ಬುಧವಾರ, ಜನವರಿ 27, 2021
21 °C
ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯಿತಿ ಸದಸ್ಯರ ಗಂಭೀರ ಚರ್ಚೆ

ಬಾಕಿ ಉಳಿದ ಅನುದಾನ ಬಳಕೆಗೆ ಕ್ರಿಯಾ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲಾ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅವಧಿ ಕೇವಲ ನಾಲ್ಕು ತಿಂಗಳು ಮಾತ್ರ ಉಳಿದಿರುವ ಕಾರಣ ನಿರ್ಮಲಾ ಮಾನೆಗೋಪಾಳೆ ಅಧ್ಯಕ್ಷತೆಯ ಮೊದಲ ಸಾಮಾನ್ಯ ಸಭೆ ಗುರುವಾರ ಇಲ್ಲಿ ಗಂಭೀರವಾಗಿಯೇ ನಡೆಯಿತು.

ಸಭೆ ಒಂದು ತಾಸು ವಿಳಂಬವಾದರೂ ಆರಂಭದಿಂದ ಕೊನೆಯ ವರೆಗೂ ಒಂದಿಷ್ಟು ಸಮಯ ವ್ಯರ್ಥ ಮಾಡದಂತೆ ಹಲವು ವಿಷಯಗಳ ಕುರಿತು ಗಂಭೀರ ಚರ್ಚೆಗಳು ನಡೆದವು. ಟೀಕೆ, ಟಿಪ್ಪಣೆಗಳಲ್ಲೇ ನಾಲ್ಕೂವರೆ ವರ್ಷ ಕಳೆದು ಹೋಗಿದೆ. ಕೋವಿಡ್‌ ಕಾರಣದಿಂದ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದ ಅನುದಾನ ಬಳಸಿಕೊಂಡು ಸಾಧ್ಯವಿರುವಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡೋಣ ಎಂದು ಸದಸ್ಯರು ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಮಾತನಾಡಿ, ‘ಯಾವ ಯಾವ ಇಲಾಖೆಗಳಲ್ಲಿ ಯಾವ ಯೋಜನೆಗಳ ಅಡಿಯಲ್ಲಿ ಎಷ್ಟು ಹಣ ಉಳಿದುಕೊಂಡಿದೆ ಎನ್ನುವ ಬಗ್ಗೆ ಅಧಿಕಾರಿಗಳಿಂದ ಮೊದಲು ಮಾಹಿತಿ ಪಡೆದುಕೊಳ್ಳೋಣ. ಎಲ್ಲವನ್ನೂ ಕ್ರೋಡೀಕರಿಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಹಂಚಿಕೆ ಮಾಡೋಣ. ಇದರಿಂದ ಸದಸ್ಯರ ಕ್ಷೇತ್ರಗಳಲ್ಲಿ ತುರ್ತು ಅಗತ್ಯವಿರುವ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿದೆ’ ಎಂದರು.

ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ‘2014–2015ಲ್ಲಿಯೇ ಬೀದರ್‌ ತಾಲ್ಲೂಕಿನಲ್ಲಿ ₹ 11.87 ಕೋಟಿ, ಔರಾದ್‌ನಲ್ಲಿ ₹16.54 ಕೋಟಿ, ಬಸವಕಲ್ಯಾಣದಲ್ಲಿ ₹17 ಕೋಟಿ ಹಾಗೂ ಹುಮನಾಬಾದ್‌ ತಾಲ್ಲೂಕಿನಲ್ಲಿ ₹ 1 ಕೋಟಿ ಅನುದಾನ ಬಳಕೆಯಾಗದೇ ಉಳಿದುಕೊಂಡಿದೆ. ಅದರ ಸದ್ಬಳಕೆಗೆ ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಮನವಿ ಮಾಡಿದರು.

ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಮಾತನಾಡಿ, ‘ಬಿಆರ್‌ಜಿಎಫ್‌ನಲ್ಲಿ ₹ 1 ಕೋಟಿ, ಸಣ್ಣ ನೀರಾವರಿ ಇಲಾಖೆಯಲ್ಲಿ ₹ 1.40 ಕೋಟಿ, 13ನೇ ಹಣಕಾಸು ಯೋಜನೆಯಲ್ಲಿ ₹ 17 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ಮಂಜೂರಾದ ಅನುದಾನದಲ್ಲಿ ₹ 2.86 ಕೋಟಿ ಬಾಕಿ ಉಳಿದುಕೊಂಡಿದೆ’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಮಾತನಾಡಿ, ‘ಜಿಲ್ಲೆಯಲ್ಲಿ 1,893 ಅಂಗನವಾಡಿ ಕೇಂದ್ರಗಳಿವೆ. 1,236 ಕೇಂದ್ರಗಳು ಸರ್ಕಾರಿ ಕಟ್ಟಡಗಳಲ್ಲಿ ನಡೆದರೆ, ಉಳಿದ ಕೇಂದ್ರಗಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಅನೇಕ ಕಡೆ ಅಂಗನವಾಡಿ ಕೇಂದ್ರಗಳಿಗೆ ಜಾಗ ಸಿಗದ ಕಾರಣ ಕಟ್ಟಡ ನಿರ್ಮಾಣವಾಗಿಲ್ಲ. ಹೀಗಾಗಿ ಅನುದಾನ ಉಳಿದುಕೊಂಡಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘₹2.41 ಕೋಟಿ ವೆಚ್ಚದಲ್ಲಿ ಒಟ್ಟು 12 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಸಾಧ್ಯವಿದೆ. ಒಂದು ಅಂಗನವಾಡಿ ಕೇಂದ್ರಕ್ಕೆ ₹ 7 ಲಕ್ಷ ನಿಗದಿಪಡಿಸಲಾಗಿದೆ. ಇಷ್ಟು ಕಡಿಮೆ ಮೊತ್ತದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ ₹ 18 ಲಕ್ಷವಾದರೂ ಬೇಕು. ಉಳಿದ ಹಣವನ್ನು ಕೆಕೆಆರ್‌ಡಿಬಿಯಿಂದ ಪಡೆಯಬಹುದು. ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಬೇರೆ ಇಲಾಖೆಗಳಿಂದ ಮಾಡಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಸದಸ್ಯ ರಾಜಶೇಖರ ಬಸವಣ್ಣಪ್ಪ ಮಾತನಾಡಿ, ‘ಅಂಗನವಾಡಿ ಕೇಂದ್ರಕ್ಕೆ ಜಾಗ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರಕ್ಕೆ ಜಾಗ ಮಂಜೂರು ಮಾಡಿ ಐದು ವರ್ಷಗಳಾಗಿವೆ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಕಡತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿ ಇದೆ ಎಂದು ಉಲ್ಲೇಖಿಸಿದ್ದಾರೆ. ಪ್ರಗತಿಯಲ್ಲಿ ಇದೆ ಅಂದರೆ ಒಂದು ಕಾಮಗಾರಿಯನ್ನು ಎಷ್ಟು ವರ್ಷಗಳ ವರೆಗೆ ಎಳೆಯಬಹುದು’ ಎಂದು ಪ್ರಶ್ನಿಸಿದರು.

ಕೆಆರ್‌ಡಿಎಲ್‌ ಅಧಿಕಾರಿ ರಘು ಮಾತನಾಡಿ, ’ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಉತ್ತರಿಸಿದಾಗ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಐದು ವರ್ಷಗಳಿಂದ ನಡೆದಿರುವ ಕಾಮಗಾರಿಯನ್ನೇ ಮುಗಿಸಿಲ್ಲ. ನಿಮ್ಮಂಥ ಅಧಿಕಾರಿಗಳಿಂದಾಗಿ ಚುನಾಯಿತ ಪ್ರತಿನಿಧಿಗಳು ಮುಜುಗರಕ್ಕೆ ಒಳಗಾಗಬೇಕಾಗಿದೆ’ ಎಂದು ಇಲ್ಲಿ ಬೇಸರ ವ್ಯಕ್ತಪಡಿಸಿದರು.

‘ಅನೇಕ ಅಂಗನವಾಡಿ ಕೇಂದ್ರಗಳ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕೆಆರ್‌ಡಿಎಲ್‌ ಕಾಮಗಾರಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಇಲ್ಲ. ಅನುದಾನ ಬಳಸಿಕೊಳ್ಳಲು ಯೋಜನೆ ರೂಪಿಸಬೇಕಿದೆ’ ಎಂದು ಸಿಇಒ ಹೇಳಿದರು.

ಸಣ್ಣ ನೀರಾವರಿ ಇಲಾಖೆಯಲ್ಲಿ ₹ 1.39 ಕೋಟಿ ಉಳಿದಿದೆ. ಔರಾದ್, ಭಾಲ್ಕಿ ಹಾಗೂ ಕಮಲನಗರ ತಾಲ್ಲೂಕಿನ ಕೆರೆಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. ಈ ಅನುದಾನವನ್ನು ಬಳಸಬೇಕು ಎಂದು ಸದಸ್ಯರು ಮನವಿ ಮಾಡಿದರು.

ಶಾಸಕರ ಒಪ್ಪಿಗೆ ಇಲ್ಲದೆ ನಿರ್ದಿಷ್ಟ ಕೆರೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗದು. ಜಿಲ್ಲಾ ಪಂಚಾಯಿತಿ ಅನುಮೋದನೆ ಪಡೆದರೂ ಶಾಸಕರ ಒಪ್ಪಿಗೆ ಬೇಕು. ಇದೇ ಕಾರಣಕ್ಕೆ ಅನುದಾನ ಖರ್ಚಾಗಿಲ್ಲ ಎಂದು ಅನುಷ್ಠಾನ ಅಧಿಕಾರಿಗಳು ತಿಳಿಸಿದರು.

‘ಯಾವ ಯಾವ ಕೆರೆ ಪುನಶ್ಚೇತನಗೊಳಿಸಬೇಕು ಎನ್ನುವ ಕುರಿತು ಸಾಮಾನ್ಯ ಸಭೆಯಲ್ಲಿ ಗೊತ್ತುವಳಿ ಸ್ವೀಕರಿಸಬೇಕು. ಗೊತ್ತುವಳಿ ಪ್ರತಿಯನ್ನು ಶಾಸಕರಿಗೂ ಕಳಿಸಿಕೊಡಬೇಕು’ ಎಂದು ಗಂಗ್ವಾರ್ ಸಲಹೆ ನೀಡಿದರು.

₹ 29 ಕೋಟಿ ಅನುದಾನಕ್ಕೆ ಮನವಿ
ಬೀದರ್‌:
‘ಒಂದು ವರ್ಷದ ಅವಧಿಯಲ್ಲಿ ಕೋವಿಡ್ ಕಾರಣ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ ವಾಗುವಂತೆ ₹ 29 ಕೋಟಿ ಕೊಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ತಿಳಿಸಿದರು.

ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಆಸ್ಪತ್ರೆಯನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಮನವಿ ಮಾಡಲಾಗಿದೆ. ಇದರಿಂದ 40 ಹಳ್ಳಿಗಳಿಗೆ ಅನುಕೂಲವಾಗಲಿದೆ. ಗ್ರಾಮಸ್ಥರು ವೈದ್ಯಕೀಯ ಚಿಕಿತ್ಸೆ ಪಡೆಯಲು ಮಹಾರಾಷ್ಟ್ರಕ್ಕೆ ಹೋಗುವುದು ತಪ್ಪಲಿದೆ’ ಎಂದು ಹೇಳಿದರು.

ಬಳಕೆಯಾಗದ ₹ 6.12 ಕೋಟಿ ಅನುದಾನ
ಬೀದರ್‌:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ₹ 2.86 ಕೋಟಿ, ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿ (ಬಿಆರ್‌ಜಿಎಫ್‌) ಯಲ್ಲಿ ₹ 1 ಕೋಟಿ, ಸಣ್ಣ ನೀರಾವರಿ ಇಲಾಖೆಯಲ್ಲಿ ₹ 1.40 ಕೋಟಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆಯಲ್ಲಿ ₹ 24 ಲಕ್ಷ ಸೇರಿ ವಿವಿಧ ಯೋಜನೆಗಳಲ್ಲಿ ಒಟ್ಟು ₹ 6.12 ಕೋಟಿ ಅನುದಾನ ಬಳಕೆಯಾಗದೆ ಉಳಿದುಕೊಂಡಿದೆ. ನಿರಂತರವಾಗಿ ನಡೆಯುವ ಯೋಜನೆಗಳಿಗೆ ಬಿಡುಗಡೆಯಾಗುವ ಅನುದಾನ ಬಳಸಲು ಸಮಸ್ಯೆ ಇಲ್ಲ. ಆದರೆ, ಜಿಲ್ಲಾ ಪಂಚಾಯಿತಿಯಿಂದ ನೇರವಾಗಿಯೇ ಬಳಸಬಹುದಾದ ಅನುದಾನ ಬಳಸದಿದ್ದರೆ ಮರಳಿ ಹೋಗಲಿದೆ. ಮಾರ್ಚ್‌ ವರೆಗೂ ಕಾಯದೆ ಜನವರಿಯಲ್ಲೇ ಅನುದಾನ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು ಎಂದು ಸದಸ್ಯರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರ ಕಚೇರಿ ಪೂಜೆ
ಬೀದರ್‌:
ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷೆ ನಿರ್ಮಲಾ ‌‌‌‌‌ ಮಾನೆಗೋಪಾಳೆ ಹಾಗೂ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಅವರ ಕಚೇರಿ ಪೂಜೆ ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡದಲ್ಲಿ ಗುರುವಾರ ನಡೆಯಿತು.

ಪೂಜೆ ಪ್ರಯುಕ್ತ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪೆಂಡಾಲ್ ಹಾಕಲಾಗಿತ್ತು. ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಕಚೇರಿ ಪೂಜೆ ನಡೆಯಿತು. ನಿರಗುಡಿಯ ಡೊಳ್ಳಿನ ತಂಡದವರು ಡೊಳ್ಳು ಬಾರಿಸಿದರು.

ಜಿಲ್ಲಾ ಪಂಚಾಯಿತಿ ಸಭೆಯ ಆರಂಭದಲ್ಲಿ ಬಸವಕಲ್ಯಾಣ ಶಾಸಕರಾಗಿದ್ದ ದಿವಂಗತ ಬಿ.ನಾರಾಯಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಅವರನ್ನು ಸನ್ಮಾನಿಸಲಾಯಿತು.

ಹುಲಸೂರು ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷ ಸಿದ್ದರಾಮಪ್ಪ ವೀರಶೆಟ್ಟರ್ ಹಾಗೂ ಕಮಲನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬೀರಪ್ಪ ಗುಂಡಪ್ಪ ಅವರನ್ನು ಸಹ ಸನ್ಮಾನಿಸಲಾಯಿತು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು