ಶನಿವಾರ, ಜನವರಿ 28, 2023
18 °C
ಮಹಿಳೆಯರ ಗರ್ಭಾ ನೃತ್ಯ ಕಾರ್ಯಕ್ರಮ ಇಂದು

50 ಅಡಿ ರಾವಣ ದಹನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ಅಕ್ಟೋಬರ್‌ 4 ಹಾಗೂ 5 ರಂದು ನಗರದ ರೋಟರಿ ವೃತ್ತ ಸಮೀಪದ ಸಾಯಿ ಆದರ್ಶ ಶಾಲೆಯ ಮೈದಾನದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

4 ರಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಹೆಣ್ಣು ಮಕ್ಕಳಿಗಾಗಿ ಉಚಿತ ಗರ್ಭಾ ನೃತ್ಯ ಕಾರ್ಯಕ್ರಮ ನಡೆಯಲಿದೆ. 5 ರಂದು ಸಂಜೆ 6ರಿಂದ ರಾತ್ರಿ 10 ಗಂಟೆ ವರೆಗೆ ನಾಟ್ಯಶ್ರೀ ನೃತ್ಯಾಲಯದ ಬಾಲಕಿಯರು ಶ್ರೀ ರಾಮಲೀಲಾ ನೃತ್ಯ ರೂಪಕ ಪ್ರದರ್ಶಿಸಲಿದ್ದಾರೆ. ನಂತರ ರಾವಣ ದಹನ ಕಾರ್ಯಕ್ರಮ ನಡೆಯಲಿದೆ.

‘ನಗರದಲ್ಲಿ ಬಹಳಷ್ಟು ಜನರಿಗೆ ರಾಸ ಗರ್ಭಾ ನೃತ್ಯ ಹಾಗೂ ಡಿಸ್ಕೊ ದಾಂಡಿಯಾ ನಡುವಿನ ವ್ಯತ್ಯಾಸ ಗೊತ್ತಿಲ್ಲ. ನಗರದ ಝೀರಾ ಫಂಕ್ಷನ್‌ ಹಾಲ್‌ ಹಾಗೂ ಜ್ಯೋತಿ ಕಾಲೊನಿಯ ಉದ್ಯಾನದಲ್ಲಿ ಅಸಹ್ಯವಾದ ಡಿಸ್ಕೊ ಹಾಡಿಗೆ ಕುಣಿದಿದ್ದಾರೆ. ದೇವಿಗೆ ಭಕ್ತಿ ಸಮರ್ಪಿಸುವ ಅಥವಾ ದೇವರಿಗೆ ನಮಿಸುವ ನೃತ್ಯಗಳು ಅಲ್ಲಿ ನಡೆದಿಲ್ಲ’ ಎಂದು ಶ್ರೀ ರಾಮಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಈಶ್ವರಸಿಂಗ್ ಠಾಕೂರ್ ಬೇಸರ ವ್ಯಕ್ತಪಡಿಸಿದ್ದಾರೆ.

 ‘ಗರ್ಭಾ ಇದು ಗುಜರಾತಿ ಮೂಲದ ಸಾಂಪ್ರದಾಯಿಕ ನೃತ್ಯ. ದೇವಿ ಪ್ರತಿಷ್ಠಾಪನೆ ಮಾಡಿ ಒಂಬತ್ತು ದಿನ ದೇವರ ಎದುರು ಭಕ್ತಿಭಾವದಿಂದ ಆರತಿ ಬೆಳಗಿ ನೃತ್ಯ ಮಾಡಿ ದೇವಿಯನ್ನು ಸಂತಸ ಪಡಿಸಬೇಕು. ಅ.4ರಂದು ಹೈದರಾಬಾದ್‌ನ ತಂಡ ಗರ್ಭಾ ನೃತ್ಯದ ವೈಶಿಷ್ಟ್ಯ ಹಾಗೂ ಮಹತ್ವ ಕುರಿತು ತಿಳಿವಳಿಕೆ ನೀಡಲಿದೆ. ಅದಕ್ಕಾಗಿ ಮಹಿಳೆಯರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದ್ದಾರೆ.

‘ನಗರದಲ್ಲಿ ಅಲ್ಲಲ್ಲಿ ಕೆಲವರು ಒಂದೊಂದು ದಿನ ಡಿಸ್ಕೊ ದಾಂಡಿಯಾ ಆಯೋಜಿಸಿ ಮುಗ್ಧ ಜನರಿಂದ ಹಣ ಪಡೆದಿದ್ದಾರೆ. ಧರ್ಮದ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸಿ ಹಣ ವಸೂಲಿ ಮಾಡಿರುವುದು ಖಂಡನೀಯ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧಗಾದದ್ದು’ ಎಂದು ತಿಳಿಸಿದ್ದಾರೆ.

 ‘ಕಲಾವಿದ ಮನಿಷ್‌ ನಾಗವಂಶಿ ಅವರು ದಶಾವತಾರಿ ರಾವಣನ ಮುಖವಾಡ ಸಿದ್ಧಪಡಿಸಿದ್ದಾರೆ. ಒಟ್ಟು 50 ಅಡಿ ಎತ್ತರದ ರಾವಣನ ಪ್ರತಿಕೃತಿ ಸಿದ್ಧವಾಗಿದೆ’ ಎಂದು ಶ್ರೀ ರಾಮಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಗಾದಾ ಹಾಗೂ ಪ್ರಧಾನ ಕಾರ್ಯದರ್ಶಿ ಮಹೇಶ್ವರ ಸ್ವಾಮಿ ತಿಳಿಸಿದ್ದಾರೆ.

‘ಈಗಾಗಲೇ ಸಾಯಿ ಆದರ್ಶ ಶಾಲೆಯ ಮೈದಾನದ ಸುತ್ತ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಗರ್ಭಾ ನೃತ್ಯ ಕಾರ್ಯಕ್ರಮಕ್ಕೆ ಮೆರುಗು ತುಂಬಲು ಆಕರ್ಷಕ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಸಾಂಪ್ರಾದಾಯಿಕ ಉಡುಪಿನಲ್ಲಿ ಬರುವವರಿಗೆ ಮಾತ್ರ ಇಲ್ಲಿ ಅವಕಾಶ ಇರಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

 * * *

ದುರ್ಗಾಷ್ಟಮಿ: ವಿಶೇಷ ಪೂಜೆ

ನಗರದ ದೇವಿ ಮಂದಿರಗಳಲ್ಲಿ ದುರ್ಗಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಹೋಮ– ಹವನಗಳು ನಡೆದವು. ಮಹಿಳೆಯರು ದೇವಿಗೆ ಸಾಮೂಹಿಕ ಪೂಜೆ ಸಲ್ಲಿಸಿ ಆರತಿ ಬೆಳಗಿದರು.

ಮಂಗಲಪೇಟೆಯ ಭವಾನಿ ದೇವಿ ಮಂದಿರ, ವಿದ್ಯಾನಗರದ ವೈಷ್ಣವಿದೇವಿ ಮಂದಿರ, ಜನರಲ್‌ ಕಾರ್ಯಪ್ಪ ವೃತ್ತ ಸಮೀಪದ ಭವಾನಿ ಮಂದಿರ, ಕೇಂದ್ರ ಬಸ್‌ ನಿಲ್ದಾಣ ಸಮೀಪದ ದೇವಿ ಮಂದಿರ, ಓಲ್ಡ್‌ಸಿಟಿ ದರ್ಜಿ ಗಲ್ಲಿ, ಪ್ರತಾಪನಗರ, ಕುಂಬಾರವಾಡಾ, ಲಾಡಗೇರಿ, ಹಳ್ಳದಕೇರಿ, ಒಳಕೋಟೆ, ಚೌಬಾರಾ, ತಳಘಾಟ್‌, ಅಗ್ರಹಾರ, ಚಿದ್ರಿ ರಸ್ತೆಯಲ್ಲಿರುವ ದುರ್ಗಾದೇವಿ ಮಂದಿರದಲ್ಲಿ ಪೂಜೆ ನಡೆಯಿತು.

ಬಟ್ಟೆ, ಹೂವು, ಕಬ್ಬು ಖರೀದಿ

ಬೀದರ್‌: ಆಯುಧ ಪೂಜೆ ಹಾಗೂ ವಿಜಯ ದಶಮಿ ಪ್ರಯುಕ್ತ ನಗರದಲ್ಲಿ ಬಟ್ಟೆ, ದಿನಸಿ, ತರಕಾರಿ, ಕಬ್ಬು, ಬಾಳೆದಿಂಡು, ಹಣ್ಣು-ಹಂಪಲು ಖರೀದಿ ಭರ್ಜರಿಯಾಗಿ ನಡೆಯಿತು.

ಬಟ್ಟೆ ಅಂಗಡಿಗಳು ಬೆಳಿಗ್ಗೆಯಿಂದಲೇ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಸಂಜೆ ವೇಳೆಗೆ ಗ್ರಾಹಕರು ಸಲೀಸಾಗಿ ನಡೆದು ಹೋಗಲು ಸಹ ಸಾಧ್ಯವಾಗದಷ್ಟು ಮಾರುಕಟ್ಟೆ ಗ್ರಾಹಕರಿಂದ ತುಂಬಿಕೊಂಡಿತ್ತು. ಮಂಗಳವಾರ ಆಯುಧ ಪೂಜೆ ಇರುವ ಕಾರಣಕ್ಕಾಗಿ ಬಾಳೆದಿಂಡು, ಜೋಡು ಕಬ್ಬು, ಹೂವು, ಕುಂಬಳ, ನಾನಾ ಹಣ್ಣುಗಳು, ಪೂಜಾ ಸಾಮಗ್ರಿ ಖರೀದಿಗೆ ಜನ ಮುಗಿಬಿದ್ದಿದ್ದರು.

ನಗರದ ಅಂಬೇಡ್ಕರ್ ವೃತ್ತ, ಭಗತ್‌ಸಿಂಗ್‌ ವೃತ್ತ, ನೌಬಾದ್‌ ಬಸವೇಶ್ವರ ವೃತ್ತ, ಮೈಲೂರು ಕ್ರಾಸ್‌ ಹಾಗೂ ಹಾರೂರಗೇರಿ ಕ್ರಾಸ್‌ನಲ್ಲಿ ಖರೀದಿ ಭರಾಟೆ ಕಂಡು ಬಂದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.