ಮಂಗಳವಾರ, ನವೆಂಬರ್ 29, 2022
29 °C

ಕೆ.ಆರ್.ಪುರ: ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ಬಸವನಪುರ ವಾರ್ಡ್‌ನ ಸಮೃದ್ಧಿ ಬಡಾವಣೆಯಲ್ಲಿ ಇಬ್ಬರು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಛಗೊಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಶೀಗೆಹಳ್ಳಿಯಿಂದ ಬೆಳತೂರು ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಸಮೃದ್ಧಿ ಬಡಾವಣೆ ಸಮೀಪ ಶುಕ್ರವಾರ ಬೆಳಿಗ್ಗೆ 11.30ರ ಸಮಯದಲ್ಲಿ ಇಬ್ಬರು ಕಾರ್ಮಿಕರು ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿತ್ತು. ಸಾಮಾಜಿಕ ಕಾರ್ಯಕರ್ತ ಬೆಳತೂರು ಪರಮೇಶ್ ಹಾಗೂ ಜಗನ್ ಕುಮಾರ್ ಇದನ್ನು ಗಮನಿಸಿದ್ದಾರೆ. ಬಿಡಬ್ಲ್ಯೂಎಸ್ಎಸ್‌ಬಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಈ ಘಟನೆಗೆ ಕಾರಣ ಎಂದು ದೂರಿರುವ ಅವರು, ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗೆ ಇ–ಮೇಲ್ ಕಳುಹಿಸಿದ್ದಾರೆ. 

‘ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸುವ ಪದ್ಧತಿ ನಿಷೇಧಿಸಲಾಗಿದೆ. ಆದರೆ, ಅಧಿಕಾರಿಗಳು ಇಬ್ಬರು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿರುವುದು ಹೇಯಕರ. ಪಕ್ಕದಲ್ಲೇ ಸ್ವಚ್ಛಗೊಳಿಸುವ ಯಂತ್ರಗಳಿದ್ದರೂ ಬಳಸಿಕೊಳ್ಳದೆ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ್ದಾರೆ. ಕಾರ್ಮಿಕರು ಬರಿಗೈಯಲ್ಲಿ ಬಕೆಟ್‌ಗಳ ಮೂಲಕ ಆಳವಾದ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವುದನ್ನು ಕಂಡು ಅವರನ್ನು ಕೂಡಲೇ ರಕ್ಷಣೆ ಮಾಡಿದ್ದೇವೆ’ ಎಂದು ಬೆಳತೂರು ಪರಮೇಶ್
ತಿಳಿಸಿದರು.

ಆವಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಪ್ರಕಾಶ್ ಪ್ರತಿಕ್ರಿಯಿಸಿ, ‘ಘಟನೆ ಸಂಬಂಧ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಕಾಡುಗೋಡಿ ಅಥವಾ ಕೆ.ಆರ್.ಪುರ ಠಾಣೆ ವ್ಯಾಪ್ತಿಗೆ ಈ ಪ್ರಕರಣ ಬರಲಿದೆ’ ಎಂದರು.

ಸಂಪರ್ಕ ಕಲ್ಪಿಸಿಲ್ಲ: ಅಧಿಕಾರಿಗಳ ಸ್ಪಷ್ಟನೆ
110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಹೊಸ ಕಾಮಗಾರಿ ಪ್ರಗತಿಯಲ್ಲಿದೆ. ಹೊಸ ಮ್ಯಾನ್‌ಹೋಲ್‌ಗೆ ಪ್ಲಾಸ್ಟರಿಂಗ್ ಕೆಲಸ ನಡೆಯುತ್ತಿದೆ. ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೊಸ ಮ್ಯಾನ್‌ಹೋಲ್‌ಗೆ ಇನ್ನೂ ಎಸ್.ಟಿ.ಪಿ.ಗೆ ಸಂಪರ್ಕವೇ ಕಲ್ಪಿಸಿಲ್ಲ. ಇತ್ತೀಚಿಗೆ ಸುರಿದ ಭಾರಿ ಮಳೆಗೆ ಮ್ಯಾನ್‌ಹೋಲ್‌ಗೆ ಮಳೆ ನೀರು ಹೋಗಿರುವುರಿಂದ ಸ್ವಚ್ಛಗೊಳಿಸಿರಬಹುದು. ಈ ಘಟನೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಬಿಡಬ್ಲ್ಯೂಎಸ್ಎಸ್‌ಬಿ ಎಇ ವಿನಯ್ ಬಾಬು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು