ಗುರುವಾರ , ಅಕ್ಟೋಬರ್ 28, 2021
19 °C
ಪಾರಂಪರಿಕ ಕಟ್ಟಡ ಕಳೆದುಕೊಳ್ಳುವುದು ಸರಿಯಲ್ಲ: ನಗರ ತಜ್ಞರ ಅಭಿಮತ

‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ಗೆ ಬಾಲಬ್ರೂಯಿ ಕಟ್ಟಡವೇ ಏಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಾಲಬ್ರೂಯಿ ಪಾರಂಪರಿಕ ಕಟ್ಟಡದ ಜಾಗದಲ್ಲಿ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ (ಶಾಸಕರ ಮತ್ತು ಮಾಜಿ ಶಾಸಕರ ಮನರಂಜನಾ ಕ್ಲಬ್‌) ಹೊಂದುವ ಪ್ರಸ್ತಾವಕ್ಕೆ ನಗರದ ಪಾರಂಪರಿಕ ತಾಣಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತಿರುವ ಸಂಘಟನೆಗಳಿಂದ ಹಾಗೂ ನಗರ ತಜ್ಞರಿಂದ ವಿರೋಧ ವ್ಯಕ್ತವಾಗಿದೆ.

ನಗರದ ಪರಂಪರೆಯ ಕುರುಹುಗಳನ್ನು ಸಾರುವ ಇಂತಹ ತಾಣಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು. ಇಂತಹ ಕಟ್ಟಡಗಳ ಮೂಲಸ್ವರೂಪವನ್ನು ಕಳೆದುಕೊಂಡರೆ ಮತ್ತೆ ಅವುಗಳ ಮರುರೂಪಿಸುವುದು ಅಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲೂ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ಗೆ ಬಾಲಬ್ರೂಯಿ ಕಟ್ಟಡ ಬಳಸಿಕೊಳ್ಳುವ ಪ್ರಸ್ತಾವವಿತ್ತು. ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಆಗಿನ ಸರ್ಕಾರ ಇದರಿಂದ ಹಿಂದೆ ಸರಿದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಗವಹಿಸಿದ್ದ, ವಿಧಾನಮಂಡಲ ಸಂಸ್ಥೆಗಳ ಸಭೆಯಲ್ಲಿ ಸೋಮವಾರ (ಸೆ. 20) ಮತ್ತೆ ಈ ವಿಚಾರ ಚರ್ಚೆಯಾಗಿದೆ. ಬಾಲಬ್ರೂಯಿ ಕಟ್ಟಡದ ಜಾಗದಲ್ಲಿ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ ಆರಂಭಿಸುವ ಕುರಿತು ವಿಧಾನ ಪರಿಷತ್‌ ಸದಸ್ಯರೊಬ್ಬರು ಇತ್ತೀಚೆಗೆ ಮತ್ತೆ ಪ್ರಸ್ತಾವ ಸಲ್ಲಿಸಿದ್ದು, ಈ ಬಗ್ಗೆ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

‘ಮಹಾತ್ಮ ಗಾಂಧೀಜಿ, ರವೀಂದ್ರನಾಥ ಟ್ಯಾಗೋರ್‌ ಅವರಂತಹ ಮಹಾನೀಯರ ಆತಿಥ್ಯಕ್ಕೆ ಬಳಕೆಯಾಗಿದ್ದ ಬಾಲಬ್ರೂಯಿ ಕಟ್ಟಡ ಈ ನಗರದ ಪಾರಂಪರಿಕ ಕುರುಹು. ಇಂತಹ ಕಟ್ಟಡವನ್ನು ಹಾಗೂ ಅಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ಮರು ಸೃಷ್ಟಿಸಲು ಸಾಧ್ಯವಿಲ್ಲ. ಈ ಕಟ್ಟಡವನ್ನು ನಗರದ ಪರಂಪರೆಯ ಕತೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಮ್ಯೂಸಿಯಂ ಆಗಿ ರೂಪಿಸಬೇಕು. ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನು ಹುಡುಕುವುದು ಒಳ್ಳೆಯದು’ ಎಂದು ಬಿ–ಪ್ಯಾಕ್‌ ಸಂಸ್ಥೆಯ ಶರತ್‌ ಅಭಿಪ್ರಾಯಪಟ್ಟರು.

‘ನಗರವು ಪರಿಪೂರ್ಣವಾಗಬೇಕಾದರೆ ಹಳೆ ಪರಂಪರೆಯಿಂದ ಬಂದ ಸೌಂದರ್ಯ ಹಾಗೂ ಹೊಸತನಗಳೆರಡನ್ನೂ ಜೋಡಿಸುವ ಅಗತ್ಯವಿದೆ. ಹಳೆತನದ ಸೊಬಗು ಹಾಗೂ ಹೊಸತರ ಸಮಪಾಕವನ್ನು ಅಹಮದಾಬಾದ್‌ನಂತಹ ನಗರದಲ್ಲಿ ಕಾಣಬಹುದು. ಇಂತಹದ್ದೇ ಮಾದರಿಯನ್ನು ಬೆಂಗಳೂರು ಕೂಡಾ ರೂಪಿಸಿಕೊಳ್ಳಬೇಕು. ಈಗಲೂ ಬೆಂಗಳೂರು ಎಂದ ತಕ್ಷಣ ಲಾಲ್‌ಬಾಗ್‌, ಕಬ್ಬನ್‌‍ ಉದ್ಯಾನ, ಅರಮನೆಗಳು ನೆನಪಿಗೆ ಬರುವುದು, ಅವುಗಳಿಗೆ ಇರುವ ಐತಿಹಾಸಿಕ ಮಹತ್ವದಿಂದ. ಹೊರಗಿನಿಂದ ಬರುವ ಪ್ರವಾಸಿಗರೂ ಇಂತಹ ತಾಣಗಳನ್ನು ಹುಡುಕುತ್ತಾ ಹೋಗುವುದೂ ಇದೇ ಕಾರಣಕ್ಕೆ. ಬಾಲಬ್ರೂಯಿಯಲ್ಲಿ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ನಿರ್ಮಾಣ ಮಾಡಿದರೆ ಅದರಿಂದಾಗುವ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ ಸರ್ಕಾರ ಈ ವಿಚಾರದಲ್ಲಿ ಮುಂದಡಿ ಇಡಬೇಕು’ ಎಂದು ಅವರು ಒತ್ತಾಯಿಸಿದರು.

‘ಶಾಸಕರಿಗೆ ಕಾನ್‌ಸ್ಟಿಟ್ಯೂಷನ್‌ ಕ‌್ಲಬ್‌ ನಿರ್ಮಿಸುವುದು ತಪ್ಪಲ್ಲ. ಸರ್ಕಾರ ಕಲಾಪಗಳಿಗೆ ಸಂಬಂಧಿಸಿದ ವಿವರಗಳು ಒಂದೇ ಸಿಗುವಂತೆ ಮಾಡಲು ಹಾಗೂ ಅವುಗಳ ಅಧ್ಯಯನಕ್ಕೆ ಜನಜಂಗುಳಿಗೆ ಅವಕಾಶ ಇಲ್ಲದ ಪ್ರಶಾಂತವಾದ ಜಾಗದ ಅಗತ್ಯವಿದೆ. ಬಾಲಬ್ರೂಯಿ ಕಟ್ಟಡವನ್ನೇ ಈ ಉದ್ದೇಶಕ್ಕೆ ಬಳಸುವುದು ಅನಿವಾರ್ಯವಾದರೆ ಅಲ್ಲಿನ ಮರಗಿಡಗಳಿಗೆ ಹಾನಿ ಆಗದಂತೆ ನೋಡಿಕೊಳ್ಳಲಿ. ಕಟ್ಟಡದ ಮೂಲಸ್ವರೂಪಕ್ಕೆ ಧಕ್ಕೆ ಉಂಟುಮಾಡುವುದು ಬೇಡ. ಈ ಕಟ್ಟಡದೊಂದಿಗೆ ಬೆಸೆದಿರುವ ನೆನಪುಗಳು ಹಸಿರಾಗಿಯೇ ಉಳಿಯಬೇಕು’ ಎಂದು ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಸಲಹೆ ನೀಡಿದರು.

‘ಕ್ಲಬ್‌ನಿಂದ ಕಟ್ಟಡಕ್ಕೆ ಹಾನಿಯಾಗದು’
‘ಬಾಲಬ್ರೂಯಿ ಕಟ್ಟಡವನ್ನು ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ಗೆ ಬಳಸಿಕೊಳ್ಳಲಾಗುತ್ತದೆ ಎಂದ ಮಾತ್ರಕ್ಕೆ ಅಲ್ಲಿನ ಕಟ್ಟಡವನ್ನು ಕೆಡವಲಾಗುತ್ತದೆ ಎಂದು ಅರ್ಥವಲ್ಲ. ಈಗಿರುವ ಕಟ್ಟಡವನ್ನು ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಅಷ್ಟೇ. ಕ್ಲಬ್ ಸದನ ಸಮಿತಿ ಅಧ್ಯಕ್ಷನಾಗಿದ್ದಾಗ ನಾನೂ ಇದನ್ನು ಶಿಫಾರಸು ಮಾಡಿದ್ದೆ’ ಎಂದು ಶಾಸಕ ಎನ್‌.ಎ.ಹ್ಯಾರಿಸ್‌ ತಿಳಿಸಿದರು.

‘ಬೇರೆಲ್ಲ ಕ್ಲಬ್‌ಗಳಂತೆ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ಕೂಡಾ ಕಾರ್ಯನಿರ್ವಹಿಸಲಿದೆ. ಇದರಿಂದ ಯಾರಿಗೂ ಸಮಸ್ಯೆ ಇಲ್ಲ. ಬಾಲಬ್ರೂಯಿ ಕಟ್ಟಡವು ವಿಧಾನಸೌಧಕ್ಕೆ ಹತ್ತಿರದಲ್ಲಿದೆ. ಇಲ್ಲಿ ಕ್ಲಬ್‌ ನಿರ್ಮಿಸಿದರೆ ಶಾಸಕರು ಹಾಗೂ ಮಾಜಿ ಶಾಸಕರು ಬಂದು ಹೋಗುವುದಕ್ಕೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಈ ಕಟ್ಟಡವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ಕ್ಲಬ್‌ ಎಂದ ಬಳಿಕ ಅಲ್ಲಿ ಗ್ರಂಥಾಲಯ, ಸಣ್ಣ ಪುಟ್ಟ ಸಭೆಗಳನ್ನು ನಡೆಸಲು ಸ್ತಳಾವಕಾಶ ಇರಲೇ ಬೇಕು. ಕ್ರಮೇಣ ಟೆನ್ನಿಸ್‌ ಬ್ಯಾಡ್ಮಿಂಟನ್‌ನಂತಹ ಕ್ರೀಡೆಗೆಗಳಿಗೆ ಅವಕಾಶ ಕಲ್ಪಿಸುವ ಒತ್ತಾಯವೂ ಶಾಸಕರಿಂದ ವ್ಯಕ್ತವಾಗಬಹುದು. ಆದರೆ, ಬಾಲಬ್ರೂಯಿ ಕಟ್ಟಡದಲ್ಲಿ ಈಗ ಉಳಿದುಕೊಂಡಿರುವ ಜಾಗದಲ್ಲಿ ಇವೆಲ್ಲ ಸೌಕರ್ಯಗಳನ್ನು ಕಲ್ಪಿಸುವಷ್ಟು ಸ್ಥಳಾವಕಾಶ ಇಲ್ಲ’ ಎಂದು ನಗರ ತಜ್ಞರೊಬ್ಬರು ಅಭಿಪ್ರಾಯಪಟ್ಟರು. 

‘ಕಾವೇರಿ ನಿವಾಸದ ಬಳಿ ಸುಮಾರು ಎರಡು ಎಕರೆಗಳಷ್ಟು ವಿಶಾಲವಾದ ಸರ್ಕಾರಿ ಜಾಗ ಲಭ್ಯವಿದೆ. ಸುರಕ್ಷತೆ ದೃಷ್ಟಿಯಿಂದಲೂ ಆ ಜಾಗ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ಗೆ ಪ್ರಶಸ್ತವಾಗಿದೆ. ಆ ಜಾಗದಲ್ಲಿ ಕ್ಲಬ್‌ ನಿರ್ಮಿಸಿದರೆ ಭವಿಷ್ಯದಲ್ಲಿ ಹೆಚ್ಚಿನ ಮೂಲಸೌಕರ್ಯಗಳನ್ನು ಹೊಂದುವುದಕ್ಕೂ ಅವಕಾಶವಿದೆ. ಈ ಪ್ರಸ್ತಾವ ಹಿಂದಿನ ಸರ್ಕಾರಕ್ಕೂ ಒಪ್ಪಿಗೆಯಾಗಿತ್ತು. ಶಾಸಕರೂ ಪಕ್ಷಭೇದ ಮರೆತು ಒಪ್ಪಿದ್ದರು. ಈಗ ಮತ್ತೆ ಬಾಲಬ್ರೂಯಿಯನ್ನೇ ಕ್ಲಬ್‌ ನಿರ್ಮಾಣಕ್ಕೆ ಬಳಸುವ ಚರ್ಚೆ ಏಕೆ ಮುನ್ನೆಲೆಗೆ ಬಂದಿದೆಯೋ ತಿಳಿಯದು’ ಎಂದರು. 

‘ಗಣ್ಯರ ಓಡಾಟ–ಹೆಚ್ಚಲಿದೆ ದಟ್ಟಣೆ’
‘ಬಾಲಬ್ರೂಯಿ ಕಟ್ಟಡದ ಆಸುಪಾಸಿನ ರಸ್ತೆಗಳಲ್ಲಿ ಸದಾ ಸಂಚಾರ ದಟ್ಟಣೆ ಇರುತ್ತದೆ. ಈ ಕಟ್ಟಡವನ್ನು ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ಗೆ ಬಳಸಿಕೊಂಡರೆ, ಗಣ್ಯರ ಓಡಾಟ ಮತ್ತಷ್ಟು ಹೆಚ್ಚಲಿದೆ. ಇದರಿಂದ ಈ ಪ್ರದೇಶದಲ್ಲಿ ಸಂಚಾರ ದಟ್ಟನೆ ಮತ್ತಷ್ಟು ಜಾಸ್ತಿಯಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ’ ಎಂದು ನಗರ ತಜ್ಞರೊಬ್ಬರು ಆತಂಕ ವ್ಯಕ್ತಪಡಿಸಿದರು.

*.

ನಗರ ಕೇಂದ್ರ ಪ್ರದೇಶದಲ್ಲಿದ್ದ ಬಹಳಷ್ಟು ಪಾರಂಪರಿಕ ಕುರುಹುಗಳನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಈಗ ಉಳಿದಿರುವ ಕೆಲವೇ ಕೆಲವು ಪಾರಂಪರಿಕ ಕಟ್ಟಡಗಳನ್ನು ಮುಂದಿನ ಪೀಳಿಗೆ ಸಲುವಾಗಿ ಉಳಿಸಿಕೊಳ್ಳುವ ಅಗತ್ಯವಿದೆ.
-ನರೇಶ್‌ ನರಸಿಂಹನ್‌, ವಾಸ್ತುಶಿಲ್ಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು