ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾರ್ಮಿಕರ ರ್‍ಯಾಲಿ

ಮಳೆಯ ನಡುವೆ ಮೆರವಣಿಗೆ: ಸರ್ಕಾರದ ವಿರುದ್ಧ ಆಕ್ರೋಶ
Last Updated 26 ನವೆಂಬರ್ 2020, 19:11 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರದ ಅಂಗವಾಗಿ ನಗರದಲ್ಲೂ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ನಿವಾರ್‌ ಚಂಡಮಾರುತದಿಂದ ಆರಂಭವಾದ ಜಿಟಿಜಿಟಿ ಮಳೆಯ ನಡುವೆಯೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರ್‍ಯಾಲಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿದ್ದರು. ಮೆರವಣಿಗೆ ಸಂದರ್ಭದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.

‌‘ದಶಕಗಳ ಹೋರಾಟದ ಫಲವಾಗಿ ಜಾರಿಗೆ ತಂದ ಕಾರ್ಮಿಕ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಉದ್ಯಮಿಗಳ ಓಲೈಕೆಗೆ ಈ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರಿಗೆ ದ್ರೋಹ ಬಗೆದಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಲೋಕಸಭೆಯಲ್ಲಿ ಬಹುಮತ ಇದೆ ಎಂಬ ಏಕೈಕ ಕಾರಣಕ್ಕೆ ಕೇಂದ್ರ ಸರ್ಕಾರ ಕಾರ್ಮಿಕರಿಗೆ ಮರಣ ಶಾಸನ ಬರೆದಿದೆ. ರಾಜ್ಯ ಸರ್ಕಾರವು ಕೋವಿಡ್‌ ಪರಿಸ್ಥಿತಿಯ ದುರ್ಲಾಭ ಪಡೆದು ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದೆ. ಬಹುರಾಷ್ಟ್ರೀಯ ಕಂಪನಿಗಳು ಮತ್ತು ಬಂಡವಾಳಗಾರರಿಗೆ ಅನುಕೂಲ ಮಾಡಿಕೊಡಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಆ ಮೂಲಕ ರೈತರನ್ನು ಬಂಡವಾಳಗಾರರ ಗುಲಾಮರನ್ನಾಗಿ ಮಾಡಲು ಹೊರಟಿದೆ’ ಎಂದು ದೂರಿದರು.

‘ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಭೂಮಿಯನ್ನು ಯಾರು ಬೇಕಾದರೂ ಖರೀದಿಸುವಂತೆ ಮಾಡಲಾಗುತ್ತಿದೆ. ರೈತರನ್ನು ಬೀದಿಗೆ ತಳ್ಳುವ ಪ್ರಯತ್ನ ಇದಾಗಿದೆ’ ಎಂದು ಕಿಡಿಕಾರಿದರು.

‘ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಕೊರೊನಾ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡಿರುವ ಜನರ ನೆರವಿಗೆ ಸರ್ಕಾರ ನಿಲ್ಲಬೇಕು. ಪ್ರತಿ ಕುಟುಂಬಕ್ಕೆ ತಿಂಗಳಿಗೆ 10 ಕೆ.ಜಿ ಉಚಿತ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳನ್ನು 200 ದಿನಗಳಿಗೆ ಹೆಚ್ಚಿಸಿ ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ರೈಲ್ವೆ, ಬ್ಯಾಂಕ್, ವಿಮೆ, ವಿದ್ಯುತ್, ದೂರ ಸಂಪರ್ಕದಂತಹ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಆಟೋರಿಕ್ಷಾ-ಟ್ಯಾಕ್ಸಿ ಚಾಲಕರ ರ‍್ಯಾಲಿ
ಚಾಲಕರ ನಿಗಮ ಸ್ಥಾಪನೆ, ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳ ಮೇಲಿನ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ತನಕ ನೂರಾರು ಚಾಲಕರು ಮೆರವಣಿಗೆ ನಡೆಸಿದರು. ಮುಷ್ಕರ ಮತ್ತು ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಇದ್ದ ಕಾರಣ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಸಂಚಾರ ನಗರದಲ್ಲಿ ಕೊಂಚ ಕಡಿಮೆ ಇತ್ತು.

ಕೋವಿಡ್ ಕಾರಣದಿಂದ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಕಂಗೆಟ್ಟಿದ್ದಾರೆ. ಜಾತಿವಾರು ನಿಗಮಗಳನ್ನು ಸ್ಥಾಪಿಸುತ್ತಿರುವ ಸರ್ಕಾರ, ಅವುಗಳಲ್ಲಿ ಚಾಲಕರಿಗೆ ನೇರ ಸಾಲ ನೀಡಬೇಕು. ಅಸಂಘಟಿತ ಚಾಲಕರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ತೆರೆದು ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

‘ಬಿಡಿಎ ಅಥವಾ ಗೃಹ ಮಂಡಳಿಯಿಂದ ಚಾಲಕರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಚಾಲಕರಿಗೆ ಆರ್‌ಟಿಒ ಅಧಿಕಾರಿಗಳು ಮತ್ತು ಪೊಲೀಸರು ನೀಡುವ ಕಿರುಕುಳ ತಪ್ಪಿಸಬೇಕು’ ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳ ಬೆಂಬಲ
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

ಎಐಡಿಎಸ್‌ಒ, ಎಸ್‌ಎಫ್‌ಐ, ಎಐಎಸ್‌ಎಫ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಫಲಕ ಹಿಡಿದು ಘೋಷಣೆ ಕೂಗಿದರು. ರಾಷ್ಟ್ರೀಯಹೊಸ ಶಿಕ್ಷಣ ನೀತಿಯು ಶಿಕ್ಷಣದ ವ್ಯಾಪಾರೀಕರಣ, ಕೇಂದ್ರೀಕರಣ ಹಾಗೂ ಕೊಮುವಾದೀಕರಣದ ನೀಲ ನಕ್ಷೆಯಾಗಿದೆ. ಈ ಅವೈಜ್ಞಾನಿಕ ನೀತಿಯನ್ನು ದೇಶಾದ್ಯಂತ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ ವಿರೋಧಿಸುತ್ತಿದ್ದರೂ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಜಾರಿಗೆ ತರಲು ಹೊರಟಿದೆ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT