ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಮನೆಗಳು ಭಾಗಶಃ ಕುಸಿತ, ಅಪಾರ ಬೆಳೆ ನಷ್ಟ

ಜಿಲ್ಲೆಯಲ್ಲಿ 12 ಕಿರು ಸೇತುವೆಗಳು ಮುಳುಗಡೆ
Last Updated 14 ಅಕ್ಟೋಬರ್ 2020, 18:01 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಸುರಿದ ಭಾರಿ ಮಳೆಗೆ ಮಾಂಜ್ರಾ ನದಿ ಮತ್ತು ದೇವಣಿ ನದಿಗಳು ತುಂಬಿ ಹರಿಯುತ್ತಿವೆ. 12 ಕಿರು ಸೇತುವೆಗಳು ಮುಳುಗಡೆಯಾಗಿವೆ. ಹುಮನಾಬಾದ್‌ ತಾಲ್ಲೂಕಿನಲ್ಲಿ 30 ಹಾಗೂ ಬೀದರ್ ತಾಲ್ಲೂಕಿನ ಬಾವಗಿಯಲ್ಲಿ ಎರಡು ಮನೆಗಳು ಭಾಗಶಃ ಕುಸಿದಿವೆ. ಜಿಲ್ಲೆಯ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ನೀರು ಪಾಲಾಗಿದೆ.

ಹುಮನಾಬಾದ್‌ ತಾಲ್ಲೂಕಿನ ಜಲಸಂಘ್ವಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮಳೆಯ ಅಬ್ಬರಕ್ಕೆ 30 ಮನೆಗಳು ಭಾಗಶಃ ಕುಸಿದಿವೆ. ಹುಮನಾಬಾದ್‍– ಮಾಣಿಕನಗರ ಮಾರ್ಗದಲ್ಲಿರುವ ಸೇತುವೆ, ಗಡವಂತಿಯಿಂದ ಆರ್‌ಟಿಒ ಕಚೇರಿಗೆ ಹೋಗುವ ಕಿರು ಸೇತುವೆ, ಬೋತಗಿ–ಅಲ್ಲೂರು ಸೇತುವೆ, ನಿಂಬೂರು–ಅಲ್ಲೂರು ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಾರಿಗೆ ಸಂಪರ್ಕ ಕಡಿತಗೊಂಡಿದೆ.
ಹುಮನಾಬಾದ್‌ ತಾಲ್ಲೂಕಿನ ಚಂದನಹಳ್ಳಿ, ಘಾಟಬೋರಾಳ, ದುಬಲಗುಂಡಿ, ಹಳ್ಳಿಖೇಡ(ಬಿ), ಮದರಗಾಂವ್, ಅಲ್ಲೂರು. ನಿಂಬೂರು, ಬೋತಗಿ, ಹುಡಗಿ, ಜಲಸಂಘ್ವಿ, ಕನಕಟ್ಟಾ, ಸೀತಾಳಗೇರಾ, ಹಿಲಾಲಪುರ ಗ್ರಾಮದಲ್ಲಿ ಕಬ್ಬು ನೀರು ಪಾಲಾಗಿದೆ.

ಬಸವಕಲ್ಯಾಣ ತಾಲ್ಲೂಕಿನ ಚುಳಕಿನಾಲಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ನಾಲ್ಕು ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಹೊರಗೆ ಬಿಡಲಾಗುತ್ತಿದೆ. ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯ, ತ್ರಿಪುರಾಂತ, ಶಿವಪುರದ ದೊಡ್ಡ ಕೆರೆಗಳು ತುಂಬಿವೆ.
ಚುಳಕಿನಾಲಾ ಜಲಾಶಯದ ನೀರು ಮುಚಳಂಬ, ಬೇಲೂರ, ಗೋರಟಾ(ಬಿ), ಧನ್ನೂರ ಗ್ರಾಮಗಳ ವ್ಯಾಪ್ತಿಯ ಹೊಲಗಳಿಗೆ ನುಗ್ಗಿ ಅಪಾರ ಬೆಳೆ ಹಾನಿಯಾದರೆ, ಗಂಡೂರಿನಾಲೆಯ ನೀರು ಖೇರ್ಡಾ(ಕೆ), ಶಿರಗಾಪುರ, ಸರಜವಳಗಾ, ಕೊಹಿನೂರವಾಡಿ ವ್ಯಾಪ್ತಿಯಲ್ಲಿರುವ ಹೊಲಗಳಿಗೆ ನುಗ್ಗಿ ಬೆಳೆ ಕೊಚ್ಚಿಕೊಂಡು ಹೋಗಿದೆ.
ಬೆಣ್ಣೆತೊರಾ ನದಿಗೆ ಹೆಚ್ಚಿನ ನೀರು ಬಂದು ಹತ್ತರ್ಗಾ, ಚಿತ್ತಕೋಟಾ, ಗಿಲಗಿಲಿ ಪರಿಸರದ ಹೊಲಗಳಿಗೆ ನೀರು ನುಗ್ಗಿದೆ. ಹತ್ತರ್ಗಾ ಗ್ರಾಮದಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ. ಗೋರಟಾ(ಬಿ)ದ ಭೀಮನಗರದ ಹಳ್ಳದ ದಂಡೆಯಲ್ಲಿರುವ ಮನೆಗಳು ಜಲಾವೃತಗೊಂಡಿವೆ.
* * *
ಕಮಲನಗರ ತಾಲ್ಲೂಕಿನಲ್ಲಿ ಮಾಂಜ್ರಾ ನದಿ ಮತ್ತು ದೇವಣಿ ನದಿಗಳು ತುಂಬಿ ಹರಿಯುತ್ತಿವೆ. ಬಾಳೂರ(ಕೆ), ಸೋನಾಳ್, ಹೊಳಸಮುದ್ರ-ಹುಲಸೂರ, ಸಂಗಮ-ಖೇಡ, ಕಮಲನಗರ-ಔರಾದ್, ತೋರಣಾ–ಮುಧೋಳ, ಬಳತ (ಕೆ )–ಬೇಡಕುಂದ ಸೇತುವೆಗಳು ಮುಳುಗಿವೆ.
ಭಾಲ್ಕಿ ತಾಲ್ಲೂಕಿನಲ್ಲಿ ಕಾರಂಜಾ ನದಿಗೆ ಪ್ರವಾಹ ಬಂದು ಆನಂದವಾಡಿ, ಇಂಚೂರ್, ದಾಡಗಿ ಸೇತುವೆ ಮುಳುಗಿ
ಬುಧವಾರ ಸಂಜೆವರೆಗೂ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಹಲಬರ್ಗಾದಲ್ಲಿ ಹಳ್ಳದ ನೀರು ಮನೆಗಳಿಗೆ ನುಗ್ಗಿ ಆತಂಕ ಸೃಷ್ಟಿಸಿತು. ಮಳೆಗೆ ಬೀದರ್‌ ತಾಲ್ಲೂಕಿನಲ್ಲಿ ಕಬ್ಬು, ಸೋಯಾಬೀನ್‌, ತೊಗರಿ ಬೆಳೆ ನೆಲಕ್ಕುರಳಿವೆ.
ಬೀದರ್‌ ತಾಲ್ಲೂಕಿನ ಚಿಮಕೋಡ, ಬಾವಗಿ ಕೆರೆ ತುಂಬಿವೆ. ಜನವಾಡ, ಮಾಳೆಗಾಂವ ಹಾಗೂ ಕಮಠಾಣಾ ಹೋಬಳಿಯಲ್ಲಿ ಕಬ್ಬು, ಸೋಯಾಬೀನ್‌ ಬೆಳೆ ಹಾಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT