ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಡುವೆಯೂ ‘ವರ್ಷ ತೊಡಕು’ ಜೋರು

ಮಾಂಸದ ಅಂಗಡಿಗಳ ಮುಂದೆ ಕಿ.ಮೀ. ದೂರದವರೆಗೆ ಜನರ ಸಾಲು
Last Updated 14 ಏಪ್ರಿಲ್ 2021, 21:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಯುಗಾದಿಯ ದಿನವಾದ ಮಂಗಳವಾರ ಬೇವು–ಬೆಲ್ಲ ಸವಿದು, ಸಿಹಿ ಊಟ ಸವಿದ ಜನ, ಬುಧವಾರ ವರ್ಷದ ತೊಡಕು ನಿಮಿತ್ತ ಮಾಂಸಾಹಾರ ಸೇವಿಸಿ ಹಬ್ಬ ಮಾಡಿದರು.

ಯುಗಾದಿ ಹಬ್ಬದ ಮರು ದಿನವನ್ನು ವರ್ಷ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನ ಎಂದೂ ಪರಿಗಣಿಸಲಾಗುತ್ತದೆ. ವರ್ಷಪೂರ್ತಿಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ ಇರುತ್ತದೆ.

ಬೆಳಿಗ್ಗೆಯಿಂದಲೇ ಸಾಲು:ಬೆಳಿಗ್ಗೆಯಿಂದಲೇ ಮಟನ್‌ ಅಂಗಡಿಗಳ ಮುಂದೆ ನೂರಾರು ಗ್ರಾಹಕರು ಸಾಲುಗಟ್ಟಿ ನಿಂತಿದ್ದರು. ನಗರದ ಮೈಸೂರು ರಸ್ತೆಯ ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆಯಂತೂ ಕಿ.ಮೀ. ದೂರದಿಂದ ಜನ ಸರದಿಯಲ್ಲಿ ನಿಂತಿದ್ದು ಮಾಂಸ ಖರೀದಿಸಿದರು.

ಕೋವಿಡ್‌ ಮಾರ್ಗಸೂಚಿಯನ್ವಯ ಅಂತರ ಕಾಪಾಡಿಕೊಳ್ಳಲಾಗಿತ್ತು. ನಿಗದಿತ ದೂರದಲ್ಲಿ ಚೌಕಗಳನ್ನು ಕೊರೆದು ಅವುಗಳನ್ನು ಹಾಯ್ದು ಸರದಿಯಲ್ಲಿ ಬರಲು ಸೂಚಿಸಲಾಗಿತ್ತಲ್ಲದೆ, ಗ್ರಾಹಕರ ದೇಹದ ಉಷ್ಣಾಂಶ ಪರೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ಸ್ಯಾನಿಟೈಸರ್‌ಗಳನ್ನು ಇಡಲಾಗಿತ್ತು.

ಮೀನು ಮತ್ತು ಚಿಕನ್‌ ಮಾರಾಟದ ಅಂಗಡಿಗಳ ಮುಂದೆಯೂ ಜನ ಕಡಿಮೆ ಇರಲಿಲ್ಲ. ಸಣ್ಣ ಅಂಗಡಿಗಳ ಮುಂದೆ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳ ಪಾಲನೆ ಅಷ್ಟಾಗಿರಲಿಲ್ಲ.

ಕೆಜಿ ಮಟನ್‌ ₹500ರಿಂದ ₹600ರಂತೆ ಮಾರಾಟವಾದರೆ, ಕೆಜಿ ಚಿಕನ್‌ ₹250ರಿಂದ ₹280ರಂತೆ ಮಾರಾಟವಾಯಿತು. ತಳಿ ಮತ್ತು ಬಗೆಯ ಆಧಾರದ ಮೇಲೆ ಮೀನುಗಳ ದರ ನಿಗದಿ ಮಾಡಲಾಗಿತ್ತು.

ಹಬ್ಬದೂಟ:ವರ್ಷ ತೊಡಕು ಅಂಗವಾಗಿ ಬಹುತೇಕರ ಮನೆಯಲ್ಲಿ ಮಾಂಸದೂಟ ಜೋರಾಗಿತ್ತು. ಮಟನ್ ಕೈಮಾ, ಕರ್ರಿ, ಕಬಾಬ್, ಬಿರಿಯಾನಿ ಮಾಡಿ ಮನೆ ಮಂದಿ ಕೂತು ಹಬ್ಬದೂಟ ಮಾಡಿದರು.

ಹಬ್ಬದ ದಿನ ಹೋಳಿಗೆ ಊಟ ಮಾಡಿದ್ದವರು, ಬುಧವಾರ ಮಾಂಸಾಹಾರಕ್ಕೆ ಸೀಮಿತಗೊಳಿಸಿದ್ದರು. ಮಾಂಸಾಹಾರಿಗಳಲ್ಲದವರು ಸಿಹಿ ಅಡುಗೆ ಮಾಡಿ, ಹಬ್ಬ ಆಚರಿಸಿದರು.

ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ಹಬ್ಬದ ಸಂಭ್ರಮಕ್ಕೆ ಕೊನೆ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT