ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಬೆಳ್ಳುಳ್ಳಿ ಬೆಲೆ ಮತ್ತೆ ಗಗನಕ್ಕೆ

ಕುಸಿದ ಬೀನ್ಸ್‌ ಬೆಲೆ, ಹಿಗ್ಗಿದ ಹಿರೇಕಾಯಿ
Last Updated 18 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೀದರ್‌: ಒಂದು ತಿಂಗಳಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಧ್ಯೆ ಬೆಲೆ ಏರಿಳಿತದ ಜುಗಲ್‌ಬಂದಿ ನಡೆಯುತ್ತಿದೆ. ಪ್ರತಿ ಕ್ವಿಂಟಲ್‌ಗೆ ₹ 15 ಸಾವಿರಕ್ಕೆ ಇಳಿದಿದ್ದ ಬೆಳ್ಳುಳ್ಳಿ ಬೆಲೆ ಮತ್ತೆ ₹ 20 ಸಾವಿರಕ್ಕೆ ಜಿಗಿದಿದೆ. ದೀಪಾವಳಿಗೆ ಒಂದು ವಾರ ಮಾತ್ರ ಬಾಕಿ ಇರುವ ಕಾರಣ ಸದ್ಯಕ್ಕೆ ಬೆಳ್ಳುಳ್ಳಿ ಬೆಲೆ ಇಳಿಕೆಯ ಲಕ್ಷಣಗಳು ಕಂಡು ಬರುತ್ತಿಲ್ಲ.

ಎರಡು ವಾರಗಳ ಹಿಂದೆ ಪಾದರಸದಂತೆ ಏರಿದ್ದ ಬೆಳ್ಳುಳ್ಳಿ ಬೆಲೆ ಕಳೆದ ವಾರ ಸ್ವಲ್ಪ ಇಳಿಕೆಯಾಗಿ ಗ್ರಾಹಕರು ಸಮಾಧಾನಪಟ್ಟುಕೊಳ್ಳುವಂತಾಗಿತ್ತು. ಆದರೆ, ಈ ವಾರ ಮತ್ತೆ ಪ್ರತಿ ಕ್ವಿಂಟಲ್‌ಗೆ ₹ 5 ಸಾವಿರ ಹೆಚ್ಚಳವಾಗಿದೆ. ಇದರಿಂದಾಗಿ ಗೃಹಿಣಿಯರು ಆತಂಕ ಪಡುವಂತಾಗಿದೆ.

ಇಲ್ಲಿಯ ಸಗಟು ಮಾರುಕಟ್ಟೆಯಲ್ಲಿ ಕೊತ್ತಂಬರಿ, ಮೆಂತೆ ಹಾಗೂ ಪಾಲಕ್‌ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಹೆಚ್ಚಳವಾಗಿದೆ. ಜನರ ಅಚ್ಚುಮೆಚ್ಚಿನ ಹಿರೇಕಾಯಿ ಹಾಗೂ ಹೂಕೋಸು ಬೆಲೆ ಸಹ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಏರಿಕೆಯಾಗಿದೆ.

ಬೀನ್ಸ್‌ ಸಹಜ ಸ್ಥಿತಿಗೆ ಬಂದಿದ್ದು, ಬೆಲೆ ಪ್ರತಿ ಕ್ವಿಂಟಲ್‌ಗೆ ₹ 4 ಸಾವಿರ ಇಳಿದಿದೆ. ಬದನೆಕಾಯಿ, ಗಜ್ಜರಿ ಬೆಲೆ ₹ 1 ಸಾವಿರ ಹಾಗೂ ಟೊಮೆಟೊ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಕಡಿಮೆಯಾಗಿದೆ.

ಆಲೂಗಡ್ಡೆ, ಹಸಿಮೆಣಸಿನಕಾಯಿ, ಎಲೆಕೋಸು, ತೊಂಡೆಕಾಯಿ, ಬೀಟ್‌ರೂಟ್‌, ಸಬ್ಬಸಗಿ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಂದ ನಗರದ ತರಕಾರಿ ಸಗಟು ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಬರುತ್ತಿಲ್ಲ.

ಹೈದರಾಬಾದ್‌ನಿಂದ ಬೀನ್ಸ್, ಬೀಟ್‌ರೂಟ್‌, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ, ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ, ಉತ್ತರಪ್ರದೇಶದ ಆಗ್ರಾದಿಂದ ಆಲೂಗಡ್ಡೆ ಹಾಗೂ ಟೊಮೆಟೊ ಆವಕವಾಗಿದೆ.

‘ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದಾಗಿ ತರಕಾರಿ ಬೆಳೆ ಹಾನಿಗೀಡಾಗಿದೆ. ಈರುಳ್ಳಿ ಹಾಗೂ ಬೆಳ್ಳುಳ್ಳಿ ಕೊಳೆಯುತ್ತಿರುವ ಕಾರಣ ಅಲ್ಲಿಯ ವ್ಯಾಪಾರಿಗಳು ಇವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಬೇಡಿಕೆ ಇದ್ದರೂ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಪೂರೈಕೆಯಾಗದ ಕಾರಣ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಗಾಂಧಿ ಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT