ಮಂಗಳವಾರ, ಮೇ 18, 2021
24 °C
ಮೇಯರ್‌ ಚುನಾವಣೆ: ಪಾಲಿಕೆ ಸದಸ್ಯರ ಜೊತೆ ಕಾಂಗ್ರೆಸ್‌ ಮುಖಂಡರ ಸಭೆ

ಸುಲಭದಲ್ಲಿ ಚುಕ್ಕಾಣಿ ಬಿಟ್ಟುಕೊಡದಿರಲು ಕೈ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್‌ ಜೊತೆ ಸೇರಿ ನಾಲ್ಕು ವರ್ಷ ಪಾಲಿಕೆಯ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌, ಈ ಅವಧಿಯ ಕೊನೆಯ ವರ್ಷದ ಮೇಯರ್‌ ಸ್ಥಾನವನ್ನು ಸುಲಭದಲ್ಲಿ ಬಿಜೆಪಿಗೆ ಬಿಟ್ಟುಕೊಡದಿರಲು ತೀರ್ಮಾನಿಸಿದೆ.

ಮೇಯರ್‌ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕರ ಹಾಗೂ ಪಾಲಿಕೆ ಸದಸ್ಯರ ಸಭೆ ಸೋಮವಾರ ನಡೆಯಿತು.

ಈ ಬಾರಿ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಿವೆ. ಪಾಲಿಕೆಯಲ್ಲಿ ಮೈತ್ರಿ ಮುಂದುವರಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೀರ್ಮಾನಿಸಿವೆ. ಮೇಯರ್ ಸ್ಥಾನದ ಆಕಾಂಕ್ಷಿ ಆಗಿದ್ದ ಶಂಕರಮಠ ವಾರ್ಡ್‌ನ ಸದಸ್ಯ ಎಂ.ಶಿವರಾಜು ಅವರು ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಉ‍ಪಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್‌ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಅವರು ಮೇಯರ್‌ ಸ್ಥಾನದ ಸ್ಪರ್ಧೆಯಲ್ಲಿಲ್ಲ.‌

ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಸದಸ್ಯ ಆರ್‌.ಎಸ್‌.ಸತ್ಯನಾರಾಯಣ ಅಥವಾ ಗುರಪ್ಪನಪಾಳ್ಯ ವಾರ್ಡ್‌ನ ಸದಸ್ಯ ಮಹಮ್ಮದ್‌ ರಿಜ್ವಾನ್ ನವಾಬ್‌ ಅವರಲ್ಲಿ ಒಬ್ಬರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮೇಯರ್‌ ಸ್ಥಾನ ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸುವ ಹೊಣೆಯನ್ನು ದಿನೇಶ್‌ ಗುಂಡೂರಾವ್‌ ಅವರು ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಹಾಗೂ ಶಾಸಕ ಬಿ.ಜೆಡ್‌.ಜಮೀರ್‌ ಅಹಮ್ಮದ್ ಖಾನ್‌ ಅವರಿಗೆ ವಹಿಸಲಾಗಿದೆ ಎಂದು ಗೊತ್ತಾಗಿದೆ. 

‘ಮೇಯರ್‌ ಸ್ಥಾನಕ್ಕೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಅವರನ್ನು ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

‘ಇಷ್ಟು ವರ್ಷದಂತೆ ಈ ಬಾರಿಗೂ ಪಕ್ಷೇತರ ಸದಸ್ಯರು ಮೈತ್ರಿಕೂಟದ  ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ಬಿಜೆಪಿಯ ಅತೃಪ್ತ ಸದಸ್ಯರ ಜೊತೆಗೂ ಸಂಪರ್ಕದಲ್ಲಿದ್ದೇವೆ’ ಎಂದು ಪಾಲಿಕೆಯಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು