದರೂ ಅದನ್ನು ಕಾನೂನಿನನ್ವಯ ಬಗೆಹರಿಸಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಂಡು ಪುಂಡಾಟಿಕೆ ಪ್ರದರ್ಶಿಸುವುದು ಹಾಗೂ ಬೆಂಕಿ ಹಚ್ಚುವುದು ಸರಿಯಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

‘ಕೆ.ಜಿ.ಹಳ್ಳಿಯಲ್ಲಿ ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದೇನೆ’ ಎಂದರು.

‘ಘಟನಾ ಸ್ಥಳದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಗರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಹೇಳಿದ್ದೇನೆ’ ಎಂದೂ ಹೇಳಿದರು.

ಗಲಭೆ: 30 ಮಂದಿಯನ್ನು ಬಂಧಿಸಿದ ಸಿಸಿಬಿ

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಸಂಬಂಧ 30 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌. ಗಲಭೆ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಸಿಸಿಬಿ ವಹಿಸಲಾಗಿದೆ. ಸಿಸಿಬಿಯ ವಿಶೇಷ ತಂಡಗಳು, ಮಂಗಳವಾರ ರಾತ್ರಿಯೀಡಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

'ಸದ್ಯಕ್ಕೆ 30 ಮಂದಿಯನ್ನು ಬಂಧಿಸಲಾಗಿದೆ. ಬಂಧನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮತ್ತಷ್ಟು ಮಂದಿಯನ್ನು ಬಂಧಿಸಬೇಕಿದೆ' ಎಂದು ಸಿಸಿಬಿ ಜಂಟಿ‌ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು