ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತದೇಹ ಹೂಳುವ ಪ್ರತಿ ಗುಂಡಿಗೆ ₹ 1,000 ಕಮಿಷನ್ ಕೇಳಿದ್ದ!

ವಿಲ್ಸನ್ ಗಾರ್ಡನ್ ಪೊಲೀಸರ ಕಾರ್ಯಾಚರಣೆ: ದೂರುದಾರನೇ ಆರೋಪಿ
Last Updated 6 ಮೇ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ಮೃತದೇಹ ಹೂಳಲು ಗುಂಡಿ ತೆಗೆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬೆದರಿಸಿ ಪ್ರತಿ ಗುಂಡಿಗೆ ₹ 1,000 ಅಥವಾ ತಿಂಗಳಿಗೆ ₹ 10,000 ಕಮಿಷನ್ ನೀಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದ ಆರೋಪದಡಿ ಮೌಲಾನ್ ಪಾಷಾ ಎಂಬಾತನನ್ನು ವಿಲ್ಸನ್ ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಠಾಣೆ ವ್ಯಾಪ್ತಿಯ ಬಡಾಮಕಾನ್ ಮೈದಾನದ ಪಕ್ಕದಲ್ಲಿ ಸ್ಮಶಾನವಿದೆ. ಸಯ್ಯದ್ ಪಿರ್ದೋಸ್ ಎಂಬುವರು ಮೃತದೇಹ ಹೂಳಲು ಗುಂಡಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬೆದರಿಕೆ ಹಾಕಿದ್ದ ಮೌಲಾನ್ ಪಾಷಾ, ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ಆಗಿತ್ತು. ಎರಡೂ ಕಡೆಯಿಂದಲೂ ದೂರು ಪಡೆದು ನಾಲ್ವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ಥಳೀಯ ನಿವಾಸಿಗಳಾದ ಸಾಯಿದ್, ಸಾಕೀಬ್ ಹಾಗೂ ಸಾದಿಕ್ ಪಾಷಾ ಎಂಬುವರನ್ನೂ ಬಂಧಿಸಲಾಗಿದೆ. ‘ತನ್ನದೇನು ತಪ್ಪಿಲ್ಲ. ಎದುರಾಳಿ ತಂಡದವರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಮೌಲಾನ್ ಪಾಷಾ ಆರಂಭದಲ್ಲಿ ದೂರು ನೀಡಿದ್ದ. ತನಿಖೆ ಕೈಗೊಂಡಾಗ ಆತನೂ ಬ್ಲ್ಯಾಕ್‌ಮೇಲ್ ಪ್ರಕರಣದ ಆರೋಪಿ ಎಂಬುದು ತಿಳಿಯಿತು. ಆತನನ್ನೂ ಬಂಧಿಸಿ ಇದೀಗ ಜೈಲಿಗಟ್ಟಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಸ್ಮಶಾನದ ಮುಂದೆ ಫಲಕ ನಿಲ್ಲಿಸಿದ್ದ: ‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಸ್ಮಶಾನದಲ್ಲಿ ಗುಂಡಿ ತೂಡುವ ಕೆಲಸಕ್ಕೆ ಬೇಡಿಕೆ ಬಂದಿತ್ತು. ಅದೇ ಕಾರಣಕ್ಕೆ ಪಿರ್ದೋಸ್, ಪ್ರತಿ ಗುಂಡಿಗೆ ಹೆಚ್ಚು ಹಣ ಪಡೆಯುತ್ತಿದ್ದರು. ಅದು ಗೊತ್ತಾಗುತ್ತಿದ್ದಂತೆ ಮೌಲಾನ್ ಪಾಷಾ, ಪಿರ್ದೋಸ್ ಜೊತೆ ಗಲಾಟೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಕೊಡಲು ಒಪ್ಪದಿದ್ದಕ್ಕೆ, ಸ್ಮಶಾನ ಎದುರು ಫಲಕ ಹಾಕಿದ್ದ. ‘ಗುಂಡಿ ತೆಗೆಯಲು ₹ 1,500 ಮಾತ್ರ ನೀಡಿ. ಹೆಚ್ಚು ಹಣ ಕೇಳಿದರೆ ನನಗೆ ದೂರು ನೀಡಿ’ ಎಂದು ತನ್ನ ಮೊಬೈಲ್ ನಂಬರ್ ಹಾಕಿಸಿದ್ದ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಫಲಕ ಹಾಕಿದ್ದನ್ನು ಸ್ಥಳೀಯ ಯುವಕರು ಪ್ರಶ್ನಿಸಿದ್ದರು. ಅವಾಗಲೇ ಪರಸ್ಪರ ಜಗಳ ಆಗಿತ್ತು’ ಎಂದೂ ಮೂಲಗಳು ತಿಳಿಸಿವೆ.

ರಾಜಕಾರಣಿ ಜೊತೆ ಓಡಾಟ:‘ಆರೋಪಿ ಮೌಲಾನ್ ಪಾಷಾ ರಾಜಕಾರಣಿಗಳ ಜೊತೆ ಓಡಾಡುತ್ತಿದ್ದ. ಅವರ ಜೊತೆ ಫೋಟೊ ತೆಗೆಸಿಕೊಂಡು, ಅದನ್ನೇ ಜನರಿಗೆ ತೋರಿಸುತ್ತಿದ್ದ. ತನ್ನ ತಂಟೆಗೆ ಬಂದರೆ ಸುಮ್ಮನೇ ಬಿಡುವುದಿಲ್ಲವೆಂದು ಹೆದರಿಸುತ್ತಿದ್ದ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT