ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್: ಸ್ತ್ರೀಮತ

Last Updated 24 ಏಪ್ರಿಲ್ 2020, 6:29 IST
ಅಕ್ಷರ ಗಾತ್ರ

ಮನೆಯ ಕಷ್ಟಗಳೇನು ಎಂಬುದನ್ನು ಲಾಕ್‍ಡೌನ್ ಅರಿವು ಮಾಡಿಸಿತು. ಮನೆಕೆಲಸದವಳು ಒಂದು ದಿನ ರಜೆ ತೆಗೆದುಕೊಂಡರೆ ಹೇಗಪ್ಪಾ ನಿಭಾಯಿಸಿಕೊಳ್ಳುವುದು ಎಂದು ಸಿಡಿಮಿಡಿಗೊಳ್ಳುತ್ತಿದ್ದೆ. ಈಗ ಎಲ್ಲ ಕೆಲಸಗಳನ್ನು ಖುದ್ದು ನಾನೇ ಮಾಡುತ್ತಿದ್ದೇನೆ. ನಿತ್ಯದ ಧಾವಂತ, ಒತ್ತಡದ ಓಟ ನೆಮ್ಮದಿಯ ನಿದ್ರೆಗೆ ಜಾರಲು ಅವಕಾಶ ಕಲ್ಪಿಸಿಕೊಟ್ಟಿದೆ. ನನ್ನ ಕೈರುಚಿಯನ್ನು ಇಷ್ಟ ಪಡದ ಮನೆಮಂದಿ ಈಗ ನಾನು ಮಾಡುವ ಅಡುಗೆಗಳಿಗೆ ಮಾರುಹೋಗಿದ್ದಾರೆ.

ಧಾರಿಣಿ ಮಾಯಾ, ಬೆಂಗಳೂರು

ನಿರಾಳ

ಮನೆಯ ಪಾಕಶಾಲೆಯಲ್ಲಿ ನಿತ್ಯ ದುಡಿಯುವ ಸ್ತ್ರೀ ಸಮುದಾಯಕ್ಕೆ ಲಾಕ್‍ಡೌನ್ ಕೊಂಚ ನಿರಾಳ ನೀಡಿದೆ. ಲಾಕ್ ಆಗಿದ್ದ ದುಡಿಯುವ ಕೈಗಳು ಸ್ವತಂತ್ರವಾಗಿವೆ. ಆದರೂ ಮನೆ ಕೆಲಸದ ಹೊರೆ ತಪ್ಪಿದ್ದಲ್ಲ. ಎದೆಗುಂದದೆ ಲವಲವಿಕೆಯಿಂದ ಕಾರ್ಯನಿರ್ವಹಿಸುತ್ತೇನೆ. ಒಂದೇ ಪಟ್ಟಿಯ ಆಹಾರ ಸೇವಿಸುತ್ತಿದ್ದ ಪರಿವಾರಕ್ಕೆ ಹೊಸ ಬಗೆಯ ಖಾದ್ಯಗಳ ರುಚಿ ಉಣಬಡಿಸಲು ಸಹಕಾರಿಯಾಗಿದೆ.

ವಿಜಯಾ, ಬೆಂಗಳೂರು

ಮನೆಯಲ್ಲಿರಲು ಅವಕಾಶ

ಸುಗಮ ಸಂಗೀತ ಗಾಯಕಿಯಾದ ನಾನು ಹೆಚ್ಚಾಗಿ ಮನೆಯಲ್ಲಿ ಇರುತ್ತಿರಲಿಲ್ಲ. ನಿರ್ಬಂಧದಿಂದ ಸಾಧನೆಯ ಗುರಿ ಮುಟ್ಟಲು ಹೆಚ್ಚಿನ ಸಮಯ ಸಿಕ್ಕಿದೆ. ಸಂಪಾದನೆಗಾಗಿ ವಿದೇಶದಲ್ಲಿ ನೆಲೆಸಿರುವ ಕುಟುಂಬಸ್ಥರು ತಂದೆ ತಾಯಿಯರನ್ನು ಮಾತನಾಡಿಸಲು ಅಥವಾ ನೋಡಲೂ ಸಮಯವಿಲ್ಲದ ಜೀವನ ನಡೆಸುತ್ತಿದ್ದರು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸ್ಥಿತಿಯನ್ನು ಲಾಕ್‍ಡೌನ್ ಸೃಷ್ಟಿಸಿದೆ.

ನೀಲಾಂಬಿಕೆ, ಬನಶಂಕರಿ

ಹೊಂದಾಣಿಕೆಯ ಭಾವ ಮೂಡಿದೆ

ಪ್ರಪಂಚದಾದ್ಯಂತ ಎಲ್ಲಾ ತರಹದ ಜನರನ್ನು ಒಂದೇ ತಕ್ಕಡಿಯಲ್ಲಿ ತೂಗಿಸುತ್ತಿರುವ ಈ ಮಹಾಮಾರಿ, ನಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಲಾಕ್ ಡೌನ್ ನಿಂದ ಮನೆಯ ಸದಸ್ಯರೆಲ್ಲರೂ ಮನೆಯ ಕೆಲಸಗಳನ್ನು ಹಂಚಿಕೊಳ್ಳುತ್ತಾ ಒಂದೇ ಸೂರಿನಡಿ ಇಪ್ಪತ್ತನಾಲ್ಕು ಗಂಟೆಗಳನ್ನು ಕಳೆಯುವ ವಿಶೇಷವಾದ ಪರಿಸ್ಥಿತಿ ಬಂದೊದಗಿದೆ. ವಿಧವಿಧವಾದ ತಿಂಡಿ ತಿನಿಸುಗಳನ್ನು ಮಾಡಿ ಬಿಸಿಬಿಸಿಯಾಗಿ ತಿನ್ನುವ ಅವಕಾಶ ಸಿಕ್ಕಿದೆ. ಪರದೇಶ, ಪರ ಊರುಗಳಲ್ಲಿರುವ ಒಡಹುಟ್ಟಿದವರನ್ನು ಆಧುನಿಕ ತಂತ್ರಜ್ಞಾನದ ಮೂಲಕ ಒಂದುಗೂಡಿಸಿ ಒಂದೆರಡು ನಿಮಿಷಗಳ ಪುಟ್ಟ ವಿಡಿಯೋ ಫಿಲ್ಮ್ ಗಳನ್ನು ಮಾಡುತ್ತಾ ಗೊಂದಲಗೊಂಡಿರುವ ಮನಸ್ಥಿತಿಯನ್ನು ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವಂತಾಗಿದೆ.

ಚಂದ್ರಿಕಾ ರಘುನಂದನ, ವಿದ್ಯಾರಣ್ಯಪುರ

ಅಪ್ಪ–ಮಗಳ ಆಟ

ಭಾನುವಾರ ಬಿಟ್ಟರೆ ಮಗಳೊಂದಿಗೆ ಪತಿ ಕಾಲ ಕಳೆದಿದ್ದೇ ಇಲ್ಲ. ಈಗ ನಿತ್ಯವೂ ಭಾನುವಾರದಂತಿದ್ದು, ಅಪ್ಪ-ಮಗಳ ಆಟ ನೋಡುವುದೇ ಚೆಂದ. ಮನೆಯಲ್ಲಿ ದಿನಕ್ಕೊಂದು ಹೊಸ ರುಚಿಯ ಅನುಭವ ಪಡೆಯುವುದು, ಚಿಕ್ಕ ಮಕ್ಕಳಂತೆ ಪತಿಯೊಂದಿಗಿನ ಆತ್ಮೀಯತೆಯ ಜಗಳಗಳು ಹಾಗೂ ಆಟಗಳು ಹೊಸ ಅನುಭವ ನೀಡುತ್ತಿದೆ. ಕೊರೊನಾ ತಡೆಗೆ ಹೇರಲಾಗಿರುವ ಲಾಕ್‍ಡೌನ್ ನಮ್ಮ ಕುಟುಂಬದ ಆತ್ಮೀಯತೆ ಹೆಚ್ಚಿಸಿದೆ. ಸೋಂಕು ಬೇಗ ತೊಲಗಲಿ ಎನ್ನುವುದೇ ನಮ್ಮ ಆಶಯ.

ಮಂಜುಳಾ, ರಾಜರಾಜೇಶ್ವರಿ ನಗರ

ಪತಿಯೊಂದಿಗೆ ಇರಲು ಅವಕಾಶ

ನಿವೃತ್ತ ಪೊಲೀಸ್ ಅಧಿಕಾರಿಯಾದ ಪತಿ ಸಂಘ ಸಂಸ್ಥೆಗಳು ಹಾಗೂ ಸಾಮಾಜಿಕ ಕೆಲಸಗಳೆಂದು ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದರು. ಮನೆಯಲ್ಲಿ ಇವರು ಇರುವುದೇ ವಿರಳವಾಗಿತ್ತು. ಲಾಕ್‍ಡೌನ್ ಹೇರಿರುವ ಕಾರಣ ಪರಿವಾರದೊಂದಿಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ರಾಮಾಯಣ, ಮಹಾಭಾರತ ಸಂಚಿಕೆಗಳನ್ನು ಒಟ್ಟಿಗೆ ಕೂತು ವೀಕ್ಷಿಸುತ್ತೇವೆ. ಕೊರೊನಾ ತಡೆಯಲು ಲಾಕ್‍ಡೌನ್ ಮುಂದುವರಿಯುವುದೇ ಒಳಿತು.

ಗಂಗುಬಾಯಿ ಸಿ.ಭಂಡಾರೆ, ವಿಶ್ವೇಶ್ವರಯ್ಯ ಬಿಡಿಎ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT