ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಿಸಲು ಕ್ರಮ: ಡಿ.ಕೆ. ಶಿವಕುಮಾರ್‌

Published 25 ಡಿಸೆಂಬರ್ 2023, 16:25 IST
Last Updated 25 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ಶಾಲೆಗಳಲ್ಲಿ ಬಡವರ ಮಕ್ಕಳು ಓದುತ್ತಿದ್ದಾರೆ. ಅಲ್ಲಿನ ಶಿಕ್ಷಣ ಮಟ್ಟ ಸುಧಾರಿಸುವ ಉದ್ದೇಶದಿಂದ ಗುಣಮಟ್ಟದ, ತರಬೇತಿ ಹೊಂದಿದ ಶಿಕ್ಷಕರನ್ನು ನೇಮಿಸಲು ನಿರ್ಧರಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಪಾಲಿಕೆ ಶಾಲೆ, ಕಾಲೇಜುಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರು ಉಪ ಮುಖ್ಯಮಂತ್ರಿಯವರನ್ನು ಸೋಮವಾರ ಭೇಟಿ ಮಾಡಿ, ತಮ್ಮನ್ನು ಸೇವೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್‌, ‘ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮನ್ನು ಮುಂದುವರಿಸುವಂತೆ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ಮನವಿ ಮಾಡಿದ್ದಾರೆ. ಈಗ ಇರುವವರಲ್ಲಿ ಗುಣಮಟ್ಟದ, ತರಬೇತಿ ಹೊಂದಿದ ಶಿಕ್ಷಕರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಸೆಕ್ಯೂರಿಟಿ ಏಜೆನ್ಸಿಗಳಿಂದ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂಬ ದೂರು ಬಂದಿದೆ. ಯಾರು? ಯಾವ ಕೆಲಸ ಮಾಡುತ್ತಾರೋ? ಅದನ್ನೇ ಮಾಡಬೇಕು. ಬಿಬಿಎಂಪಿ ಶಾಲೆಗಳಲ್ಲಿ ಗುಣಮಟ್ಟ ಕುಸಿದಿದೆ. ಈ ಕಾರಣದಿಂದ ಪಾಲಿಕೆ ಶಾಲೆಗಳನ್ನು ಶಿಕ್ಷಣ ಇಲಾಖೆ ಅಧೀನಕ್ಕೆ ವಹಿಸಲಾಗಿದೆ. ಈ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸವನ್ನು ಮಾತ್ರ ಬಿಬಿಎಂಪಿ ಮಾಡಲಿದೆ ಎಂದು ಹೇಳಿದರು.

ಕನ್ನಡ ನಾಮಫಲಕ ಅಳವಡಿಸದವರ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟ ಆರಂಭಿಸುತ್ತಿರುವ ಕುರಿತು ಕೇಳಿದಾಗ, ‘ಕನ್ನಡ ಪರ ಸಂಘಟನೆಗಳು ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಬೇಕು. ಹೋರಾಟದ ಹೆಸರಿನಲ್ಲಿ ಯಾರದ್ದೇ ಆಸ್ತಿಗಳಿಗೆ ಹಾನಿ ಮಾಡಬಾರದು’ ಎಂದರು.

ಮಳಿಗೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡದಲ್ಲೇ ಇರಬೇಕು ಎಂಬ ಕಾನೂನು ಇದೆ. ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಭೇಟಿ ಕುರಿತು ಕೇಳಿದಾಗ, ‘ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕೆಲವು ಯೋಜನಾ ಪ್ರಾಧಿಕಾರಗಳಿವೆ. ಅವುಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನಾಮನಿರ್ದೇಶನ ಕುರಿತು ಚರ್ಚಿಸಿದ್ದೇವೆ. ಸಚಿವರನ್ನು ವೀಕ್ಷಕರನ್ನಾಗಿ ನಿಯೋಜಿಸಿರುವ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಕುರಿತೂ ಚರ್ಚಿಸಿದ್ದೇವೆ’ ಎಂದರು.

ನಿಗಮ, ಮಂಡಳಿ ನಾಮನಿರ್ದೇಶನಕ್ಕೆ ಪಕ್ಷದ ವರಿಷ್ಠರಿಗೆ ಪಟ್ಟಿ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ನೇಮಕಾತಿ ಆದೇಶ ಹೊರಬೀಳಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪರಿಹಾರಕ್ಕಾಗಿ ರೈತರು ಬರಗಾಲವನ್ನು ಬಯಸುತ್ತಾರೆ’ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT