ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರು ಸರಬರಾಜಷ್ಟೇ ಅಲ್ಲ; ನಿರ್ವಹಣೆಯೂ ಅಗತ್ಯ: ಎಸ್.ವಿಶ್ವನಾಥ್ ಅಭಿಮತ

ಮಿಥಿಕ್ ಸೊಸೈಟಿ ಹಮ್ಮಿಕೊಂಡಿದ್ದ ಉಪನ್ಯಾಸದಲ್ಲಿ ಜಲತಜ್ಞ ಎಸ್.ವಿಶ್ವನಾಥ್ ಅಭಿಮತ
Published 19 ಮೇ 2024, 15:40 IST
Last Updated 19 ಮೇ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹದಾಕಾರವಾಗಿ ಬೆಳೆದಿರುವ ಬೆಂಗಳೂರು ನಗರವು ಜಲಕ್ಷಾಮದ ಭೀತಿಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಜಲಮಂಡಳಿಯು ನೀರು ಸರಬರಾಜಿನ ಜತೆಗೆ ನೀರು ನಿರ್ವಹಣಾ ಮಂಡಳಿಯಾಗಿಯೂ ಕಾರ್ಯನಿರ್ವಹಿಸಬೇಕಾಗಿದೆ’ ಎಂದು ಜಲತಜ್ಞ ಎಸ್.ವಿಶ್ವನಾಥ್ ತಿಳಿಸಿದರು. 

ದಿ ಮಿಥಿಕ್ ಸೊಸೈಟಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದತ್ತಿ ಉಪನಾಸ್ಯದಲ್ಲಿ ‘ನೀರು ಮತ್ತು ನಗರ: ಬೆಂಗಳೂರು ನಗರ ಹಿಂದೆ, ಇಂದು ಮತ್ತು ಮುಂದೆ’ ಎಂಬ ವಿಷಯದ ಬಗ್ಗೆ ಮಾತನಾಡಿದರು. 

‘ನಗರದಲ್ಲಿ ನೀರಿನ ಆಕರಗಳನ್ನು ಗಮನಿಸಿದರೆ ಕೊರತೆಗಿಂತ ನೀರಿನ ನಿರ್ವಹಣೆಯಲ್ಲಿನ ವೈಫಲ್ಯವನ್ನು ಕಾಣಬಹುದು. ನಗರವು ಭೌಗೋಳಿಕವಾಗಿ ಆಯಕಟ್ಟಿನ ಸ್ಥಳದಲ್ಲಿದ್ದು, ದಕ್ಷಿಣ ಪಿನಾಕಿನಿ ಮತ್ತು ಕಾವೇರಿ ನದಿಯು ನಗರಕ್ಕೆ ಅನಾದಿ ಕಾಲದಿಂದಲೂ ನೀರಿನ ಆಸರೆಯಾಗಿದೆ. ಕ್ರಿ.ಶ. 1874-76ರಲ್ಲಿ ನಗರವು ಭೀಕರ ಜಲಕ್ಷಾಮಮವನ್ನು ಎದುರಿಸಿತ್ತು. 1894–96ರಲ್ಲಿ ಮೈಸೂರು ಮಹಾರಾಜರು ಅರ್ಕಾವತಿ ನದಿಗೆ ಅಡ್ಡಲಾಗಿ ಹೆಸರಘಟ್ಟದಲ್ಲಿ ಜಲಾಶಯವನ್ನು ನಿರ್ಮಿಸಿ, ನಗರಕ್ಕೆ ಕುಡಿಯುವ ನೀರನ್ನು ಒದಗಿಸಿದರು. ಇದರ ಜತೆಗೆ ನಮ್ಮಲ್ಲಿರುವ ಪಾರಂಪರಿಕ ನೀರು ನಿರ್ವಹಣಾ ವ್ಯವಸ್ಥೆಯ ಮೂಲಕ ಜನರಿಗೆ ನಿರಂತರವಾಗಿ ನೀರಿನ ಸೌಲಭ್ಯ ದೊರಕುತ್ತಿದೆ’ ಎಂದರು.

‘ನಿರ್ವಹಣೆ ಕೊರತೆಯಿಂದಾಗಿ ನಗರದ ಕೆರೆಗಳು ಮಾಯವಾಗುತ್ತಿವೆ. ಇದರಿಂದಾಗಿಯೇ ಬೃಹದಾಕಾರವಾಗಿ ಬೆಳೆದಿರುವ ನಗರವು ಜಲಕ್ಷಾಮದ ಭೀತಿ ಎದುರಿಸುತ್ತಿದೆ ಎಂಬ ಆತಂಕ ಜನರಲ್ಲಿದೆ. ನೀರನ್ನು ಸಮರ್ಪಕವಾಗಿ ಬಳಸಿ, ಅದರ ನಿರ್ವಹಣೆ ಮಾಡಿದಾಗ ಈ ಆತಂಕ ದೂರವಾಗುತ್ತದೆ. ಈ ಕೆಲಸವನ್ನು ಜಲಮಂಡಳಿ ಮಾಡಬೇಕು’ ಎಂದು ಹೇಳಿದರು. 

ವೈಜ್ಞಾನಿಕ ಅಧ್ಯಯನ ಅಗತ್ಯ: ವಿದ್ಯಾರತ್ನ ಆರ್.ಎಸ್. ಪಂಚಮುಖಿ ದತ್ತಿ ಉಪನ್ಯಾಸದಲ್ಲಿ ‘ಮೌನ ಕಲ್ಲುಗಳ ಕಥೆಗಳು: ಮಧ್ಯಕಾಲೀನ ಕರ್ನಾಟಕದಲ್ಲಿ ಶಿಲ್ಪ ಕೊರೆಯುವ ತಂತ್ರಗಾರಿಕೆ’ ಎಂಬ ವಿಷಯದ ಬಗ್ಗೆ ಮಾತನಾಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್‌ ಸ್ಟಡೀಸ್‌ನ ಮಾನವಿಕ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಶ್ರೀಕುಮಾರ್ ಎಂ. ಮೆನನ್, ‘ಮಧ್ಯಪ್ರದೇಶದ ಭೋಜ್‌ಪುರ್, ಕರ್ನಾಟಕದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಮುಂತಾದ ಪ್ರದೇಶದಲ್ಲಿಯ ವಾಸ್ತುಶಿಲ್ಪ ಗಮನಿಸಿದಾಗ ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದಲ್ಲಿ ಪ್ರಚಲಿತವಿದ್ದ ವಾಸ್ತುಶಿಲ್ಪದ ವೈಶಿಷ್ಟ್ಯ ಪರಿಚಯವಾಗುತ್ತದೆ. ಈ ಪ್ರದೇಶಗಳಲ್ಲಿ ಲಭ್ಯವಿರುವ ಕಲ್ಲು ಮತ್ತು ಅದರ ಬಳಕೆಯ ತಂತ್ರಗಾರಿಕೆಯ ವೈಜ್ಞಾನಿಕ ಅಧ್ಯಯನ ಅತ್ಯವಶ್ಯಕ’ ಎಂದು ತಿಳಿಸಿದರು. 

ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಧ್ಯಾಪಕ ಶ್ರೀನಿವಾಸ ಪಾಡಿಗಾರ್, ‘ಇತಿಹಾಸದ ಅಧ್ಯಯನದ ವಿಚಾರದಲ್ಲಿ ಇತಿಹಾಸಕಾರರು ಕೇವಲ ದೇವಾಲಯದ ಶೈಲಿಯ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ವಾಸ್ತುಶಿಲ್ಪದ ತಂತ್ರಗಾರಿಕೆಯ ಬಗ್ಗೆ ಕೂಡ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT