ಬುಧವಾರ, ಮಾರ್ಚ್ 22, 2023
19 °C
ಎಚ್‌ಆರ್‌ಎಸ್ ಮುಖಂಡ ಹೇಳಿಕೆ

ಹಳೆಯ ಸರ್ಕಾರಿ ಶಾಲೆ ದತ್ತು: ಮೊಹಮ್ಮದ್‌ ಸೋಯೊಬೋದ್ದಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಓಲ್ಡ್‌ಸಿಟಿಯ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿದ್ದೇವೆ’
ಎಂದು ಎಚ್‌ಆರ್‌ಎಸ್ ಮುಖಂಡ ಮೊಹಮ್ಮದ್‌ ಸೋಯೊಬೋದ್ದಿನ್ ಹೇಳಿದರು.

ನಗರದ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಹುಮ್ಯಾನಿಟೇರಿಯನ್‌ ರಿಲೀಫ್ ಸೊಸೈಟಿ (ಎಚ್‌ಆರ್‌ಎಸ್) ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೆಹಲಿ ಸರ್ಕಾರಿ ಶಾಲೆಯ ಮಾದರಿಯಲ್ಲಿ ಶಾಲೆಯನ್ನು ಹೈಟೆಕ್‌ಗೊಳಿಸಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ಆರಂಭಿಸಿದ್ದೇವೆ’ ಎಂದು ತಿಳಿಸಿದರು.

‘ಬೀದರ್‌ ಕೋಟೆಯ ಕೂಗಳತೆಯಲ್ಲಿ ಇರುವ 70 ವರ್ಷಗಳ ಹಿಂದಿನ ಶಾಲೆ ಶಿಥಿಲಾವಸ್ಥೆಗೆ ತಲುಪಿದೆ. ಶಾಲೆಯ ಆವರಣ ಕಳೆಗುಂದಿದೆ. ಶಾಲೆಯಲ್ಲಿ ಪದವೀಧರ ಶಿಕ್ಷಕರೇ ಇದ್ದಾರೆ. ಕಟ್ಟಡ ದುಃಸ್ಥಿತಿಯಲ್ಲಿರುವ ಕಾರಣ ಪಾಲಕರು ಶಾಲೆಗೆ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳಿದರು.

‘ಎಚ್‌ಆರ್‌ಎಸ್ ಮೊದಲ ಹಂತದಲ್ಲಿ ಶಾಲೆಯ ಪರಿಸರದಲ್ಲಿ ಇರುವ ಖಾಸಗಿ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನೂ ಗುರುತಿಸಲಿದೆ. ನಂತರ ಯೋಜನೆಯೊಂದನ್ನು ಸಿದ್ಧಪಡಿಸಿ ಶಾಸಕ ರಹೀಂ ಖಾನ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲಿದೆ’ ಎಂದು ತಿಳಿಸಿದರು.

‘ಸಮೀಕ್ಷೆ ಸಂದರ್ಭದಲ್ಲಿ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳ ಮಾಹಿತಿ ಪಡೆಯಲಿದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಶಾಲೆಗೆ ಹೊಸ ರೂಪ ನೀಡುವ ದಿಸೆಯಲ್ಲಿ ಕಾರ್ಯ ನಿರ್ವಹಿಸಲಿದೆ’ ಎಂದು ಹೇಳಿದರು.

‘ಜಿಲ್ಲಾಡಳಿತ, ಶಾಲಾ ಕಟ್ಟಡವನ್ನು ದುರಸ್ತಿಪಡಿಸಿ ಸುಣ್ಣಬಣ್ಣ ಬಳಿದುಕೊಟ್ಟರೆ ಸಾಕು. ಸೊಸೈಟಿ ಅಲ್ಲಿ ಉದ್ಯಾನ ನಿರ್ಮಿಸುವ, ಬಡ ಮಕ್ಕಳಿಗೆ ಅಗತ್ಯ ನೆರವು ಕಲ್ಪಿಸುವ ಕಾರ್ಯವನ್ನು ಮಾಡಲಿದೆ. ಇದಕ್ಕೆ ಸೊಸೈಟಿಯ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ’ ಎಂದರು.

‘ಪತ್ರಿಕೆಗಳು ಇಂದಿಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆ ಹಾಗೂ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿವೆ. ಇದೇ ಕಾರಣಕ್ಕೆ ಎಚ್‌ಆರ್‌ಎಸ್‌ ಇಂದು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

‘ಪತ್ರಿಕೆಗಳು ಪ್ರಾಮಾಣಿಕ ಸೇವೆ ಮುಂದುವರಿಸಿಕೊಂಡು ಬಂದಿರುವ ಕಾರಣ ಸಮಾಜದಲ್ಲಿ ಒಳ್ಳೆಯತನ ನೆಲೆಯೂರಲು ಸಾಧ್ಯವಾಗಿದೆ. ಇಂದು ಅನೇಕ ಮಾಧ್ಯಮಗಳು ಕೇವಲ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಸುದ್ದಿ ಬಿತ್ತರಿಸುತ್ತಿವೆ. ಸಮಾಜೋಪಯೋಗಿ ವಿಷಯಗಳಿಗೆ ಹೆಚ್ಚಿನ ಒತ್ತು ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಎಚ್‌ಆರ್‌ಎಸ್ ಹಿರಿಯ ಸದಸ್ಯ ಮಹಮ್ಮದ್‌ ಜಾಕಿರ್, ಮಹಮ್ಮದ್ ಶಫಿಯೊದ್ದಿನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಪಿ.ನಾಗೇಶ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.