ಸೋಮವಾರ, ಜನವರಿ 17, 2022
20 °C
ಚಿತ್ರದುರ್ಗ ಡಿವೈಎಸ್ಪಿ ತಂಡದಿಂದ ಚುರುಕು ಕಾರ್ಯಾಚರಣೆ

ಪತ್ನಿ ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಆರೋಪಿ 24 ಗಂಟೆಯಲ್ಲೇ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರಿಗೆರೆ: ಸಮೀಪದ ಕೋಣನೂರು ಗ್ರಾಮದಲ್ಲಿ ಡಿ.25ರಂದು ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಪ್ರಕರಣ ಸಂಬಂಧ ಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೊಣನೂರು ಗ್ರಾಮದ ಆರ್. ನಾರಪ್ಪ (40) ಬಂಧಿತ. ಈತ ತನ್ನ ಪತ್ನಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಬೆಣ್ಣೆಹಳ್ಳಿ ಗ್ರಾಮದ ಸುಮಾ (26) ಅವರನ್ನು ಕೊಲೆ ಮಾಡಿದ್ದ.

ಶವ ಪತ್ತೆಯಾದ 24 ಗಂಟೆಯೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋ‍‍ಪಿಯನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಡಿವೈಎಸ್ಪಿ ತಂಡ ಆರೋಪಿಯನ್ನು ಮಹಜರು ಮಾಡಲು ಕೋಣನೂರು ಗ್ರಾಮಕ್ಕೆ ಕರೆತಂದಿತು. ಕೊಲೆ ಮಾಡಿದ ಸಂದರ್ಭದಲ್ಲಿ ಬಳಸಿದ ಪರಿಕರಗಳ ಮಾಹಿತಿ ಪಡೆದು ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಆರೋಪಿಯನ್ನು ಪೊಲೀಸರು ಗ್ರಾಮಕ್ಕೆ ಕರೆತಂದಾಗ ಗ್ರಾಮಸ್ಥರು ಆರೋಪಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮರಣದಂಡನೆ ಜಾರಿಯಾಗ
ಬೇಕು ಎಂದು ಮಹಿಳೆಯರು ಶಪಿಸುತ್ತಿದ್ದ ದೃಶ್ಯ ಕಂಡುಬಂದಿತು. 24 ಗಂಟೆಯೊಳಗೆ ಬಂಧಿಸಿದ ಪೊಲೀಸರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಳಿವು ಕೊಟ್ಟ ಮಗ

ಆರೋಪಿ ನಾರಪ್ಪ ಪತ್ನಿಯನ್ನು ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಶವವನ್ನು ಮಂಚದ ಕೆಳಗೆ ಹೂತಿಟ್ಟ. ಮರುದಿನ ತನ್ನ 5 ವರ್ಷದ ಮಗ ನಾರದಮುನಿಯನ್ನು ಬೆಣ್ಣೆಹಳ್ಳಿಗೆ ಬಿಟ್ಟು ಹೋಗಿದ್ದ. ಆ ವೇಳೆ ಈತನ ತಾತ ಕರಿಯಪ್ಪ ಮೊಮ್ಮಗನನ್ನು ಪ್ರಶ್ನಿಸಿದಾಗ ‘ಅಪ್ಪ ಮನೆಯ ಒಳಗಡೆ ಸಿಮೆಂಟ್‍ ಕೆಲಸ ಮಾಡುತ್ತಿತ್ತು’ ಎಂದು ಹೇಳಿದ ವಿಷಯ ಅನುಮಾನ ಮೂಡಿತ್ತು. ಇದರಿಂದ ಅನುಮಾನಗೊಂಡು ಕರಿಯಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು