ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಸ್ಮೃತಿ ಜಾರಿ ಯತ್ನ ಮಣಿಸಿ: ಸಂವಿಧಾನ ಓದು ಅಭಿಯಾನಕ್ಕೆ ಸಿದ್ದರಾಮಯ್ಯ ಚಾಲನೆ

Published 15 ಸೆಪ್ಟೆಂಬರ್ 2023, 16:23 IST
Last Updated 15 ಸೆಪ್ಟೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಸಂವಿಧಾನವನ್ನು ನಾಶಮಾಡಿ, ಮನುಸ್ಮೃತಿಯನ್ನು ಮರು ಜಾರಿಗೊಳಿಸಲು ಹವಣಿಸುತ್ತಿರುವ ಶಕ್ತಿಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಸಂವಿಧಾನ ಪೀಠಿಕೆ’ ಓದುವ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಶುಕ್ರವಾರ ‍‍ಚಾಲನೆ ನೀಡಿ ಅವರು ಮಾತ
ನಾಡಿದರು. ಭಾರತದಲ್ಲಿ ಬೌದ್ಧ ಧರ್ಮದ ಕಾಲದಿಂದಲೇ ಪ್ರಜಾತಂತ್ರ ವ್ಯವಸ್ಥೆ ಇತ್ತು. ಸಂವಿಧಾನ ಜಾರಿಯಾದ ಬಳಿಕ ಇಲ್ಲಿ ಪ್ರಜಾಪ್ರಭುತ್ವ ನೆಲೆಯೂರಿತು. ಶೇಕಡ 95ರಷ್ಟು ಜನರು ಗುಲಾಮರಂತೆ ಬದುಕಬೇಕು ಎಂದು ಪ್ರತಿಪಾದಿಸುವ ಮನುಸ್ಮೃತಿಯನ್ನು ಮತ್ತೆ ತರಬೇಕು ಎಂಬ ಹವಣಿಕೆಯಲ್ಲಿರುವ ಶಕ್ತಿಗಳನ್ನು ಮಣಿಸಲು ಜನರು ಸಜ್ಜಾಗಬೇಕು ಎಂದು ಹೇಳಿದರು.

‘ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪದ ರೂಪದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದು ಅಲ್ಲಮ ಪ್ರಭುಗಳು ಇದರ ಮುಖ್ಯಸ್ಥರಾಗಿದ್ದರು. ಸಂವಿಧಾನಕ್ಕೆ ಮೊದಲೇ  ಭಾರತದಲ್ಲಿ ಗಣತಂತ್ರ ವ್ಯವಸ್ಥೆ ಜಾರಿಯಲ್ಲಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡ ನಮ್ಮ ಸಂವಿಧಾನ ಆಧರಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಈ ದೇಶದ ಜನರಿಗೆ ಬದುಕುವ ಶಕ್ತಿ ಮತ್ತು ಭರವಸೆಯನ್ನು ಸಂವಿಧಾನ ನೀಡಿದೆ’ ಎಂದರು.

‘ಮಕ್ಕಳು, ಯುವಜನರು ಸೇರಿದಂತೆ ಎಲ್ಲರಿಗೂ ಸಂವಿಧಾನ ಮತ್ತು ಅದರ ಆಶಯಗಳ ಕುರಿತು ಅರಿವು ಅಗತ್ಯ. ಅದಕ್ಕಾಗಿಯೇ ಸರ್ಕಾರವು ಸಂವಿಧಾನದ ಪ್ರಸ್ತಾವನೆಯ ವಾಚನ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶದ ಎಲ್ಲರೂ ಸಂವಿಧಾನವನ್ನು ಅರಿಯಬೇಕು. ಸಂವಿಧಾನದ ಆಶಯದಂತೆ ನಡೆಯಬೇಕು. ಆಗ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಲ್ಲವಾದರೆ ದೇಶದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವುದು ಕಷ್ಟ’ಎಂದರು.

ಸಹಸ್ರಾರು ಮಕ್ಕಳಿಂದ ವಾಚನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದು ಶಾಲಾ–ಕಾಲೇಜಿನಲ್ಲಿ ನಿತ್ಯವೂ ‘ಸಂವಿಧಾನ ಪೀಠಿಕೆ’ ಓದುವ ಯೋಜನೆ ರೂಪಿಸಿದೆ.

ಸಂವಿಧಾನದ ಆಶಯಗಳು, ಸಂವಿಧಾನ ಕೊಟ್ಟಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಯುವ ಸಮುದಾಯದಲ್ಲಿ ಅರಿವು ಮೂಡಿಸುವ ಆಶಯ ಇದರ ಹಿಂದಿದೆ.

ಸಮಾಜ ಕಲ್ಯಾಣ ಇಲಾಖೆ ರೂಪಿಸಿರುವ ಈ ವಿಶೇಷ ಕಾರ್ಯಕ್ರಮಕ್ಕೆ ವಿಶ್ವ ಪ್ರಜಾಪ್ರಭುತ್ವದ ದಿನವಾದ ಸೆ.15ರಂದು ಇಡೀ ರಾಜ್ಯದಲ್ಲಿ ಚಾಲನೆ ನೀಡಲಾಯಿತು.

ಎಲ್ಲ ಜಿಲ್ಲೆಗಳಲ್ಲೂ ನಡೆದ ಸಮಾರಂಭದಲ್ಲಿ ಶಾಲಾ–ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿ, ಸಂವಿಧಾನದ ಪೀಠಿಕೆ ಗಳನ್ನು ಓದಿ ಸಂಭ್ರಮಿಸಿದರು.

ವಿಧಾನಸೌಧದ ಎದುರು ನಡೆದ ಬೃಹತ್ ಸಮಾರಂಭದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು, ವಿಶ್ವ ಪ್ರಜಾಪ್ರಭುತ್ವ ದಿನಕ್ಕೆ ಸಾಕ್ಷಿಯಾದರು.

ಅನಿವಾಸಿ ಭಾರತೀಯರೂ ಭಾಗಿ: ಆಸ್ಟ್ರೇಲಿಯಾ, ಅಮೆರಿಕ, ಕೆನಡಾ, ಸೌದಿ ಅರೇಬಿಯಾ, ನೆದರ್ಲೆಂಡ್ಸ್‌, ಸ್ಪೇನ್, ಸ್ವೀಡನ್, ಜರ್ಮನಿ, ತೈವಾನ್ ಮತ್ತು ಇಟಲಿ ಹೀಗೆ 20 ದೇಶದಲ್ಲಿರುವ ಅನಿವಾಸಿ ಭಾರತೀಯರೂ ಓದು ಅಭಿಯಾನದಲ್ಲಿ ಭಾಗಿಯಾದರು.

ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿ
ಯಲ್ಲಿರುವ ವಸತಿ ಶಾಲೆಗಳ ಹಲವು ಸಾವಿರ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆ ವಾಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಸಾವಿರಾರು ಮಕ್ಕಳು ಇದ್ದರು. ಮುಖ್ಯಮಂತ್ರಿ ಅವರು ಸಂವಿಧಾನದ ಪ್ರಸ್ತಾವನೆಯನ್ನು ಓದುತ್ತಿದ್ದಂತೆಯೇ ಏಕಕಾಲಕ್ಕೆ ದನಿಗೂಡಿಸಿದರು.

ಭಾರತ ಜಗತ್ತಿನ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಅಸಮಾನತೆಯನ್ನು ಮೆಟ್ಟಿ, ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನ ಹರಿಸುವ ಮೂಲಕ ಸಂವಿಧಾನದ ಆಶಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ
–ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT