ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಗಾರಿಕಾ ಪ್ರದೇಶಗಳಲ್ಲಿ ಜಲಸಂಕಟ: ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಸಾಧ್ಯತೆ

ಆದಿತ್ಯ ಕೆ.ಎ.
Published 13 ಮಾರ್ಚ್ 2024, 0:01 IST
Last Updated 13 ಮಾರ್ಚ್ 2024, 0:01 IST
ಅಕ್ಷರ ಗಾತ್ರ

ಬೆಂಗಳೂರು: ‘ದಕ್ಷಿಣ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶ’ ಎಂಬ ಹೆಗ್ಗಳಿಕೆಗೆ ಪಡೆದಿರುವ ನಗರದ ಪೀಣ್ಯದ ಕೈಗಾರಿಕಾ ಪ್ರದೇಶದಲ್ಲೀಗ ‘ಜಲಸಂಕಟ’ ಆರಂಭವಾಗಿದೆ.

ಕೆಲವು ಸೌಲಭ್ಯಗಳ ಕೊರತೆಯಿಂದ ಎದುಸಿರು ಬಿಡುತ್ತಿದ್ದ 16 ಸಾವಿರ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿಗಳನ್ನು ಹೊಂದಿರುವ ಪ್ರದೇಶದಲ್ಲಿ ನೀರಿನ ಸಮಸ್ಯೆಯೂ ಜೊತೆಯಾಗಿ, ಇನ್ನೊಂದು ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದ ಉತ್ಪಾದನೆ ಮೇಲೆ ಪೆಟ್ಟು ಬಿದ್ದಿದೆ. ಬೇಸಿಗೆಯ ಉಳಿದ ದಿನಗಳಲ್ಲಿ ಕಥೆ ಏನು ಎಂಬ ಚಿಂತೆಗೀಡಾಗಿದ್ದಾರೆ ಕೈಗಾರಿಕೋದ್ಯಮಿಗಳು.

ಕುಸಿದ ನೀರಿನಮಟ್ಟ: ಕೈಗಾರಿಕೆ ಪ್ರದೇಶಗಳಲ್ಲಿರುವ ಕೊಳವೆಬಾವಿಗಳಲ್ಲಿ ನೀರಿನಮಟ್ಟ ಕುಸಿದಿದ್ದು, ಮಾಲೀಕರು ಕೈಗಾರಿಕೆ ನಡೆಸಲು ಟ್ಯಾಂಕರ್‌ ನೀರಿನ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನೀರು ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಪೀಣ್ಯ ಮೊದಲ ಹಂತ, 2ನೇ ಹಂತದ ಮುಖ್ಯರಸ್ತೆಯ ಅಲ್ಲಲ್ಲಿ ಟ್ಯಾಂಕರ್‌ಗಳ ದರ್ಶನವಾಗುತ್ತಿದೆ; ಈ ಟ್ಯಾಂಕರ್‌ಗಳ ಓಡಾಟವೇ ನೀರಿನ ಕೊರತೆಯ ತೀವ್ರತೆಯನ್ನು ಬಿಂಬಿಸುತ್ತಿದೆ.

ಎಂಜಿನಿಯರಿಂಗ್‌ ವರ್ಕ್ಸ್‌, ಔಷಧಗಳ ತಯಾರಿಕಾ ಫ್ಯಾಕ್ಟರಿ, ಆಟೊಮೊಬೈಲ್ ಬಿಡಿಭಾಗ, ಪೌಡರ್ ಕೋಟಿಂಗ್, ಪ್ಯಾಕೇಜಿಂಗ್ ಇಂಡಸ್ಟ್ರಿ, ಫ್ಯಾಬ್ರಿಕೇಷನ್, ಎಲೆಕ್ಟ್ರೊ ಪ್ಲೇಟಿಂಗ್, ಸಿಎನ್‌ಸಿ ಮಷಿನ್ ಜಾಬ್‌ ವರ್ಕ್, ವಿದ್ಯುತ್ ಪರಿವರ್ತಕಗಳ ಬಿಡಿ ಭಾಗಗಳ ತಯಾರಿಕಾ ಘಟಕಗಳು ಈ ಪ್ರದೇಶದಲ್ಲಿವೆ. ಕೆಲವು ಕೈಗಾರಿಕೆಗಳ ಯಂತ್ರಗಳ ಕೆಲಸಕ್ಕೆ(ಕೂಲಿಂಗ್‌) ಅಗತ್ಯವಿರುವಷ್ಟು ನೀರು ಬೇಕು. ಆದರೆ, ಹತ್ತು ದಿನಗಳಿಂದ ಆ ಪ್ರಮಾಣದಲ್ಲಿ ನೀರು ಲಭಿಸದೇ ಸಂಕಷ್ಟ ಎದುರಾಗಿದೆ ಎಂದು ಉದ್ಯಮಿಗಳು ಅಳಲು ತೋಡಿಕೊಳ್ಳುತ್ತಾರೆ. ನೀರಿಲ್ಲದಿದ್ದರೆ ಕೈಗಾರಿಕೆ ನಡೆಸುವುದು ಕಷ್ಟ ಎನ್ನುತ್ತಾರೆ ಅವರು.

ಯಾವುದೇ ಕಾರ್ಖಾನೆಯಲ್ಲಿ 100ಕ್ಕಿಂತ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ, ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಅಳವಡಿಸಿಕೊಳ್ಳಬೇಕು ಎಂದು ಸರ್ಕಾರದ ನಿಯಮವಿದೆ. ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಶೇ 98ರಷ್ಟು ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿದ್ದು ಶೇ 2ರಷ್ಟು ಬೃಹತ್‌ ಕೈಗಾರಿಕೆಗಳಿವೆ. ಬಹುತೇಕ ಸಣ್ಣ ಕೈಗಾರಿಕೆಗಳಲ್ಲಿ ಎಸ್‌ಟಿಪಿ ಇಲ್ಲ. ಇದರಿಂದಲೂ ನೀರಿನ ಸಮಸ್ಯೆ ಎದುರಾಗಿದೆ. ಸಣ್ಣ ಕೈಗಾರಿಕೆಗಳು ಬಳಸಿದ ನೀರು ಒಳಚರಂಡಿ ಸೇರುತ್ತಿದೆ. ಬೃಹತ್‌ ಕೈಗಾರಿಕೆಗಳು ಮಾತ್ರ ಎಸ್‌ಟಿಪಿ ಅಳವಡಿಕೆ ಮಾಡಿಕೊಂಡಿದ್ದು ಸಂಸ್ಕರಿಸಿದ ನೀರನ್ನು ಮರು ಬಳಕೆ ಮಾಡುತ್ತಿವೆ. ಶೇ 98ರಷ್ಟು ಕೈಗಾರಿಕೆಗಳಿಗೆ ನೀರಿನ ಅಗತ್ಯವಿದೆ ಎಂದು ಕೈಗಾರಿಕೋದ್ಯಮಿಯೊಬ್ಬರು ಹೇಳಿದರು.

ಕುಡಿಯುವ ನೀರು ಖರೀದಿ: ಕೈಗಾರಿಕಾ ಪ್ರದೇಶದಲ್ಲಿ ಅಡ್ಡಾಡಿದರೆ ಕೈಗಾರಿಕೋದ್ಯಮಿಗಳ ಮೊಗದಲ್ಲಿ ಸಂಕಟದ ಛಾಯೆ ಕಾಣಿಸುತ್ತದೆ. ಕಾರ್ಮಿಕರು, ಭದ್ರತಾ ಸಿಬ್ಬಂದಿ, ವಾಹನ ಚಾಲಕರೂ ನೀರಿನ ಸಮಸ್ಯೆಗಳ ಬಗ್ಗೆ ಹೇಳುತ್ತಾರೆ.

ಕೈಗಾರಿಕೆ ಪ್ರದೇಶದಲ್ಲಿ ಮಾತಿಗೆ ಸಿಕ್ಕಿದ ಕಾರ್ಮಿಕ ರಂಜನ್‌ ಅವರು, ‘ಫೆಬ್ರುವರಿ ಅಂತ್ಯದವರೆಗೂ ನೀರಿಗೆ ಅಷ್ಟು ಸಮಸ್ಯೆ ಇರಲಿಲ್ಲ. ಈಗ ಸಮಸ್ಯೆ ನಿಧಾನವಾಗಿ ಕಾಣಿಸಿಕೊಳ್ಳುತ್ತಿದೆ. ಬಹುತೇಕ ಕೈಗಾರಿಕೆಗಳ ಎದುರು ಪುಟ್ಟ ಉದ್ಯಾನ ಮಾಡಿದ್ದಾರೆ. ಆ ಗಿಡಗಳಿಗೆ ಹಾಕಲು ನೀರಿಲ್ಲ. ಒಂದು ವಾರದಿಂದ ನೀರು ಉಣಿಸುತ್ತಿಲ್ಲ. ಗಿಡಗಳು ಬಾಡಿವೆ‘ ಎಂದು ಉದ್ಯಾನ ತೋರಿಸಿದರು.

‘ಸಾವಿರಾರು ಕಾರ್ಮಿಕರು ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಕುಡಿಯಲು ಕ್ಯಾನ್‌ ನೀರನ್ನು ಹಾಕಿಸಿಕೊಳ್ಳಲಾಗುತ್ತಿದೆ. ಕೊಳವೆಬಾವಿಗಳು ಬತ್ತಲು ಆರಂಭಿಸಿವೆ. ಇದರಿಂದ ಸಮಸ್ಯೆ ಬಿಗಡಾಯಿಸಿದೆ’ ಎಂದು ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ ಎಚ್‌ಎಂ.ಆರೀಫ್‌ ಹೇಳಿದರು.

ಇನ್ನು ಅಲ್ಲಲ್ಲಿ ಕಾರ್ಮಿಕರ ಹೊಟ್ಟೆ ತುಂಬಿಸಲು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಸಣ್ಣ ಹೋಟೆಲ್‌ಗಳಿವೆ. ಅವುಗಳಿಗೂ ನೀರಿನ ಬರ ಎದುರಾಗಿದೆ. ಕ್ಯಾಂಟೀನ್‌ ಮಾಲೀಕರು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ. ಜನವರಿ–ಫೆಬ್ರುವರಿ ಕೊನೆಯಲ್ಲಿದ್ದ ದರಕ್ಕೆ ಹೋಲಿಸಿದರೆ ಈಗ ಟ್ಯಾಂಕರ್‌ ನೀರಿನ ದರ ದುಪ್ಪಟ್ಟಾಗಿದೆ. ಇದರಿಂದ ಹೋಟೆಲ್‌ ನಡೆಸುವುದು ಕಷ್ಟವಾಗಿದೆ ಎನ್ನುತ್ತಾರೆ ಅವರು.

ಪೀಣ್ಯದ ಕೈಗಾರಿಕೆಯೊಂದಕ್ಕೆ ಪೂರೈಸಲು ಟ್ಯಾಂಕರ್‌ನಲ್ಲಿ ನೀರು ಕೊಂಡೊಯ್ಯುತ್ತಿರುವುದು. ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ.
ಪೀಣ್ಯದ ಕೈಗಾರಿಕೆಯೊಂದಕ್ಕೆ ಪೂರೈಸಲು ಟ್ಯಾಂಕರ್‌ನಲ್ಲಿ ನೀರು ಕೊಂಡೊಯ್ಯುತ್ತಿರುವುದು. ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ.
ಪೀಣ್ಯದ ಕೈಗಾರಿಕೆಯೊಂದಕ್ಕೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ.
ಪೀಣ್ಯದ ಕೈಗಾರಿಕೆಯೊಂದಕ್ಕೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ.
ಕಾರ್ಮಿಕರಿಗೆ ಕ್ಯಾನ್‌ನಲ್ಲಿ ಶುದ್ಧ ನೀರು ಪೂರೈಕೆ. ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ.
ಕಾರ್ಮಿಕರಿಗೆ ಕ್ಯಾನ್‌ನಲ್ಲಿ ಶುದ್ಧ ನೀರು ಪೂರೈಕೆ. ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ.
ಸದ್ಯದಲ್ಲೇ ಸಂಘದ ಆಡಳಿತ ಮಂಡಳಿ ಸದಸ್ಯರ ಜೊತೆಗೆ ಜಲಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ರಿಯಾಯಿತಿ ದರದಲ್ಲಿ ಕೈಗಾರಿಕೆಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸುವಂತೆ ಮನವಿ ಮಾಡುತ್ತೇವೆ.
–ಎಚ್‌.ಎಂ.ಆರೀಫ್‌ ಅಧ್ಯಕ್ಷ ಪೀಣ್ಯ ಕೈಗಾರಿಕಾ ಸಂಘ
ಕೈಗಾರಿಕಾ ಪ್ರದೇಶದ ಅಂಕಿಅಂಶಗಳು
12 ಲಕ್ಷ – ಪೀಣ್ಯ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಕಾರ್ಮಿಕರು4 ಲಕ್ಷ – ಮಹಿಳಾ ಕಾರ್ಮಿಕರ ಸಂಖ್ಯೆ 45 ಚದರ ಕಿಲೋ ಮೀಟರ್ – ಪೀಣ್ಯ ಕೈಗಾರಿಕಾ ಪ್ರದೇಶದ ವಿಸ್ತೀರ್ಣ 441 ಎಂಎಲ್‌ಡಿ – ಕೈಗಾರಿಕೆ ಪ್ರದೇಶದ ನೀರಿನ ಬೇಡಿಕೆ
ಸಂಸ್ಕರಿಸಿದ ನೀರನ್ನು ಕೊಟ್ಟರೆ ಸಾಕು...
ನಮಗೆ ಕಾವೇರಿ ನೀರನ್ನೇ ಕೊಡಿ ಎಂದು ಕೇಳುತ್ತಿಲ್ಲ. ಸಂಸ್ಕರಿಸಿದ ನೀರನ್ನಾದರೂ ಕೊಡಿ. ಅದರೆ ಸಂಸ್ಕರಿಸಿದ ನೀರನ್ನು ಹರಿಸಲು ಪೈಪ್‌ಲೈನ್‌ ವ್ಯವಸ್ಥೆಯೇ ಆಗಿಲ್ಲ. ಈ ತಿಂಗಳು ಟ್ಯಾಂಕರ್‌ ನೀರನ್ನು ಖರೀದಿಸಿ ಕೈಗಾರಿಕೆ ನಡೆಸುತ್ತಿದ್ದೇವೆ. ಆದರೆ ಏಪ್ರಿಲ್‌ ಹಾಗೂ ಮೇ ತಿಂಗಳ ಬಗ್ಗೆ ಯೋಚಿಸಿದರೆ ಆತಂಕ ಹುಟ್ಟಿಸುತ್ತದೆ. ಮುಂದಿನ ಎರಡು ತಿಂಗಳಲ್ಲಿ ಟ್ಯಾಂಕರ್‌ ಮಾಲೀಕರಿಗೆ ನೀರು ಲಭಿಸದಿದ್ದರೆ ನಮ್ಮ ಪಾಡೇನು? ನಾನಾ ಕಾರಣಕ್ಕೆ ಕೆಲವು ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಈಗ ನೀರು ಕೊಡದಿದ್ದರೆ ನೀರನ್ನೇ ಅಲಂಬಿಸಿರುವ ಕೈಗಾರಿಕೆಗಳನ್ನು ಬಂದ್ ಮಾಡುವ ಸ್ಥಿತಿ ಬರಲಿದೆ ಎಂದು ಸಂಘದ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕರು ಏನು ಹೇಳುತ್ತಾರೆ?
ಕೈಗಾರಿಕೆಗಳಿಗೆ ನೀರು ನೀಡಿದರೆ ಕೈಗಾರಿಕೆಗಳ ಅವಲಂಬಿತ ಕಾರ್ಮಿಕರ ಬದುಕೂ ಉಳಿಯಲಿದೆ. – ಸುಜಾತಾ ಕಾರ್ಮಿಕ ಮಹಿಳೆ ರಾಜ್ಯದಲ್ಲಿನ ಬರದ ಕಾರಣದಿಂದ ಪೀಣ್ಯ ಪ್ರದೇಶಕ್ಕೆ ಕೆಲಸ ಹುಡುಕಿಕೊಂಡು ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯೂ ನೀರಿನ ವ್ಯವಸ್ಥೆ ಸರಿಯಿಲ್ಲದೇ ಕಾರ್ಮಿಕರು ಪರಿತಪಿಸುತ್ತಿದ್ದಾರೆ.   – ಸುಜಿತಾ ರಾವ್‌ ಆರ್‌ಕೆ ಎಂಜಿನಿಯರ್‌ ವರ್ಕ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT