ಸೋಮವಾರ, ಮಾರ್ಚ್ 1, 2021
31 °C
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಹೇಳಿಕೆ

252 ಅರ್ಜಿ ಸಲ್ಲಿಕೆ, 118 ಸ್ಥಳದಲ್ಲೇ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಗಮ (ಬೀದರ್‌): ‘ಸಂಗಮ ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳ ಗ್ರಾಮಸ್ಥರಿಂದ 252 ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ ವಿಧವಾ, ವೃದ್ಧಾಪ್ಯ ಹಾಗೂ ಅಂಗವಿಕಲರ ಮಾಸಾಶನ ಕೋರಿ ಸಲ್ಲಿಕೆಯಾಗಿದ್ದ 118 ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ತಿಳಿಸಿದರು.

ಕಮಲನಗರ ತಾಲ್ಲೂಕಿನ ಸಂಗಮದಲ್ಲಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸ್ಮಶಾನಕ್ಕೆ ಜಾಗ ಮಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ದಾನಿಗಳು ಜಾಗ ಕೊಡಲು ಮುಂದೆ ಬಂದರೆ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ನೀಡಲಾಗುವುದು’ ಎಂದು ಹೇಳಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ 52 ಮನೆಗಳ ಜಿಪಿಎಸ್‌ ಆಗಿಲ್ಲ. ತಕ್ಷಣ ಸಮೀಕ್ಷೆ ನಡೆಸಿ ಫಲಾನುಭವಿಗಳಿಗೆ ಬಾಕಿ ಉಳಿದಿರುವ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಸ್ಥಳದಲ್ಲೇ ಆಧಾರ್‌ ಹಾಗೂ ಮತದಾರರ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಮೀನು ಹಕ್ಕುಪತ್ರ ಕೊಟ್ಟಿಲ್ಲ. ದಾಖಲೆಗಳಲ್ಲಿ ಇನ್ನೂ ಹುಲ್ಲುಗಾವಲು ಪ್ರದೇಶ ಎಂದೇ ಇದೆ. ಜಿಲ್ಲೆಯಲ್ಲಿ ಒಟ್ಟು 53 ಶಾಲೆಗಳಿಗೆ ಜಮೀನು ಹಕ್ಕುಪತ್ರ ಕೊಟ್ಟಿಲ್ಲ. ಜಮೀನುಗಳನ್ನು ಶಾಲೆಗಳ ಹೆಸರಲ್ಲಿ ನೋಂದಣಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಕಮಲನಗರ ತಾಲ್ಲೂಕಿನ ಬಾಳೂರ(ಕೆ) ಹಾಗೂ ಸಂಗನಾಳದಲ್ಲಿ ನ್ಯಾಯಬೆಲೆ ಅಂಗಡಿಗಳು ಇಲ್ಲ. ಅಲ್ಲಿ ಕ್ಲಸ್ಟರ್‌ಗಳನ್ನಾಗಿ ಮಾಡಿ ಆಯಾ ಗ್ರಾಮದಲ್ಲೇ ಪಡಿತರ ಧಾನ್ಯ ವಿತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

‘ಮಾಂಜ್ರಾ ನದಿಗೆ ಬ್ಯಾರೇಜ್‌ ನಿರ್ಮಿಸಿರುವ ಕಾರಣ 12 ಕಿ.ಮೀ ಸುತ್ತಾಡಿ ಹೊಲಗಳಿಗೆ ಹೋಗಬೇಕಾಗಿದೆ. ಕೆಲ ಹೊಲಗಳಲ್ಲೇ ನೀರು ನಿಲ್ಲುತ್ತಿದೆ. ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಚಿಕ್ಕದಾದ ಸೇತುವೆ ನಿರ್ಮಿಸಿ ಅನುಕೂಲ ಮಾಡಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸರ್ಕಾರಕ್ಕೆ ಪ್ರಸ್ತಾವ ಕಳಿಸಿ ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳ ಲಾಗುವುದು’ ಎಂದು ತಿಳಿಸಿದರು.

‘ಮೂರು ಗ್ರಾಮಗಳ ಮೂರು ಹೆಣ್ಣು ಮಕ್ಕಳು ಮಾತ್ರಮ 8ನೇ ತರಗತಿಗೆ ಹೋಗುತ್ತಿದ್ದಾರೆ. ಕೋವಿಡ್ ಅವಧಿಯಲ್ಲಿ ಶಾಲೆಯಿಂದ ದೂರ ಉಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇಂದಿನಿಂದ ವಿದ್ಯಾರ್ಥಿಗಳು ಶಾಲೆಗೆ ಬರಬೇಕು. ಮರಳಿ ಬಾ ಶಾಲೆಗೆ ಯೋಜನೆ ಅಡಿ ಮಕ್ಕಳನ್ನು ಕರೆ ತರಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಹೀರಾ ನಸೀಮ್‌ ಮಾತನಾಡಿ, ‘ಪಾಲಕರು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳಿಸಬೇಕು. ಮಕ್ಕಳು ಚೆನ್ನಾಗಿ ಓದಿದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಿದೆ. ಚಿಕ್ಕ ಮಕ್ಕಳಿಗೆ ಇಂಧ್ರಧನುಷ್ಯ ಹಾಕಿಸಬೇಕು’ ಎಂದು ಪಾಲಕರಿಗೆ ಮನವಿ ಮಾಡಿದರು.

‘ಬಹಳಷ್ಟು ಮಕ್ಕಳು ಪೌಷ್ಟಿಕಾಂಶ ದಿಂದ ಬಳಲುತ್ತಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರಕೊಡಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ‘21 ವರ್ಷ ಪೂರ್ಣಗೊಳಿಸಿದ ನಂತರ ಮದುವೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿ ನಿಯರು ಶಪತ ಮಾಡಿದ್ದಾರೆ. ಕನಿಷ್ಠ ಪದವಿ ಪೂರ್ಣಗೊಳಿಸಬೇಕು. ನಾನು ಬಹಳ ಚಿಕ್ಕ ಹಳ್ಳಿಯಿಂದ ಬಂದವಳು ಚೆನ್ನಾಗಿ ಓದಿದ ಕಾರಣ ಐಎಎಸ್ ಅಧಿಕಾರಿಯಾಗಲು ಸಾಧ್ಯವಾಗಿದೆ’ ಎಂದು ಮಾಹಿತಿ ನೀಡಿದರು.

‘21 ವರ್ಷ ತುಂಬಿದ ಮೇಲೆ ಮದುವೆಯಾದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿದೆ. ಹೆಣ್ಣುಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ನೀಡಬೇಕು. ಅಂಧ ವಿಶ್ವಾಸದಿಂದ ಹೊರಗೆ ಬರಬೇಕು. ಪವಿತ್ರ, ಅಪವಿತ್ರ ಅನ್ನುವ ಗೊಂದಲದಿಂದ ಹೊರಗೆ ಬರಬೇಕು’ ಮಹಿಳೆಯರಿಗೆ ಅವರು ಸಲಹೆ ನೀಡಿದರು.

ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿಗಳಾದ ವೆಂಕಟಲಕ್ಷ್ಮಿ, ಅಶ್ವಿನ್, ತಹಶೀಲ್ದಾರ್ ರಮೇಶ ಕುಮಾರ ಪೆದ್ದೆ, ಸಂಗಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಾಲಿಕಾ ರವೀಂದ್ರ, ಕಮಲನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಿರಿಶ್ ಒಡೆಯರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನಿಲ ಸಂಗಣ್ಣ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್ ಇದ್ದರು.

ಸಾಲನೇ ಕೊಟ್ಟಿಲ್ಲ, ಬಡ್ಡಿಗೆ ಬೆನ್ನು ಬಿದ್ದಿದ್ದಾರೆ!

ಡಿಸಿಸಿ ಬ್ಯಾಂಕಿನವರು ನನಗೆ ಸಾಲನೇ ಕೊಟ್ಟಿಲ್ಲ. ಪ್ರತಿ ತಿಂಗಳು ₹ 5 ಸಾವಿರ ಬಡ್ಡಿ ಪಾವತಿಸುವಂತೆ ಬ್ಯಾಂಕಿನಿಂದ ನೋಟಿಸ್‌ಗಳು ಬರುತ್ತಿವೆ. ಇದಕ್ಕೆ ಪರಿಹಾರ ಒದಗಿಸಿ ಎಂದು ಗ್ರಾಮದ ರೈತ ವಿಠ್ಠಲರಾವ್ ಮುಸ್ತಾಪುರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ರೈತನ ಮಾತು ಕೇಳಿ ಅವಕ್ಕಾದ ಜಿಲ್ಲಾಧಿಕಾರಿ, ‘ಸಾಲ ಪಡೆಯದಿದ್ದರೆ ಬಡ್ಡಿ ವಸೂಲಿ ಹೇಗೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರಲ್ಲದೆ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಅವರನ್ನು ಸ್ಥಳಕ್ಕೆ ಕರೆಸಿ ‘ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿ ಪರಿಹಾರ ಕಲ್ಪಿಸಬೇಕು’ ಎಂದು ಸೂಚಿಸಿದರು.

ಜನರ ಮಧ್ಯೆ ಬಂದು ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಸಂಗಮ ಗ್ರಾಮದಲ್ಲಿ ನಡೆಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮೊದಲಿಗೆ ಅಂಗವಿಕಲರು ಹಾಗೂ ವಯೋವೃದ್ಧರ ಅಹವಾಲುಗಳನ್ನು ಆಲಿಸಿದರು.

ವೀಲ್ ಚೇರ್ ಮೂಲಕ ವೇದಿಕೆಯ ಬಳಿ ಬಂದಿದ್ದ ಅಂಗವಿಕಲರೊಬ್ಬರ ಅಹವಾಲು ಆಲಿಸಲು ಜಿಲ್ಲಾಧಿಕಾರಿ ವೇದಿಕೆಯಿಂದ ಅವರ ಬಳಿ ಬಂದರು.

‘ಅಂಗವಿಕಲನಾದ ನನಗೆ ಮನೆ ಮಂಜೂರು ಮಾಡಬೇಕು ಹಾಗೂ ಬಿಪಿಎಲ್‌ ಕಾರ್ಡ್ ಕೊಡಬೇಕು’ ಎಂದು ಖೇಡ ಗ್ರಾಮದ ಬಾಬುರಾವ್ ಕಾಲೇಕರ ಮನವಿ ಮಾಡಿದರು. ಜಿಲ್ಲಾಧಿಕಾರಿ ತಕ್ಷಣ ಅವರಿಗೆ ಅಂಗವಿಕಲರ ಗುರುತಿನ ಚೀಟಿ ಹಾಗೂ ಬಿಪಿಎಲ್‌ ಕಾರ್ಡ್‌ ಕೊಡುವಂತೆ ಸೂಚನೆ ನೀಡಿದರು.

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 42,666 ಅಂಗವಿಕಲರಿದ್ದಾರೆ. ಈವರೆಗೆ 33 ಸಾವಿರ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ವಿಕಲಚೇತನ ಅಧಿಕಾರಿಗಳು ಮಾಹಿತಿ ನೀಡಿದರು.

ಕಣ್ಣೀರು ಹಾಕಿದ ಮಹಿಳೆ: ‘ನನಗೆ ಮಾಸಾಶನ ನೀಡಬೇಕು’ ಎಂದು ಬಳತ(ಬಿ) ಗ್ರಾಮದ ವಯೋವೃದ್ದೆಯೊಬ್ಬರು ಜಿಲ್ಲಾಧಿಕಾರಿ ಬಳಿ ಬಂದು ಕಣ್ಣೀರು ಹಾಕಿದರು.

'ಅಳಬೇಡಿ, ನಿಮ್ಮ ನೋವು ಕೇಳಲೆಂದೇ ನಾವಿಲ್ಲಿಗೆ ಬಂದಿದ್ದೇವೆ. ನಿಮ್ಮ ಪುತ್ರನ ನಂಬರ್ ನೀಡಿ, ತಾವೇ ಖುದ್ದು ಅವರ ಜೊತೆಗೆ ಮಾತನಾಡಿ, ದಾಖಲಾತಿಯ ವಿವರ ಪಡೆದು, ಮಾಸಾಶನ ಮಂಜೂರಾತಿ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಧೈರ್ಯ ತುಂಬಿದರು.

‘ಆಧಾರ್ ಕಾರ್ಡ್‌ನಲ್ಲಿ ವೃದ್ದೆಯ ಪುತ್ರನ ಮೊಬೈಲ್ ನಂಬರ್ ಲಿಂಕ್ ಮಾಡಿ ಕೂಡಲೇ ಅವರಿಗೆ ಮಾಸಾಶನ ಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕ್ಯಾನ್ಸರ್ ರೋಗಿಯ ಅಳಲು ಆಲಿಸಿದ ಜಿಲ್ಲಾಧಿಕಾರಿ: ‘ನಾನು ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿರುವ ನನಗೆ ಏನಾದರೂ ಪರಿಹಾರ ಕೊಡಬೇಕು’ ಎಂದು ಖೇಡದ ವಿನೋದ ತಮಶೆಟ್ಟಿ ಮನವಿ ಮಾಡಿದರು.

‘ವೈದ್ಯಾಧಿಕಾರಿಯೊಂದಿಗೆ ಚರ್ಚಿಸಿ ನಿಮ್ಮ ಪತ್ನಿಗೆ ಅಂಗನವಾಡಿನಲ್ಲಿ ಕೆಲಸ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು’ ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.