ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು– ಗ್ರಾಹಕರಿಗೆ ಸ್ವಯಂಸೇವಕರು ಸೇತುವೆ

ವಂದೇ ಭಾರತಂ ಫೌಂಡೇಷನ್‌ ವತಿಯಿಂದ ‘ವಾರ್ ರೂಂ’
Last Updated 9 ಏಪ್ರಿಲ್ 2020, 22:41 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್–19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಆಗಿರುವ ಪರಿಣಾಮ ಹಣ್ಣು ಮತ್ತು ತರಕಾರಿರೈತರ ಹೊಲದಲ್ಲೇ ಕೊಳೆಯುವಂತಾಗಿದೆ. ರೈತರನ್ನು ಈ ಸಂಕಷ್ಟದಿಂದ ಪಾರು ಮಾಡಲು ‘ವಂದೇ ಭಾರತಂ ಫೌಂಡೇಷನ್‌’ ನಗರದ ಅ‍ಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ತಡಕಾಡುತ್ತಿದೆ.

ಲಾಲ್‌ಬಾಗ್‌ ಆವರಣದಲ್ಲಿ ಫೌಂಡೇಷನ್‌ ‘ವಾರ್‌ ರೂಂ‘ ತೆರೆದುಕೊಂಡಿದ್ದು,ರೈತರು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. 50ಕ್ಕೂ ಹೆಚ್ಚು ಯುವಕರ ತಂಡ ಈ ಕೆಲಸದಲ್ಲಿ ಸ್ವಯಂ ಪ್ರೇರಿತವಾಗಿ ತೊಡಗಿಕೊಂಡಿದೆ.

ಬೇಸಿಗೆ ಸಂದರ್ಭದಲ್ಲಿ ಕಲ್ಲಂಗಡಿ, ಅನಾನಸ್, ಬಾಳೆ, ಪಪ್ಪಾಯಿ, ದ್ರಾಕ್ಷಿ ಹಣ್ಣು ರಸ್ತೆ ಬದಿಯಲ್ಲೇ ಸಾವಿರಾರು ಟನ್ ಮಾರಾಟವಾಗುತ್ತಿತ್ತು. ಹಣ್ಣು ಕತ್ತರಿಸಿ ಮಾರಾಟ ಮಾಡುವುದನ್ನು ಬಂದ್ ಮಾಡಿಸಲಾಗಿದೆ. ಹೋಟೆಲ್‌ಗಳು ಮುಚ್ಚಿರುವ ಕಾರಣ ಜ್ಯೂಸ್ ರೂಪದಲ್ಲೂ ಮಾರಾಟವಾಗುತ್ತಿಲ್ಲ. ರೈತ ಬೆಳೆದ ಹಣ್ಣು ತೋಟದಲ್ಲೇ ಉಳಿಯುವಂತಾಗಿದೆ.

ಹಾಪ್‌ಕಾಮ್ಸ್‌ ಮೂಲಕರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ಮತ್ತು ತರಕಾರಿ ತಲುಪಿಸುವ ವ್ಯವಸ್ಥೆಗೆ ಸರ್ಕಾರ ಚಾಲನೆ ನೀಡಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ತೆರೆಯ ಹಿಂದೆ ಈ ಸ್ವಯಂ ಸೇವಕರು ಶ್ರಮ ವಹಿಸುತ್ತಿದ್ದಾರೆ.

100ಕ್ಕೂ ಹೆಚ್ಚು ಮನೆಗಳಿರುವ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಗಳನ್ನು ಸಂಪರ್ಕಿಸಿ ಅಲ್ಲಿನ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಮಾಹಿತಿ ರವಾನೆ ಮಾಡುತ್ತಿದ್ದಾರೆ. ‘ಮನೆಯಲ್ಲೇ ಕುಳಿತು ತಾಜಾ ಹಣ್ಣು, ತರಕಾರಿ ಸೇವಿಸಿ, ರೈತರನ್ನು ಉಳಿಸಿ’ ಎಂಬ ಸಂದೇಶಗಳನ್ನು ಹಂಚುತ್ತಿದ್ದಾರೆ. ಸಂಘಗಳ ಸಹಕಾರ ಪಡೆದು ಅಪಾರ್ಟ್‌ಮೆಂಟ್‌ಗಳ ಒಳಕ್ಕೆ ಹಣ್ಣು ತರಕಾರಿಯನ್ನು ಕೊಂಡೊಯ್ಯುತ್ತಿದ್ದಾರೆ. ಮಧ್ಯವರ್ತಿಗಳು, ವ್ಯಾಪಾರಿಗಳ ಬದಲಿಗೆ ರೈತರನ್ನೇ ನೇರವಾಗಿ ಅಪಾರ್ಟ್‌ಮೆಂಟ್‌ಗಳ ಬಳಿಗೆ ಕಳುಹಿಸುತ್ತಿದ್ದಾರೆ.

ರೈತರಿಗೆ ನೆರವಾಗ ಬಯಸುವ ಮತ್ತು ಬಡವರಿಗೆ ದಾನ ಮಾಡಬೇಕು ಎಂಬ ಆಸಕ್ತಿ ಇರುವವರನ್ನು ಹುಡುಕಿ ಹಣ್ಣು ಖರೀದಿ ಮಾಡುವಂತೆ ಈ ಫೌಂಡೇಷನ್‌ ಮನವೊಲಿಸುತ್ತಿದೆ. ಹಾಪ್‌ಕಾಮ್ಸ್‌ ಪ್ರಾಂಗಣದಲ್ಲಿ ಗುರುವಾರ ಮಾರಾಟವಾಗದೆ ಉಳಿದಿದ್ದ 2 ಸಾವಿರ ಕಲ್ಲಂಗಡಿ ಹಣ್ಣುಗಳನ್ನು ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿ ಖರೀದಿ ಮಾಡಿಸಿತು. ಅವರು ಆ ಹಣ್ಣುಗಳನ್ನು ಬಡವರು ವಾಸಿಸುವ ಬಡಾವಣೆಗಳಿಗೆ ಕೊಂಡೊಯ್ದು ಉಚಿತವಾಗಿ ವಿತರಿಸಿದರು.

ಕರೆ ಮಾಡಿದರೆ ಮನೆ ಬಾಗಿಲಿಗೆ ಹಣ್ಣು

ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೂಲಕ ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿರುವ ‘ವಂದೇ ಭಾರತಂ ಫೌಂಡೇಷನ್‌’ ಹೆಲ್ಪ್‌ಲೈನ್ ಸಂಖ್ಯೆಯನ್ನು (8495998495) ನೀಡಿದೆ.‘ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಪ್ಯಾಕೇಜ್ ವಿತರಣೆ ಮಾಡುತ್ತಿರುವ ಸರ್ಕಾರ ಮತ್ತು ಸಂಘ–ಸಂಸ್ಥೆಗಳು ಹಣ್ಣನ್ನೂ ಖರೀದಿ ಮಾಡಿ ವಿತರಿಸಬೇಕು. ಹಣ್ಣು ತಿನ್ನುವುದರಿಂದ ಕಾರ್ಮಿಕರ ಆರೋಗ್ಯ ವೃದ್ದಿಯಾದರೆ, ಹಣ್ಣು ಬೆಳೆದ ರೈತನ ಬದುಕೂ ಹಸನಾಗುತ್ತದೆ’ ಎಂದು ಫೌಂಡೇಷನ್‌ನ ಸಂಸ್ಥಾಪಕ ಬಿ.ಎಚ್. ಲೋಕೇಶ್‌ ಹೇಳಿದರು.

***

ಹಾಪ್‌ಕಾಮ್ಸ್‌ ದಿನಕ್ಕೆ 100ರಿಂದ 120 ಟನ್‌ ಹಣ್ಣು, ತರಕಾರಿ ಮಾರಾಟ ಮಾಡಲಾಗುತ್ತಿದೆ. ವಂದೇ ಭಾರತಂ ಫೌಂಡೇಷನ್‌ ಕೊಂಡಿಯಾಗಿ ಕೆಲಸ ಮಾಡುತ್ತಿದೆ

- ಬಿ.ಎನ್. ಪ್ರಸಾದ್, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT