ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು– ಬದುಕಿನ ಹೋರಾಟದಲ್ಲಿ ಮಗು

ಅತಿಯಾದ ಅರಿವಳಿಕೆ: ಪೋಷಕರ ಆರೋಪ
Last Updated 24 ಡಿಸೆಂಬರ್ 2013, 20:00 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯರು ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅರಿವಳಿಕೆ ಮದ್ದು ನೀಡಿದ್ದರಿಂದಲೇ ಬಾಲಕಿಯ ಮಿದುಳಿಗೆ ಹಾನಿ-­ಯಾ­ಗಿದ್ದು, ಸಾವು– ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ಪೋಷಕರು ದೂರಿದ್ದಾರೆ. ಮೂರು ವರ್ಷದ ಬಾಲಕಿ ಮರಿಯಮ್ಮ ಕೌಸರ್ ನಗರದ ಸಂಜಯ ಗಾಂಧಿ ತುರ್ತು ನಿಗಾ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಮೊಣ­ಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.

ಹೆಚ್ಚಿನ ಪ್ರಮಾಣದಲ್ಲಿ ಅರಿವಳಿಕೆ ಮದ್ದು ನೀಡಿದ್ದರಿಂದ, ಆಕೆಯ ಮಿದುಳಿಗೆ  ಹಾನಿಯಾಗಿದೆ. ಸದ್ಯ  ಜಯನಗರದ ಮಾಲತಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕೌಸರ್‌ ಸಂಬಂಧಿ ರೇಷ್ಮಾ, ‘ಶುಕ್ರವಾರ ಸಂಜೆ ಕೌಸರ್‌ಳನ್ನು ಸಂಜಯ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸೋಮವಾರದವರೆಗೂ ಮಗುವಿಗೆ ಯಾವುದೇ ರೀತಿಯ ಚಿಕಿತ್ಸೆ ದೊರೆ­ಯಲಿಲ್ಲ.  ವೈದ್ಯರಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆಯೇ ಗೊಂದಲವಿತ್ತು. ನಂತರ ಸೋಮವಾರ ಬೆಳಿಗ್ಗೆ ಚಿಕಿತ್ಸೆ ನೀಡಿದರು’ ಎಂದು ತಿಳಿಸಿದರು.

‘ಚಿಕಿತ್ಸೆ ಪಡೆದುಕೊಂಡಾಗಿನಿಂದ ಮಗು ಪ್ರಜ್ಞಾಶೂನ್ಯ ಸ್ಥಿತಿಯಲ್ಲಿಯೇ ಇದೆ. ಅರಿವಳಿಕೆ ಮದ್ದಿನಿಂದಾಗಿಯೇ ಸಮಸ್ಯೆ ಉಂಟಾಗಿದೆ. ವೈದ್ಯಕೀಯ ವರದಿಗಳನ್ನು ಸಮರ್ಪಕವಾಗಿ ಒದಗಿಸುವಂತೆ ವೈದ್ಯರಲ್ಲಿ ಮನವಿ ಮಾಡಲಾಗಿದೆ’ ಎಂದು ಹೇಳಿದರು. ಸಂಜಯ ಗಾಂಧಿ ಆಸ್ಪತ್ರೆಯ ಹಿರಿಯ ವೈದ್ಯರು ಪೋಷಕರು ಮಾಡಿರುವ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಜಿ.ತಿಲಕ್, ‘ಮೊಣಕಾಲಿನ ಸಮಸ್ಯೆಯಿಂದಾಗಿ ಬಳಲುತ್ತಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಇಲ್ಲವಾದರೆ ಆಕೆ ನಡೆಯುವ ಸಾಮರ್ಥ್ಯವನ್ನೇ ಕಳೆದುಕೊಳ್ಳುವ ಸಾಧ್ಯತೆ­ಯಿತ್ತು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅರಿವಳಿಕೆ ಮದ್ದು ನೀಡಲಾಗಿತ್ತು. ಆದರೆ ಇದರಲ್ಲಿ ಯಾವುದೇ ಲೋಪವಾಗಿಲ್ಲ’ ಎಂದು ಸಮರ್ಥಿಸಿಕೊಂಡರು. ‘ಮಗುವಿಗೆ ಉಸಿರಾಟದ ತೊಂದರೆಯಿದ್ದಿದ್ದರಿಂದ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು’ ಎಂದು ಮಾಹಿತಿ ನೀಡಿದರು.

ಮಣಿಪಾಲ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಎಸ್.­ಸುದರ್ಶನ ಬಲ್ಲಾಳ, ‘ಆಮ್ಲಜನಕ ಪೂರೈಕೆಯು ಕಡಿಮೆ­ಯಾಗಿದ್ದರಿಂದ ಮಿದುಳು ಹಾನಿಗೆ ಒಳಗಾಗುತ್ತದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ವರದಿ ನಂತರ ಕ್ರಮ
‘ಈ ಪ್ರಕರಣವು ನನ್ನ ಗಮನಕ್ಕೆ ಬಂದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ ತನಿಖೆ ನಡೆಯಲಿದೆ. 10 ದಿನದ ಒಳಗಾಗಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ವೈದ್ಯರ ನಿರ್ಲಕ್ಷ್ಯ ಸಾಬೀತಾದರೆ ಕ್ರಮ ತೆಗೆದು­ಕೊಳ್ಳಲಾಗುವುದು’
–ಯು.ಟಿ.ಖಾದರ್, ಆರೋಗ್ಯ ಸಚಿವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT