ಕಾವೇರಿ, ಎತ್ತಿನಹೊಳೆ, ಲಿಂಗನಮಕ್ಕಿ... ಕೊನೆ ಎಂದು?

ಶುಕ್ರವಾರ, ಜೂಲೈ 19, 2019
24 °C
350 ಕಿ.ಮೀ. ದೂರದ ನೀರು ತರಲು ತವಕವೇಕೆ? ಇಲ್ಲಿನ ನೀರು ಬಳಕೆಗೆ ಯೋಜನೆ ಏಕಿಲ್ಲ?

ಕಾವೇರಿ, ಎತ್ತಿನಹೊಳೆ, ಲಿಂಗನಮಕ್ಕಿ... ಕೊನೆ ಎಂದು?

Published:
Updated:

ಬೆಂಗಳೂರು: ಕೆರೆಗಳನ್ನೆಲ್ಲ ಆಪೋಶನ ತೆಗೆದುಕೊಂಡು ಅಂಕೆ ಮೀರಿ ಬೆಳೆಯುತ್ತಿರುವ ಬೆಂಗಳೂರು ನಗರದ ‘ಜಲದಾಹ’ ದಿನೇದಿನೆ ಹೆಚ್ಚುತ್ತಲೇ ಇದೆ. ನಗರದ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಸರ್ಕಾರ ಇಲ್ಲಿರುವ ಜಲಮೂಲಗಳನ್ನು ಪುನರುಜ್ಜೀವನಗೊಳಿಸಿ ಅವುಗಳ ನೀರನ್ನು ಬಳಸುವ ಬದಲು ಹೊಸ ‘ಜಲಮೂಲ’ಗಳನ್ನು ಅರಸುತ್ತಲೇ ಸಾಗುತ್ತಿದೆ.

ಕಾವೇರಿ ಐದನೇ ಹಂತ ಮುಗಿದ ಬಳಿಕ ಕೆಆರ್‌ಎಸ್‌ ಜಲಾಶಯದ ನೀರಿನ ಪಾಲು ನಗರಕ್ಕೆ ಲಭಿಸುವುದಿಲ್ಲ ಎಂದರಿತ ಸರ್ಕಾರ ಮೂರು ವರ್ಷಗಳ ಹಿಂದೆ ಜಲಮಂಡಳಿಯ ನಿವೃತ್ತ ಮುಖ್ಯ ಎಂಜಿನಿಯರ್‌ ಬಿ.ಎನ್‌.ತ್ಯಾಗರಾಜ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿಗೆ ಮರುಜೀವ ನೀಡಲು ಮುಂದಾಗಿದೆ. ಭವಿಷ್ಯದಲ್ಲಿ ನಗರಕ್ಕೆ ಕುಡಿಯುವ ಪೂರೈಸಲು ಸರ್ಕಾರ ಲಿಂಗನಮಕ್ಕಿ ಜಲಾಶಯದ ನೀರಿನ ಮೇಲೆ ಕಣ್ಣಿಟ್ಟಿದೆ. ಜೊತೆಗೆ ಎತ್ತಿನಹೊಳೆ ಯೋಜನೆಯ ನೀರನ್ನೂ (ವರ್ಷಕ್ಕೆ 2.5 ಟಿಎಂಸಿ ಅಡಿ) ಬಳಸಿಕೊಳ್ಳಲಿದೆ.

ಸುಮಾರು 350 ಕಿ.ಮೀ ದೂರದಿಂದ ನೀರು ತರುವ ಈ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ
ಅವರು ಜಲಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಂದಾಜು ₹ 12,500 ಕೋಟಿಗೂ ಅಧಿಕ ಬಂಡವಾಳ ಬಯಸುವ, ಹಸಿರಿನಿಂದ ಕಂಗೊಳಿಸುವ ಮಲೆನಾಡಿನ ಮರಗಿಡಗಳನ್ನು ಬುಡಮೇಲು ಮಾಡುವ ಈ ಯೋಜನೆ ಬಗ್ಗೆ ಜಲತಜ್ಞರು ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ.

ನಗರದ ಬೆಳೆಯುತ್ತಿದೆ ಎಂಬ ಕಾರಣ ಹೇಳಿ ಹೊರ ಪ್ರದೇಶಗಳಿಂದ ನೀರನ್ನು ತರುವ ಪರಿಪಾಠಕ್ಕೆ ಕೊನೆ ಯಾವತ್ತು? ಇಲ್ಲಿರುವ ಜಲಸಂಪನ್ಮೂಲಗಳ ಬಳಸುವ ಮಾರ್ಗೋಪಾಯಗಳ ಬಗ್ಗೆ ಗಮನ ವಹಿಸುತ್ತಿಲ್ಲ ಏಕೆ ಎಂಬುದು ಅವರ ಮೂಲ ಪ್ರಶ್ನೆ.

ಹವಾಮಾನ ವೈಪರೀತ್ಯದಿಂದಾಗಿ ಮಲೆನಾಡಿನಲ್ಲೇ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಿದೆ. ಶರಾವತಿ ನದಿ ದಂಡೆಯ ಜನರೇ ನೀರಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಿರುವಾಗ ಲಿಂಗನಮಕ್ಕಿ ಜಲಾಶಯದ ನೀರನ್ನು ಇಲ್ಲಿಗೆ ತರಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ಐಐಎಸ್ಸಿಯ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ.

ಪ್ರಸ್ತುತ ಜಲಮಂಡಳಿಯು ನಗರದ ಬೇಡಿಕೆಯ ಶೇ 60ರಷ್ಟು ನೀರನ್ನು ಒದಗಿಸುತ್ತಿದೆ. ನಿತ್ಯ 140 ಕೋಟಿ ಲೀಟರ್‌ (ಗೃಹ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಸೇರಿ) ನೀರನ್ನು ನಗರಕ್ಕೆ ಪೂರೈಸುತ್ತಿದೆ. 2031ರ ಹೊತ್ತಿಗೆ ಈ ಬೇಡಿಕೆ 354 ಕೋಟಿ ಲೀಟರ್‌ಗಳಷ್ಟಾಗಲಿದೆ ಎಂಬುದು ಅಂದಾಜು. ಈ ಬೇಡಿಕೆ ಈಡೇರಿಸಲು ಸರ್ಕಾರ ಲಿಂಗನಮಕ್ಕಿಯಿಂದ ಮೊದಲ ಹಂತದಲ್ಲಿ 10 ಟಿಎಂಸಿ ಅಡಿಗಳಷ್ಟು ನೀರನ್ನು ತರಲು ಹೊರಟಿದೆ.

‘ಇಲ್ಲಿರುವ ಜಲ ಸಂಪನ್ಮೂಲಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳುವ ಇಚ್ಛಾಶಕ್ತಿ ಪ್ರದರ್ಶಿಸಿದರೆ ಇದರ ಅಗತ್ಯವೇ ಬೀಳುವುದಿಲ್ಲ. ಲಿಂಗನಮಕ್ಕಿಯಿಂದ ನೀರು ತರಲು ಸಾವಿರಾರು ಕೋಟಿ ಸುರಿಯುವ ಬದಲು ಇಲ್ಲಿನ ಕೆರೆಗಳ ಹಾಗೂ ರಾಜಕಾಲುವೆಗಳ ಪುನರುಜ್ಜೀವನಕ್ಕೆ ಆ ಹಣವನ್ನು ಬಳಸಿದರೆ ಕುಡಿಯುವ ನೀರಿಗಾಗಿ ಇನ್ನೊಬ್ಬರ ನೀರಿನ ಬಟ್ಟಲಿಗೆ ಕೈ ಹಾಕುವ ಪ್ರಮೇಯ ತಪ್ಪುತ್ತದೆ ಅಲ್ಲವೇ’ ಎನ್ನುತ್ತಾರೆ ರಾಮಚಂದ್ರ.

ನಾಲ್ಕೈದು ದಶಕಗಳ ಹಿಂದಿನವರೆಗೂ ರಾಜಧಾನಿಯ ನೀರಿನ ಅಗತ್ಯವನ್ನು ಪೂರೈಸುತ್ತಿದ್ದುದು ಇಲ್ಲಿನ ಕೆರೆಗಳು ಹಾಗೂ ಬಾವಿಗಳು. ಯಾವಾಗ 1974ರಲ್ಲಿ ನಗರಕ್ಕೆ ಕಾವೇರಿ ನೀರಿನ ಪೂರೈಕೆ ಆರಂಭವಾಯಿತೋ ಆ ಬಳಿಕ ಕೆರೆ ಕಾಲುವೆಗಳೆಲ್ಲ ಮಹತ್ವ ಕಳೆದುಕೊಂಡವು. ಒತ್ತುವರಿ ವ್ಯಾಪಕವಾಯಿತು. ನಗರಕ್ಕೆ ನೀರುಣಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ಹಾಗೂ ಹೆಸರಘಟ್ಟ ಕೆರೆಗಳ ನೀರೂ ಕುಡಿಯಲು ಯೋಗ್ಯವಿಲ್ಲದಂತಾಯಿತು.

‘ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ನಗರದಲ್ಲಿ 937 ಕೆರೆಗಳಿವೆ. ಅವುಗಳಲ್ಲಿ ಈಗಲೂ 210 ಕೆರೆಗಳು ಜೀವಂತವಾಗಿವೆ. ಸರ್ಕಾರವೂ ಕೆರೆಗಳ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಒದಗಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆ ಅಭಿವೃದ್ಧಿಪಡಿಸಿದರೂ ಅವುಗಳಿಗೆ ಕೊಳಚೆ ನೀರು ಸೇರದಂತೆ ತಡೆಯುವಲ್ಲಿ ವಿಫಲವಾಗುತ್ತಿದೆ. ಮಳೆ ನೀರನ್ನು ಮಾತ್ರ ಸಾಗಿಸಬೇಕಾದ ರಾಜಕಾಲುವೆಗಳಲ್ಲಿ ಹರಿಯುವುದು ಒಳಚರಂಡಿ ಸೇರಬೇಕಾದ ಕಲ್ಮಶ ನೀರು. ನಗರದ ಅಷ್ಟು ಕೆರೆಗಳು ಮಲಗುಂಡಿಗಳಾಗಿ ಪರಿವರ್ತನೆಯಾಗಿವೆ’ ಎಂದು ದೂರುತ್ತಾರೆ ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌.

‘ಈ ನಗರವನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು ಅಲ್ಲಲ್ಲಿ ಕೆರೆಗಳನ್ನು ನಿರ್ಮಿಸಿದ್ದರು. ಒಂದು ಕೆರೆ ಭರ್ತಿಯಾಗಿ ಕೋಡಿ ಹರಿದ ಬಳಿ ಅದರ ನೀರು, ಇನ್ನೊಂದು ಕೆರೆ ಸೇರುವಂತೆ ರಾಜಕಾಲುವೆ ಜಾಲವನ್ನೂ ನಿರ್ಮಿಸಿದ್ದರು. 850 ಕಿ.ಮೀ ಉದ್ದದ ರಾಜಕಾಲುವೆ ಜಾಲವನ್ನು ಮತ್ತೆ ಸಹಜ ಸ್ಥಿತಿಗೆ ತರಬೇಕು. ಕೆರೆ– ಕಾಲುವೆಗಳಿಗೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣ ತಡೆಯಬೇಕು. ಅದನ್ನು ಮಾಡುವುದನ್ನು ಬಿಟ್ಟು ಸರ್ಕಾರ ಕಾರ್ಯಸಾಧುವಲ್ಲದ ಯೋಜನೆಗಳ ಮೊರೆ ಹೋಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತೆಲುಗುಗಂಗಾ ಏನಾಯಿತು?
ಚೆನ್ನೈ ನಗರದ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ತೆಲುಗುಗಂಗಾ ಯೋಜನೆ ರೂಪಿಸಲಾಯಿತು. 406 ಕಿ.ಮೀ ದೂರದ ಶ್ರೀಶೈಲಂ ಜಲಾಶಯದಿಂದ ನೀರು ಪೂರೈಸುವ ಈ ಯೋಜನೆಯಿಂದ ಚೆನ್ನೈಗೆ ಪ್ರತಿವರ್ಷ 15 ಟಿಎಂಸಿ ಅಡಿ ನೀರು ಒದಗಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದುವರೆಗೆ ಯಾವ ವರ್ಷವೂ 3 ಟಿಎಂಸಿ ಅಡಿಗಳಿಗಿಂತ ಹೆಚ್ಚು ನೀರು ಪೂರೈಸಲು ಸಾಧ್ಯವಾಗಿಲ್ಲ. ಈಗ ಚೆನ್ನೈನಲ್ಲಿ ಕುಡಿಯುವ ನೀರಿನ ಹಾಹಾಕಾರ ಎದ್ದಿದೆ ಎನ್ನುತ್ತಾರೆ ಟಿ.ವಿ ರಾಮಚಂದ್ರ.

‘ನಾವು ಸ್ಥಳೀಯ ಜಲಸಂಪನ್ಮೂಲಗಳನ್ನು ಜತನವಾಗಿ ಕಾಪಾಡಿಕೊಂಡು ಅವುಗಳನ್ನೇ ಬಳಸುವುದು ಒಳ್ಳೆಯದು. ನೂರಾರು ಕಿ.ಮೀ ದೂರದಿಂದ ನೀರು ಪೂರೈಸುವ ಯೊಜನೆಗಳು ದುಡ್ಡು ಮಾಡುವುದಕ್ಕೆ ವಿನಃ ಅವುಗಳಿಂದ ನೀರಿನ ಬೇಡಿಕೆ ಈಡೇರದು. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರುವುದೂ ಇಂತಹದ್ದೇ ಯೋಜನೆ’ ಎಂದರು.

ನೀರಿನ ಸಮಸ್ಯೆಗೆ ಮೂರು ಸೂತ್ರಗಳು

ಕೆರೆ ಪುನರುಜ್ಜೀವನಗೊಳಿಸು, ನೀರು ಉಳಿಸು, ಮರುಬಳಕೆ ಮಾಡು ಎಂಬುದು ನಗರದ ನೀರಿನ ಸಮಸ್ಯೆ ಬಗೆಹರಿಸಲು ಇರುವ ಮೂರು ಸೂತ್ರಗಳು.

‘ನಗರದ ಕೆರೆಗಳನ್ನು ಪುನರುಜ್ಜೀವನಗೊಳಿಸಿ, ಅವುಗಳಲ್ಲಿ ತ್ಯಾಜ್ಯನೀರಿನ ಬದಲು ಮಳೆ ನೀರು ಮಾತ್ರ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಗೃಹ ಬಳಕೆಗೆ ಅದೇ ನೀರನ್ನು ಪೂರೈಸಬೇಕು. ಮನೆಗಳಲ್ಲಿ ಸೃಷ್ಟಿಯಾಗುವ ತ್ಯಾಜ್ಯ ನೀರನ್ನು ಆಯಾ ಪ್ರದೇಶದಲ್ಲೇ ಶುದ್ಧೀಕರಿಸಿ ಮರುಬಳಕೆ ಮಾಡಬೇಕು. ಜತೆಗೆ ಈಗಿನ ನೀರು ಪೂರೈಕೆ ವ್ಯವಸ್ಥೆಯ ಸೋರಿಕೆ ತಪ್ಪಿಸಬೇಕು. ಹೀಗೆ ಮಾಡುವುದರಿಂದ ನಗರವು ಮತ್ತೆ ಜಲಸ್ವಾವಲಂಬನೆ ಸಾಧಿಸಬಹುದು’ ಎಂದು ಸಲಹೆ ನೀಡುತ್ತಾರೆ ಟಿ.ವಿ.ರಾಮಚಂದ್ರ.

ಕಲುಷಿತಗೊಂಡಿದ್ದ ಜಕ್ಕೂರು ಕೆರೆಯನ್ನು ವೈಜ್ಞಾನಿಕ ರೀತಿಯಲ್ಲಿ ಪುನರುಜ್ಜೀವನಗೊಳಿಸಿದ ಉದಾಹರಣೆ ನಮ್ಮ ಮುಂದೆಯೇ ಇದೆ. ದ್ವಿತೀಯ ಹಂತದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸಿ, ಅದಕ್ಕೆ ಪೂರಕವಾಗಿ ಜೌಗು ಪ್ರದೇಶ ಮತ್ತು ಆಲ್ಗೆ ಕೊಳಗಳನ್ನು ರೂಪಿಸುವ ಮೂಲಕ ನೀರನ್ನು ಶುದ್ಧೀಕರಿಸುವ ವಿಧಾನವನ್ನು ಇಲ್ಲಿ ಅಳವಡಿಸಲಾಗಿದೆ. ವಿಕೇಂದ್ರೀಕೃತ ನೀರು ಸಂಸ್ಕರಣಾ ವ್ಯವಸ್ಥೆಯ ಮೂಲಕ ದ್ರವ ತ್ಯಾಜ್ಯದಲ್ಲಿರುವ ಪೋಷಕಾಂಶಗಳನ್ನು ಹಾಗೂ ರಾಸಾಯನಿಕ ಮಲಿನಕಾರಕಗಳನ್ನು ಸಂಪೂರ್ಣ ಹೊರತೆಗೆಯಬಹುದು ಎಂದು ಅವರು ವಿವರಿಸಿದರು.  ಮನೆಗಳಿಗೆ ಶುದ್ಧೀಕರಿಸಿದ ನೀರು ಮರು ಬಳಕೆಗೆ (ಕುಡಿಯಲು ಹೊರತುಪಡಿಸಿ) ಪ್ರತ್ಯೇಕ ಕೊಳವೆ ಮಾರ್ಗ ಅಳವಡಿಸಬೇಕು.

35 ಟಿಎಂಸಿ ಅಡಿಯಿಂದ 1.2 ಟಿಎಂಸಿ ಅಡಿಗೆ

ನಗರದ ಕೆರೆಗಳಲ್ಲಿ ನೀರು ಸಂಗ್ರಹದ ಒಟ್ಟು ಸಾಮರ್ಥ್ಯ 1800ರಲ್ಲಿ 35 ಟಿಎಂಸಿ ಅಡಿಗಳಷ್ಟಿತ್ತು. 1970ರ ದಶಕದಲ್ಲಿ ನಗರದಲ್ಲಿ ಕೆರೆಗಳ ಪ್ರದೇಶ 3,180 ಹೆಕ್ಟೇರ್‌ಗಳಷ್ಟಿತ್ತು. ಅದೀಗ 2,792 ಹೆಕ್ಟೇರ್‌ಗಳಿಗೆ ಇಳಿದಿದೆ. ಈಗಿನ ಕೆರೆಗಳ ವಿಸ್ತೀರ್ಣದ ಆಧಾರದಲ್ಲಿ ನೋಡುವುದಾದರೆ ಅವುಗಳಲ್ಲಿ 5 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಿಸಬಹುದು ಅಷ್ಟೇ. ಆದರೆ, ಅವುಗಳಲ್ಲಿ ಹೂಳು ತುಂಬಿರುವುದರಿಂದ ವಾಸ್ತವದಲ್ಲಿ 1.2 ಟಿಎಂಸಿ ಅಡಿಗಳಷ್ಟು ಮಾತ್ರ (387 ಹೆಕ್ಟೇರ್‌) ನೀರು ಸಂಗ್ರಹಿಸಬಹುದು. ಈ ಕೆರೆಗಳ ಹೂಳೆತ್ತಿ, ಪುನರುಜ್ಜೀವನಗೊಳಿಸಿದರೆ, ಅವುಗಳ ಸಂಗ್ರಹ ಸಾಮರ್ಥ್ಯವೂ ಹೆಚ್ಚಲಿದೆ.

ಹಳ್ಳ ಹಿಡಿದ ಪ್ರಸ್ತಾಪ

ಬೆಂಗಳೂರಿನ ಕೆರೆಗಳು ಹಾಗೂ ರಾಜ
ಕಾಲುವೆಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು 2012ರ ಜೂನ್‌ ಒಳಗೆ ಸಿದ್ಧಪಡಿಸುವಂತೆ ನಗರಾಭಿವೃದ್ಧಿ ಇಲಾಖೆಯು ಜಲಮಂಡಳಿಗೆ 2010ರಲ್ಲೇ ಸೂಚಿಸಿತ್ತು. ಈ ಯೋಜನೆಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಥವಾ ವಿಶ್ವ ಬ್ಯಾಂಕ್‌ನ ಆರ್ಥಿಕ ನೆರವು ಪಡೆಯಲು ಉದ್ದೇಶಿಸಲಾಗಿತ್ತು. ಇದರ ಡಿಪಿಆರ್‌ ಸಿದ್ಧಪಡಿಸಲು ಅಂತರರಾಷ್ಟ್ರೀಯ ಟೆಂಡರ್‌ ಕರೆಯಬೇಕಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯೇ ಇದರ ನೇರ ಉಸ್ತುವಾರಿ ವಹಿಸುತ್ತದೆ. ಇಲ್ಲಿ ಜಲಮಂಡಳಿಯ ಪಾತ್ರ ಏನೂ ಇರುವುದಿಲ್ಲ. ಕಾಮಗಾರಿ ಅನುಷ್ಠಾನದಲ್ಲೂ ಬಿಗಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ಜಲಮಂಡಳಿ ಈ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಅದರ ಬದಲು ಲಿಂಗನಮಕ್ಕಿಯಿಂದ ನೀರು ತರುವ ಕಾರ್ಯಸಾಧುವಲ್ಲದ ಯೋಜನೆಯನ್ನು ಮುಂದಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವಿ.ಬಾಲಸುಬ್ರಮಣಿಯನ್‌.

ವಿದ್ಯುತ್‌ ಪೋಲು, ಮಳೆ ಚಕ್ರಕ್ಕೂ ಧಕ್ಕೆ

ಲಿಂಗನಮಕ್ಕಿ ಜಲಾಶಯದಿಂದ ವಿದ್ಯುತ್‌ ಉತ್ಪಾದನೆಗೆ ಬಳಸುವ ನೀರನ್ನು ಮತ್ತೆ ಮೇಲಕ್ಕೆ ಪಂಪ್‌ ಮಾಡಲು ಭಾರಿ ಪ್ರಮಾಣದಲ್ಲಿ ವಿದ್ಯುತ್‌ ಬೇಕಾಗುತ್ತದೆ. ನಂತರವೂ ಎಲ್ಲ ಕಡೆಯೂ ಗುರುತ್ವಶಕ್ತಿಯನ್ನು ಆಧರಿಸಿ ನೀರನ್ನು ಕೊಳವೆ ಮಾರ್ಗದ ಮೂಲಕ ಹರಿಸಲು ಬರುವುದಿಲ್ಲ. ನೀರು ಸಾಗಿಸಲು ಅಲ್ಲಲ್ಲಿ ಮತ್ತೆ ಪಂಪಿಂಗ್‌ ಸ್ಟೇಷನ್‌ಗಳನ್ನು ನಿರ್ಮಿಸಬೇಕಾಗುತ್ತದೆ. ಇದಕ್ಕೂ ಭಾರಿ ವಿದ್ಯುತ್‌ ಬೇಕು.

ಪಂಪ್‌ ಮಾಡಬೇಕಾದ ಕಡೆ ನೀರನ್ನು ಸಂಗ್ರಹಿಸಿಡಲು ಸಣ್ಣ ಪ್ರಮಾಣದ ಜಲಾಶಯಗಳನ್ನು ನಿರ್ಮಿಸಬೇಕಾಗುತ್ತದೆ. ಇವುಗಳಿಗೆ ಹಾಗೂ ಕೊಳವೆ ಮಾರ್ಗ ಅಳವಡಿಸಿಡುವುದಕ್ಕೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಪಶ್ಚಿಮಘಟ್ಟದಂತಹ ಸೂಕ್ಷ ಪರಿಸರದಲ್ಲಿ ಭಾರಿ ಪ್ರಮಾಣದಲ್ಲಿ ಮರಗಳನ್ನು ಕಡಿದರೆ ಹವಾಮಾನ ವೈಪರೀತ್ಯ ಮತ್ತಷ್ಟು ಹೆಚ್ಚಲಿದೆ. ಮಳೆಯ ಅನಿಶ್ಚಿತತೆಗೂ ಇದು ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ತಜ್ಞರು.

ಬರಹ ಇಷ್ಟವಾಯಿತೆ?

 • 27

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !