ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ಅವಧಿ ಮುಗಿದರೂ ನಡೆಯದ ಚುನಾವಣೆ: ಲೇಖಕಿಯರ ಸಂಘದ ಚುನಾವಣೆಗೆ ಆಗ್ರಹ

ಹಲವು ಸದಸ್ಯರ ಆಕ್ಷೇಪ
Last Updated 15 ಮೇ 2022, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ (ಕಲೇಸಂ) ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್‌ ಅವರ ಅಧ್ಯಕ್ಷತೆಯ ಅಧಿಕಾರ ಅವಧಿ ಮುಗಿದಿದ್ದರೂ ಚುನಾವಣೆ ನಡೆಸಲು ಸಿದ್ಧರಿಲ್ಲ ಎಂದು ಸಂಘದ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೇಮಲತಾ ಮಹಿಷಿ, ಬಿ.ಟಿ. ಲಲಿತಾ ನಾಯಕ್‌, ವಿಜಯಮ್ಮ, ಉಷಾ ಪಿ. ರೈ, ಸಂಧ್ಯಾ ರೆಡ್ಡಿ, ವಸುಂಧರಾ ಭೂಪತಿ ಮುಂತಾದವರು ಸಹಕಾರ ಸಂಘಗಳ ಇಲಾಖೆ ರಿಜಿಸ್ಟ್ರಾರ್‌ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.

ಏನಿದು ಪ್ರಕರಣ?: 2018–19ನೇ ಸಾಲಿನಲ್ಲಿ ಮುಂದಿನ ಮೂರು ವರ್ಷಗಳಿಗೆ ವನಮಾಲ ಅವರು ಸಂಘದ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದರು. ಅಧಿಕಾರಾವಧಿಯು 2021ಕ್ಕೆ ಮುಗಿ ದಿದ್ದು, ಕೊರೊನಾ ಇದ್ದ ಕಾರಣ ಸಕ್ರಿಯವಾಗಿ ಕೆಲಸ ನಿರ್ವಹಿಸಲು ಆಗಲಿಲ್ಲ ಎನ್ನುವ ಕಾರಣ ನೀಡಿ, ಇನ್ನೂ ಒಂದು ವರ್ಷ ಅವಧಿ ವಿಸ್ತರಿಸುವಂತೆ ವನಮಾಲ ಅವರು ಸಲಹಾ ಸಮಿತಿಗೆ ಮನವಿ ಮಾಡಿದರು. ಅವರ ಮನವಿಯನ್ನು ಒಪ್ಪಿ, ಒಂದು ವರ್ಷಕ್ಕೆ ಅವರ ಅವಧಿಯನ್ನು ವಿಸ್ತರಿಸಲಾಯಿತು. ನಂತರ, 2022ರ ಏಪ್ರಿಲ್‌ 17ರಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಇನ್ನೊಂದು ಅವಧಿಗೂ ಇದೇ ತಂಡ ಮುಂದುವರಿಯುವುದಾಗಿ ವನಮಾಲ ಹೇಳಿದರು. ಇದನ್ನು ಹಲವು ಸದಸ್ಯರು ವಿರೋಧಿಸಿ, ಚುನಾವಣೆ ಆಗಲೇಬೇಕು ಎಂದು ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದು ಚುನಾವಣೆ ನಡೆಸುವುದಾಗಿ ಹೇಳಿದ ವನಮಾಲ ಅವರು ನಂತರ ಕ್ರಮ ಕೈಗೊಳ್ಳಲಿಲ್ಲ ಎಂದು ಸಂಘದ ಹಲವು ಸದಸ್ಯರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕವಯತ್ರಿ ಪ್ರತಿಭಾ ನಂದಕುಮಾರ್‌, ‘ವನಮಾಲ ಅವರೇ ಮತ್ತೊಂದು ಅವಧಿಗೂ ಅಧ್ಯಕ್ಷೆ ಆಗಿ ಆಯ್ಕೆ ಆಗಲಿ. ನಮ್ಮದು ಯಾರದ್ದೂ ಅಭ್ಯಂತರವಿಲ್ಲ. ಆದರೆ, ಕಾನೂನಿನ ‍ಪ್ರಕಾರ ಚುನಾವಣೆ ನಡೆಯಬೇಕು. ಇದಿಷ್ಟೇ ನಮ್ಮ ಆಗ್ರಹ’ ಎಂದರು.

‘ಏಪ್ರಿಲ್‌ನಲ್ಲಿ ನಡೆದ ಸಭೆಯಲ್ಲಿ ಕೆಲವರು ಆನ್‌ಲೈನ್‌ ಮೂಲಕ ಭಾಗಿಯಾಗಿದ್ದರು. ವನಮಾಲ ಅವರು ಈ ವಿಷಯ ಪ್ರಸ್ತಾಪ ಮಾಡಿದಾಗಲೇ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಚುನಾವಣೆ ನಡೆಸಲು ಸಂಘದ ಹಲವು ಮಾಜಿ ಅಧ್ಯಕ್ಷರು ನೇರ ವಾಗಿಯೇ ಹೇಳಿದ್ದರು. ಸಭೆಯ ನಂತರ ಹಲವರು ವನಮಾಲ ಅವರಿಗೆ ಕರೆ ಮಾಡಿ ಮನವೊಲಿಸಲು ಪ್ರಯತ್ನಿಸಿ
ದ್ದರೂ, ಚುನಾವಣೆ ನಡೆಸುವ ಇಚ್ಛೆ ತೋರಿಸುತ್ತಿಲ್ಲ’ ಎಂದು ಲೇಖಕಿ ವಸುಂಧರಾ ಭೂಪತಿ ತಿಳಿಸಿದರು.

‘ನಾನು ಆನ್‌ಲೈನ್‌ ಮೂಲಕ ಸಭೆಯಲ್ಲಿ ಭಾಗವಹಿಸಿದ್ದೆ. ವನಮಾಲ ಅವರ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ನನ್ನಂತೆ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಕೆಲವರ ಮಾತನ್ನು ಮ್ಯೂಟ್‌ ಕೂಡ ಮಾಡಲಾಯಿತು. ಇದು ಸರಿಯಾದ ನಡೆಯಲ್ಲ’ ಎಂದರು ಲೇಖಕಿ ಉಷಾ ಪಿ.ರೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT