ಶುಕ್ರವಾರ, ಮಾರ್ಚ್ 5, 2021
30 °C
ಅನಧಿಕೃತ ಧಾರ್ಮಿಕ ಕಟ್ಟಡ ಗುರುತಿಸಲು ಸಮೀಕ್ಷೆ

3 ದಿನಗಳ ಗಡುವು ವಿಧಿಸಿದ ಆಯುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಆಟದ ಮೈದಾನ, ಸರ್ಕಾರಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಮೊದಲಾದ  ಧಾರ್ಮಿಕ ಕಟ್ಟಡಗಳನ್ನು ಸಮೀಕ್ಷೆ ಮಾಡಿ ಮೂರು ದಿನಗಳಲ್ಲಿ ಸಮಗ್ರ ವರದಿ ನೀಡಬೇಕೆಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚಿಸಿದರು.

ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸುವ ಸಂಬಂಧ ಆಯುಕ್ತರು ಬುಧವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಧಿಕಾರಿಗಳ ಸಭೆ ನಡೆಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ 2009ರಲ್ಲಿ ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಾಗಿತ್ತು. ಇಂತಹ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. 2009ರ ಸೆ. 29ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಅವಕಾಶವಿಲ್ಲ. 2009ಕ್ಕೆ ಮುನ್ನ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಬೇರೆಡೆ ಸ್ಥಳಾಂತರಗೊಳಿಸಲು ಅಥವಾ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಿದೆ’ ಎಂದು ಆಯುಕ್ತರು ತಿಳಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡ ನಿರ್ಮಿಸುವುದು ಗಂಭೀರ ವಿಚಾರ. ಇದೇ 28ರಂದು ಈ ವಿಚಾರವಾಗಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ನಿಖರವಾದ ಮಾಹಿತಿ ನೀಡಬೇಕಿದೆ. ಯಾವ ಅಧಿಕಾರಿಯೂ ಈ ಸಮೀಕ್ಷೆಯನ್ನು ಕಡೆಗಣಿಸುವಂತಿಲ್ಲ. 2009ರ ನಂತರ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳಿಗೆ ಇದೇ 27ರೊಳಗೆ ನೋಟೀಸ್ ಜಾರಿ ಮಾಡಬೇಕು. ಅಂತಹ ಕಟ್ಟಡ ನಿರ್ಮಿಸಿದವರಿಂದ 1 ವಾರದೊಳಗೆ ಸಮಜಾಯಿಷಿ ಪಡೆಯಬೇಕು’ ಎಂದು ಸೂಚನೆ ನೀಡಿದರು.

ಧಾರ್ಮಿಕ ಕಟ್ಟಡಗಳ ಸಮೀಕ್ಷೆಗೆ ಎಲ್ಲಾ ಅಧಿಕಾರಿಗಳು ಒಂದೇ ಮಾದರಿ ಅನುಸರಿಸಬೇಕು. ಕಟ್ಟಡ ನಿರ್ಮಿಸಿದ ಅವಧಿ, ಅವುಗಳ ವಿಸ್ತೀರ್ಣದ ಮಾಹಿತಿಯನ್ನೂ ಉಲ್ಲೇಖಿಸಬೇಕು. ಅವುಗಳ ಛಾಯಾಚಿತ್ರಗಳನ್ನೂ ಲಗತ್ತಿಸಬೇಕು. ಹೈಕೋರ್ಟ್‌ಗೆ ವರದಿ ಸಲ್ಲಿಸಿದ ನಂತರ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು