ಸೋಮವಾರ, ಆಗಸ್ಟ್ 15, 2022
22 °C
ನಾಲ್ಕು ವರ್ಷದ ಪದವಿಯಲ್ಲಿ ಮೂರು ವರ್ಷ ಭಾಷಾ ಕಲಿಕೆಗೆ ಒತ್ತಾಯ

4 ವರ್ಷದ ಪದವಿಯಲ್ಲಿ ಕನ್ನಡ ಕಲಿಕೆ 1 ವರ್ಷಕ್ಕೆ ಸೀಮಿತ ಅಸಮರ್ಪಕ: ಸಾಹಿತಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೂತನ ಶಿಕ್ಷಣ ನೀತಿ ಅನ್ವಯ, ನಾಲ್ಕು ವರ್ಷಗಳ ಪದವಿಯಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಕೇವಲ ಒಂದು ವರ್ಷಕ್ಕೆ ಸೀಮಿತಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಸಾಹಿತಿಗಳು, ಕನ್ನಡಪರ ಸಂಘಟನೆಗಳು ಖಂಡಿಸಿದ್ದಾರೆ.

‘ರಾಜ್ಯದ ಎಲ್ಲ ಸಾಂಪ್ರದಾಯಿಕ ಪದವಿಗಳ 4 ಸೆಮಿಸ್ಟರ್‌ಗಳಿಗೆ (ಎರಡು ವರ್ಷ) ಹಾಗೂ ವೃತ್ತಿ ಶಿಕ್ಷಣದ ಪದವಿಗಳಿಗೆ 2 ಸೆಮಿಸ್ಟರ್‌ಗಳಿಗೆ (ಒಂದು ವರ್ಷ) ಈ ಹಿಂದಿನಂತೆ ಕನ್ನಡ ಕಲಿಕೆಗೆ ಅವಕಾಶ ನೀಡಬೇಕು. ಅದನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿರುವುದು ಅಸಮರ್ಪಕ ನಿರ್ಧಾರ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ ವ್ಯಕ್ತಪಡಿಸಿದೆ.

‘ಈ ಹಿಂದೆ ಕೆಲವು ವಿಶ್ವವಿದ್ಯಾಲಯಗಳು ಇಂಗ್ಲಿಷ್‌ನ್ನು ಕಡ್ಡಾಯಗೊಳಿಸಿದಂತೆ ನಾಲ್ಕು ವರ್ಷದ ಪದವಿಗೆ ಕನ್ನಡವನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯಗೊಳಿಸಬೇಕು. ಕನ್ನಡ ಕಲಿಕೆಯನ್ನು ಒಂದು ವರ್ಷಕ್ಕೆ ಇಳಿಸಿದರೆ, ಈಗಾಗಲೇ ಕನ್ನಡದಲ್ಲಿ ಪದವಿ ಪಡೆದಿರುವ ಅಸಂಖ್ಯಾತ ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗಲಿದ್ದಾರೆ. ಹೊಸ ಹುದ್ದೆಗಳ ಸೃಷ್ಟಿಯು ಸ್ಥಗಿತಗೊಂಡು ಮುಂದೆ ಕನ್ನಡ ಕಲಿಯುವುದೇ ಅನುಪಯುಕ್ತ ಎಂಬ ವಾತಾವರಣ ಸೃಷ್ಟಿಯಾಗಲಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿರೋಧ ಎಚ್ಚರಿಕೆ:

‘ಮೂರು ವರ್ಷಗಳ ಪದವಿಯಲ್ಲಿ ಮೊದಲ ಎರಡು ವರ್ಷ ಅಂದರೆ, ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಮತ್ತು ಇತರೆ ಭಾಷಾ ವಿಷಯ ಬೋಧನೆಗೆ ಅವಕಾಶವಿತ್ತು. ಈಗ ನಾಲ್ಕು ವರ್ಷಗಳ ಪದವಿಯಲ್ಲಿ, ಭಾಷಾ ಬೋಧನೆಯನ್ನು ಮೂರು ವರ್ಷಗಳಿಗೆ ವಿಸ್ತರಿಸಬೇಕಾಗಿತ್ತು. ಕಡೇ ಪಕ್ಷ ಈ ಹಿಂದೆ ಇದ್ದಂತೆ ಎರಡು ವರ್ಷಗಳ ಅವಧಿಯನ್ನಾದರೂ ಉಳಿಸಿಕೊಳ್ಳಬೇಕಾಗಿತ್ತು. ಅದರ ಬದಲು ಒಂದು ವರ್ಷಕ್ಕೆ ಮಿತಿಗೊಳಿಸಿರುವುದು ಖಂಡನೀಯ’ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

‘ಯಾವುದೇ ವಿಶೇಷ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುವವರಿಗೆ ಕನ್ನಡ ಭಾಷೆ, ಸಾಹಿತ್ಯದ ಸಾಮಾನ್ಯ ಪರಿಚಯ ಕಡ್ಡಾಯವಾಗಬೇಕು. ಇದು ಕನ್ನಡಾಭಿಮಾನದ ಪ್ರಶ್ನೆಯಲ್ಲ. ಯಾವುದೇ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಿ, ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸಲು ಕನ್ನಡ ಭಾಷೆ, ಸಾಹಿತ್ಯಗಳ ಸಂಕ್ಷಿಪ್ತ ಪರಿಚಯವು ಪೂರಕವಾಗುತ್ತದೆ. ಈ ಕಾರಣದಿಂದಾಗಿ, ನಾಲ್ಕು ವರ್ಷಗಳ‌ ಪದವಿ ಕೋರ್ಸ್‌ನಲ್ಲಿ ಮೂರು ವರ್ಷ ಕನ್ನಡ ಕಲಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು